ಮೂಡಬಿದಿರೆ: ತುಳುನಾಡಿನ ಕಾರಣಿಕ ಪುರುಷರಾದ ಕೋಟಿ-ಚೆನ್ನಯರ ತಾಯಿ ದೇಯಿ ಬೈದ್ಯೆತಿಯ ಮೂರ್ತಿಗೆ ಇತ್ತೀಚೆಗೆ ದುಷ್ಕರ್ಮಿಯೊಬ್ಬ ಅಪಮಾನ ಮಾಡಿರುವ ಘಟನೆಗೆ ಸಂಬಂಧಿಸಿ, ಅಳಿಯೂರಿನ ಉಮಾಲತ್ತಡೆ ಬ್ರಹ್ಮ ಬೈದರ್ಕಳ ಗರಡಿಯ ಆವರಣದಲ್ಲಿ ವಿವಿಧ ಸಂಘ, ಸಮಿತಿಗಳ ಸಹಯೋಗದಲ್ಲಿ ರವಿವಾರ ಖಂಡನಾ ಸಭೆ ಏರ್ಪಡಿಸಲಾಗಿತ್ತು.
ಸಭೆಯನ್ನುದ್ದೇಶಿಸಿ ಮಾತನಾಡಿದ ಅಳಿಯೂರು ಹೇಮಾ ಸಭಾಭವನದ ಮಾಲಕಿ ಹೇಮಾ ಕೆ. ಪೂಜಾರಿ, ‘ಮಾತೆಯ ಸ್ಥಾನದಲ್ಲಿರುವ ದೇಯಿ ಬೈದೆತಿಯನ್ನು ಅಪಮಾನ ಮಾಡಿರುವುದು ಪ್ರಪಂಚದಲ್ಲಿರುವ ಸ್ತ್ರೀ ಕುಲಕ್ಕೆ ಅವಮಾನ ಮಾಡಿದಂತೆ. ಅಪರಾಧಿಗೆ ತಕ್ಕ ಶಿಕ್ಷೆ ಆಗಲೇಬೇಕು’ ಎಂದರು.
ವಾಲ್ಪಾಡಿ ಗ್ರಾ.ಪಂ. ಸದಸ್ಯ ಲಕ್ಷ್ಮಣ ಸುವರ್ಣ ಮಾತನಾಡಿ, ನಾವು ಯಾರು ತಪ್ಪು ಮಾಡಿದ್ದಾನೋ ಆತನ ಸಮಾಜವನ್ನು ಖಂಡಿಸುತ್ತಿಲ್ಲ; ಬದಲಾಗಿ ಹೇಯ ಕೃತ್ಯಗೈದ ವ್ಯಕ್ತಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು. ಪ್ರವೀಣ್ ಭಟ್ ಕಾನಂಗಿ ಅಳಿಯೂರು ಜಂಕ್ಷನ್‌ನಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿ ಘಟನೆಯನ್ನು ಖಂಡಿಸಿದರು.
ದರೆಗುಡ್ಡೆ ಗ್ರಾ.ಪಂ. ಉಪಾಧ್ಯಕ್ಷ ಮುನಿರಾಜ ಹೆಗ್ಡೆ, ಅಳಿಯೂರು ಜೈನ್‌ಮಿಲನ್ ಅಧ್ಯಕ್ಷ ಮಜಲೋಡಿಗುತ್ತು ಪ್ರಮೋದ್ ಆರಿಗ, ಪಾಣರ ಸಂಘದ ಮುಖಂಡ ಶಿವಾನಂದ ಪಾಂಡ್ರು, ಗರಡಿ ಫೆಂಡ್ಸ್‌ನ ಗಣೇಶ್ ಅಳಿಯೂರು ಸಭೆಯನ್ನುದ್ದೇಶಿಸಿ ಮಾತನಾಡಿದರು.
ವಾಲ್ಪಾಡಿ ಗ್ರಾ.ಪಂ. ಅಧ್ಯಕ್ಷೆ ವಸಂತಿ, ಶಿರ್ತಾಡಿ ಗ್ರಾ.ಪಂ. ಮಾಜಿ ಅಧ್ಯಕ್ಷ ಪದ್ಮನಾಭ ಕೋಟ್ಯಾನ್, ಅಳಿಯೂರು ಕೋಟಿ-ಚೆನ್ನಯ ಯುವಶಕ್ತಿ ಘಟಕದ ಅಧ್ಯಕ್ಷ ನವೀನ್‌ಚಂದ್ರ ಸಾಲ್ಯಾನ್, ಪ್ರ. ಕಾರ್ಯದರ್ಶಿ ರಮಾನಂದ ಕೋಟ್ಯಾನ್, ಕಾರ್ಯದರ್ಶಿ ಉದಯ ಕೋಟ್ಯಾನ್, ಮಹಿಳಾ ಘಟಕದ ಅಧ್ಯಕ್ಷೆ ಶೋಭಾ ಎಲ್. ಕೋಟ್ಯಾನ್, ಕಾರ್ಯದರ್ಶಿ ಶುಭ, ಗಣೇಶೋತ್ಸವ ಸಮಿತಿಯ ಸ್ಥಾಪಕಾಧ್ಯಕ್ಷ ವೇದಪ್ರಕಾಶ್ ಪಡಿವಾಳ್, ವಿಠ್ಠಲ ಗೆಳೆಯರ ಬಳಗದ ಅಧ್ಯಕ್ಷ ಸುಧಾಕರ ಪೂಜಾರಿ, ಹಿಂದೂ ಜಾಗರಣಾ ವೇದಿಕೆಯ ಅಧ್ಯಕ್ಷ ಲಕ್ಷ್ಮಣ್ ವಿ. ಕೋಟ್ಯಾನ್, ಪಣಪಿಲ ಅರಮನೆಯ ಶಾಶ್ವತ್ ಜೈನ್ ಮತ್ತಿತರ ಮುಖಂಡರು, ಗ್ರಾಮಸ್ಥರು ಸಭೆಯಲ್ಲಿ ಪಾಲ್ಗೊಂಡಿದ್ದರು.
ಕೋಟಿ ಚೆನ್ನಯ ಯುವಶಕ್ತಿಯ ಗೌ.ಅಧ್ಯಕ್ಷ ವಿಶ್ವನಾಥ ಕೋಟ್ಯಾನ್ ಸ್ವಾಗತಿಸಿ, ನಿರೂಪಿಸಿದರು.