Advertisement

ಕಾಮಗಾರಿ ಪೂರ್ಣಗೊಳಿಸಲು ಸೂಚನೆ

06:21 PM Dec 01, 2021 | Team Udayavani |

ಕಾರವಾರ: ಜಿಲ್ಲೆಯಲ್ಲಿ ನರೇಗಾ, ಸ್ವತ್ಛ ಭಾರತ ಮಿಷನ್‌, ಶೌಚಮುಕ್ತ ಗ್ರಾಮ, ಅಮೃತ ಗ್ರಾಮ ಸೇರಿದಂತೆ ವಿವಿಧ ಯೋಜನೆಯಲ್ಲಿ ಕೈಗೊಳ್ಳಲಾದ ಕಾಮಗಾರಿಗಳು ನಿರಂತರ ಮಳೆಯ ಕಾರಣದಿಂದ ನಿರೀಕ್ಷಿತ ಮಟ್ಟದಲ್ಲಿ ಪ್ರಗತಿಯಾಗಿಲ್ಲ. ಜಿಲ್ಲೆಯಲ್ಲಿ ಪ್ರಸ್ತುತ ಮಳೆ ಇಲ್ಲದ ಕಾರಣ ಎಲ್ಲ ತಾಲೂಕಿನ ಸಹಾಯಕ ನಿರ್ದೇಶಕರು, ತಾಂತ್ರಿಕ ಸಂಯೋಜಕರು ಹಾಗೂ ಸಹಾಯಕರು ಒಗ್ಗೂಡಿಕೊಂಡು ಡಿಸೆಂಬರ್‌ ಅಂತ್ಯದೊಳಗೆ ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸಿ, ನೀಡಲಾಗಿರುವ ಗುರಿ ಸಾಧಿಸಬೇಕು ಎಂದು ಜಿಪಂ ಸಿಇಒ ಪ್ರಿಯಾಂಕಾ ಸೂಚಿಸಿದರು.

Advertisement

ನಗರದ ಜಿಪಂ ಸಭಾಂಗಣದಲ್ಲಿ ನಡೆದ ಸಹಾಯಕ ನಿರ್ದೇಶಕರು, ತಾಂತ್ರಿಕ ಸಂಯೋಜಕರು ಹಾಗೂ ತಾಂತ್ರಿಕ ಸಹಾಯಕರ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ನಿರೀಕ್ಷೆಗೂ ಮೀರಿ ಮಳೆಯಾದ ಪರಿಣಾಮ ವಿವಿಧ ಯೋಜನೆಯಡಿ ಕೈಗೊಳ್ಳಲಾದ ಅಂಗನವಾಡಿ ಕಟ್ಟಡ, ಬಚ್ಚಲು ಗುಂಡಿ, ಶಾಲಾ ಶೌಚಾಲಯ, ಘನತ್ಯಾಜ್ಯ ವಿಲೇವಾರಿ ಘಟಕ, ಆಟದ ಮೈದಾನ, ಇಕೋ ಪಾರ್ಕ್‌ ನಿರ್ಮಾಣದಂತ ಕಾಮಗಾರಿಗಳ ಪ್ರಗತಿ ಸಾಧನೆಗೆ ಹಿನ್ನಡೆಯಾಗಿದೆ.ಸಧ್ಯ ಜಿಲ್ಲೆಯಲ್ಲಿ ಮಳೆ ಆಗದಿರುವ ಕಾರಣ ಈ ಎಲ್ಲ ಕಾಮಗಾರಿಗಳನ್ನು ಸರಿಯಾದ ಸಮಯಕ್ಕೆ ಪೂರ್ಣಗೊಳಿಸಲು ಹಾಗೂ ಜಿಲ್ಲೆಗೆ ನೀಡಿದ ಗುರಿ ತಲುಪಲು ಇದು ಸೂಕ್ತ ಸಮಯವಾಗಿದೆ.

ಆದ್ದರಿಂದ ಎಲ್ಲ ತಾಲೂಕಿನ ಸಹಾಯಕ ನಿರ್ದೇಶಕರು, ತಾಂತ್ರಿಕ ಸಂಯೋಜಕರು ಹಾಗೂ ಸಹಾಯಕ ಅಭಿಯಂತರರು ಜವಾಬ್ದಾರಿ ಅರಿತು ತಮ್ಮ ವ್ಯಾಪ್ತಿಯ ಕಾಮಗಾರಿಗಳನ್ನು ಸಂಪೂರ್ಣವಾಗಿ ಪೂರ್ಣಗೊಳಿಸಬೇಕು. ಕಾಮಗಾರಿ ಪೂರ್ಣಗೊಳಿಸಿದ ವರದಿಯನ್ನು ಕಾಮಗಾರಿಗಳ ಕ್ರಮಾನುಸಾರ ಛಾಯಾಚಿತ್ರ ಸಮೇತವಾಗಿ ಜನೆವರಿಯಲ್ಲಿ ನಡೆಯುವ ಪ್ರಗತಿ ಪರಿಶೀಲನಾ ಸಭೆಗೆ ಹಾಜರಾಗಿ ಪ್ರಸ್ತುತ ಪಡಿಸಬೇಕು ಎಂದರು.

ಆಯಾ ತಾಲೂಕಿನ ಶಾಲಾ ಆವರಣದಲ್ಲಿ ಜಾಗದ ಲಭ್ಯತೆಯಿದ್ದರೆ ಅಗತ್ಯಕ್ಕೆ ಅನುಗುಣವಾಗಿ ದೊಡ್ಡ ಪ್ರಮಾಣದ ಆಟದ ಮೈದಾನ ನಿರ್ಮಿಸಲು ಕ್ರಮ ವಹಿಸಬೇಕು. ತಾಲೂಕಿಗೆ ಒಂದರಂತೆ ಪ್ರೌಢಶಾಲೆಗಳಲ್ಲಿ ಪಿಂಕ್‌ ಶೌಚಾಲಯ ನಿರ್ಮಿಸಬೇಕು. ಜೊತೆಗೆ ನರೇಗಾದಡಿ ತಾಲೂಕುವಾರು ನೀಡಲಾದ ಮಾನವ ದಿನಗಳ ಸೃಜನೆಯ ಗುರಿ ಸಾಧಿಸಬೇಕು. ಕಾಮಗಾರಿ ಪ್ರಾರಂಭ ಹಾಗೂ ಪೂರ್ಣಗೊಳಿಸಲು ಗ್ರಾಪಂ ಮಟ್ಟದಲ್ಲಿ ಏನಾದರೂ ತೊಂದರೆಯಿದ್ದರೆ ಮೇಲಾಧಿಕಾರಿಗಳ ಗಮನಕ್ಕೆ ತಂದು ಪರಿಹರಿಸಿಕೊಳ್ಳಬೇಕು.

Advertisement

ಯಾವುದೇ ಸಂದರ್ಭದಲ್ಲಿಯೂ ಸಣ್ಣಪುಟ್ಟ ಕಾರಣಗಳನ್ನು ನೀಡಿ ಕಾಮಗಾರಿ ಪ್ರಗತಿಗೆ ಅಡ್ಡಿಯಾಗುವುದನ್ನು ಸಹಿಸಲಾಗದು. ಸರಿಯಾಗಿ ಕಾರ್ಯ ನಿರ್ವಹಿಸದ ತಾಂತ್ರಿಕ ಸಂಯೋಜಕರು ಹಾಗೂ ಸಹಾಯಕರಿಗೆ ನೋಟೀಸ್‌ ನೀಡಲಾಗುವುದು. ಹೀಗಾಗಿ ಪ್ರತಿಯೊಬ್ಬರೂ ಎಚ್ಚರಿಕೆಯಿಂದ ಅಚ್ಚುಕಟ್ಟಾಗಿ ಕಾರ್ಯ ನಿರ್ವಹಿಸಬೇಕು ಎಂದು ಸೂಚಿಸಿದರು.

ಜಿಪಂ ಅಭಿವೃದ್ಧಿ ವಿಭಾಗದ ಉಪ ಕಾರ್ಯದರ್ಶಿ ಡಿ.ಎಂ. ಜಕ್ಕಪ್ಪಗೋಳ, ಎಲ್ಲ ತಾಲೂಕಿನ ಸಹಾಯಕ ನಿರ್ದೇಶಕರು, ಸಿಇಒ ಆಪ್ತ ಸಹಾಯಕ ಮೈಲಾರಿ, ಬೆಣ್ಣಿ, ಎಡಿಪಿಸಿ ನಾಗರಾಜ್‌, ಡಿಐಎಂಎಸ್‌ ಶಿವಾಜಿ, ಡಿಐಇಸಿ ಸಚಿನ್‌ ಬಂಟ್‌, ತಾಲೂಕು ಐಇಸಿ ಸಂಯೋಜಕ ಫಕ್ಕೀರಪ್ಪ ತುಮ್ಮಣ್ಣನವರ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next