Advertisement

ರೈತರಿಗೆ ಅವಮಾನ; ಖೂಬಾ ವಜಾಗೆ ಆಗ್ರಹ

01:26 PM Jun 19, 2022 | Team Udayavani |

ಬೀದರ: ರಸಗೊಬ್ಬರ ಕೇಳಿದ ರೈತನೊಂದಿಗೆ ಉಡಾಫೆಯಾಗಿ ಮಾತನಾಡುವ ಮೂಲಕ ಕೇಂದ್ರ ರಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಭಗವಂತ ಖೂಬಾ ಅವರು ಅಹಂಕಾರ, ದರ್ಪ ತೋರಿ ದೇಶದ ಕೃಷಿಕರಿಗೆ ಅವಮಾನ ಮಾಡಿದ್ದಾರೆ. ರೈತರಿಗೆ ಬಹಿರಂಗವಾಗಿ ಖೂಬಾ ಕ್ಷಮೆ ಕೇಳಬೇಕು. ನಿರ್ಲಕ್ಷ ಮಾಡಿದರೆ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಶಾಸಕ ಈಶ್ವರ ಖಂಡ್ರೆ ಒತ್ತಾಯಿಸಿದರು.

Advertisement

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವರಿಗೆ ಕರೆ ಮಾಡಿರುವ ವ್ಯಕ್ತಿ ರೈತನಲ್ಲ, ಶಿಕ್ಷಕ ಎಂದು ಟೀಕೆ ಮಾಡುತ್ತಿರುವುದು ಸರಿಯಲ್ಲ. ಒಬ್ಬ ಶಿಕ್ಷಕರಾಗಿ ಕೃಷಿ ಚಟುವಟಿಕೆಗೆ ಗೊಬ್ಬರ ಬೇಕಾಗುವುದಿಲ್ಲವೇ? ಸಮರ್ಪಕ ಉತ್ತರ ನೀಡುವುದನ್ನು ಬಿಟ್ಟು ಏಕ ವಚನದಲ್ಲಿ ಮಾತನಾಡಿ, ರೈತ ಸಮೂಹಕ್ಕೆ ಅವಮಾನಿಸಿದ್ದಾರೆ. ಅಷ್ಟೇ ಅಲ್ಲ ಆಗಿರುವ ತಪ್ಪನ್ನು ಸಮರ್ಥನೆ ಮಾಡಿಕೊಳ್ಳುವುದು, ಇದರ ಹಿಂದೆ ರಾಜಕೀಯ ಷಡ್ಯಂತ್ರ ಇದೆ ಎನ್ನುವುದು ಸರಿಯಲ್ಲ ಎಂದು ಕಿಡಿಕಾರಿದರು.

ಬೀದರ ಜಿಲ್ಲೆ ಸೇರಿ ದೇಶಾದ್ಯಂತ ರಸಗೊಬ್ಬರದ ಅಭಾವ ಸೃಷ್ಟಿಯಾಗಿದೆ. ಜಿಲ್ಲೆಯಲ್ಲಿ 25,015 ಮೆ.ಟನ್‌ ಗೊಬ್ಬರ ಬೇಡಿಕೆಯಲ್ಲಿ ಕೇವಲ 8377 ಮೆ.ಟನ್‌ ಪೂರೈಕೆ ಮಾಡಲಾಗಿದೆ. ಇದು ನಾನು ಹೇಳಿದ್ದು ಅಲ್ಲ. ಸ್ವತಃ ಡಿಸಿಸಿ ಬ್ಯಾಂಕ್‌ನವರು ಹೇಳಿಕೆ ನೀಡಿದ್ದಾರೆ. ಅಂದರೆ ಶೇ.63ರಷ್ಟು ರೊಸಗೊಬ್ಬರ ಕೊರತೆ ಜಿಲ್ಲೆಯಲ್ಲಿದೆ. ಇತಿಹಾಸದಲ್ಲೇ ಇಂಥ ಕೆಟ್ಟ ಸ್ಥಿತಿ ಬಂದಿರಲಿಲ್ಲ. ತವರು ಕ್ಷೇತ್ರಕ್ಕೆ ಸಮರ್ಪಕ ಗೊಬ್ಬರ ಪೂರೈಸದ ಸಚಿವರು ಇನ್ನೂ ದೇಶದಲ್ಲಿ ಯಾವ ರೀತಿ ವ್ಯವಸ್ಥೆ ಮಾಡುತ್ತಾರೆ ಎಂದರು.

ದೇಶದ ರೈತರ ಆದಾಯ 2022ರ ವೇಳೆಗೆ ದುಪ್ಪಟ್ಟು ಮಾಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. ಆದರೆ, ಆದಾಯ ಬದಲು ಬಿತ್ತನೆ ಬೀಜ, ಗೊಬ್ಬರ ಹಾಗೂ ದಿನಬಳಕೆ ವಸ್ತುಗಳ ದರ ಹೆಚ್ಚಳ ಮಾಡುವ ಮೂಲಕ ಆರ್ಥಿಕವಾಗಿ ಸಂಕಷ್ಟ ತಂದೊಡ್ಡಲಾಗುತ್ತಿದೆ. ಕಳೆದ ವರ್ಷ ಟನ್‌ ಸೋಯಾಬೀನ್‌ಗೆ 10,040 ರೂ. ಇದ್ದರೆ, ಪ್ರಸಕ್ತ 12,400 ರೂ.ಗೆ ಹೆಚ್ಚಳವಾಗಿದ್ದರೆ, ಬೆಳೆಗಳಿಗೆ ಮಾತ್ರ ವೈಜ್ಞಾನಿಕವಾಗಿ ಬೆಂಬಲ ಬೆಲೆ ಘೋಷಣೆ ಮಾಡಲಿಲ್ಲ.

ಫಸಲ ಬಿಮಾಗೋಲ್ಮಾಲ್‌’ ಯೋಜನೆ: ಪ್ರಧಾನಮಂತ್ರಿ ಫಸಲ ಬಿಮಾ ಯೋಜನೆ ಇದು ರೈತರ ಅಭಿವೃದ್ಧಿಗಾಗಿ ಅಲ್ಲ. ಖಾಸಗಿ ಕಂಪನಿಗೆ ಲಾಭ ಮಾಡುವ ಗೋಲ್ಮಾಲ್‌ ಯೋಜನೆಯಾಗಿದೆ. 2016-17ರಿಂದ 2021-22ರವರೆಗೆ ಜಿಲ್ಲೆಯಿಂದ ರೈತರು ಈ ಯೋಜನೆಯಡಿ 919 ಕೋಟಿ ರೂ. ವಿಮೆ ಕಟ್ಟಿದ್ದಾರೆ. ಆದರೆ, ಪರಿಹಾರ ಬಂದಿದ್ದು ಮಾತ್ರ 460 ಕೋಟಿ ರೂ. ಅಷ್ಟೇ. ಇನ್ನುಳಿದ 450 ಕೋಟಿ ರೂ. ಖಾಸಗಿ ಕಂಪನಿಗಳ ಪಾಲಾಗಿದೆ. ಇದು ಯೋಜನೆ ಹೆಸರಿನಲ್ಲಿ ರೈತರಿಗೆ ಮಾಡುತ್ತಿರುವ ಘೋರ ಅನ್ಯಾಯ ಎಂದು ಟೀಕಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಶಾಸಕ ರಾಜಶೇಖರ ಪಾಟೀಲ, ಎಂಎಸ್‌ಸಿ ಅರವಿಂದಕುಮಾರ ಅರಳಿ, ಪ್ರಮುಖರಾದ ಮೀನಾಕ್ಷಿ ಸಂಗ್ರಾಮ, ದತ್ತಾತ್ರಿ ಮೂಲಗೆ, ಹಣಮಂತರಾವ ಚವ್ಹಾಣ್‌ ಇದ್ದರು.

ಕಾಂಗ್ರೆಸ್ಸಿನಿಂದ ಬೃಹತ್‌ ಹೋರಾಟ ಜಿಲ್ಲೆಗೆ ಬೇಡಿಕೆಯಷ್ಟು ಗೊಬ್ಬರ ಪೂರೈಕೆ, ಬಿಎಸ್‌ಎಸ್‌ಕೆಗೆ ಕಬ್ಬು ಸಾಗಿಸಿದ ರೈತರಿಗೆ ಹಣ ಪಾವತಿ, ಕ.ಕ ಭಾಗಕ್ಕೆ ಆಗುತ್ತಿರುವ ಅನ್ಯಾಯ ಸರಿಪಡಿಸುವಂತೆ ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್‌ನಿಂದ ಒಂದು ವಾರದೊಳಗೆ ಬೃಹತ್‌ ಹೋರಾಟ ನಡೆಸಲು ನಿರ್ಧರಿಸಲಾಗಿದೆ. ಬಿತ್ತನೆ ಮಾಡುವಷ್ಟು ಮಳೆ ಇನ್ನೂ ಆಗಿಲ್ಲ. ಹೀಗಾಗಿ ಗೊಬ್ಬರಕ್ಕಾಗಿ ಬೇಡಿಕೆ ಬಂದಿಲ್ಲ. ಉತ್ತಮ ಮಳೆ ಬಂದರೆ ಗೊಬ್ಬರ ಖರೀದಿ ಜೋರಾಗಲಿದ್ದು, ಆ ವೇಳೆ ಕೊರತೆಯಾಗಲಿದೆ. ತಕ್ಷಣ ಸಚಿವ ಖೂಬಾ ಎಚ್ಚೆತ್ತುಕೊಂಡು ತವರು ಕ್ಷೇತ್ರಕ್ಕಾದರೂ ಬೇಡಿಕೆಯಷ್ಟು ಗೊಬ್ಬರ ಕಳುಹಿಸಬೇಕು. -ಈಶ್ವರ ಖಂಡ್ರೆ, ಕೆಪಿಸಿಸಿ ಕಾರ್ಯಾಧ್ಯಕ್ಷ

ಜಿಲ್ಲೆಯ ಬಿಎಸ್‌ಎಸ್‌ಎಸ್‌ಕೆ ಕಾರ್ಖಾನೆಯಲ್ಲಿ 2021-22ರ ಹಂಗಾಮಿಯಲ್ಲಿ ಖರೀದಿ, ಮಾರಾಟ ಮತ್ತು ರಿಪೇರಿ ಹೆಸರಿನಲ್ಲಿ ಭಾರಿ ಅಕ್ರಮ ನಡೆದಿದೆ. ಈ ಬಗ್ಗೆ ಬಿಜೆಪಿ ಮುಖಂಡರೇ ಹೇಳಿಕೆ ನೀಡಿದ್ದಾರೆ. ಅವ್ಯವಹಾರ ಸಂಬಂಧದ ದೂರು ನೀಡಿದರು ಈವರೆಗೆ ಕ್ರಮಕೈಗೊಂಡಿಲ್ಲ. ಕಾರ್ಖಾನೆ ಪುನಶ್ಚೇತನ ಹಾಗೂ ರೈತರಿಗೆ ಹಣ ಪಾವತಿ ಸಂಬಂಧ ಸರ್ಕಾರದ ಮೇಲೆ ಹಲವು ಬಾರಿ ಒತ್ತಡ ಹಾಕಿದರೆ ಪ್ರಯೋಜನವಾಗಿಲ್ಲ. ಬಿಎಸ್ಸೆಸ್ಕೆ ಪುನಶ್ಚೇತನಕ್ಕೆ ಆರ್ಥಿಕ ನೆರವು ನೀಡುವುದಾಗಿ ಈ ಹಿಂದೆ ಹೇಳಿದ್ದ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಮರೆತಿದೆ. ರಾಜಶೇಖರ ಪಾಟೀಲ, ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next