Advertisement

6 ವರ್ಷದೊಳಗಿನ ಮಕ್ಕಳ ಸರ್ವೇ ಕೈಗೊಳ್ಳಲು ಸೂಚನೆ

03:47 PM Jan 18, 2021 | Team Udayavani |

ಕೊಪ್ಪಳ: ವಲಸೆ ಕುಟುಂಬಗಳ 6 ವರ್ಷದೊಳಗಿನ ಮಕ್ಕಳ ಸರ್ವೇ ನಡೆಸಿ ಅಂತಹ ಮಕ್ಕಳನ್ನು ಹತ್ತಿರದ ಅಂಗನವಾಡಿ
ಕೇಂದ್ರಗಳಿಗೆ ದಾಖಲಾತಿ ಮಾಡಿಕೊಂಡು ಅಗತ್ಯ ಸೇವೆ ಒದಗಿಸುವಂತೆ ಜಿಲ್ಲಾಧಿಕಾರಿ ವಿಕಾಸ್‌ ಕಿಶೋರ್‌ ಸುರಳ್ಕರ್‌
ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

ವಲಸೆ ಕುಟುಂಬಗಳ ಮಕ್ಕಳ ರಕ್ಷಣೆ ಕುರಿತಂತೆ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಬೇರೆ ಜಿಲ್ಲೆ ಹಾಗೂ ರಾಜ್ಯದಿಂದ ಜಿಲ್ಲೆಗೆ ಆಗಮಿಸಿರುವ ಕುಟುಂಬಗಳಲ್ಲಿನ 6 ವರ್ಷದೊಳಗಿನ ಮಕ್ಕಳ ಸರ್ವೇ ಕಾರ್ಯ ಮಾಡಬೇಕು. ಅಂತಹ ಮಕ್ಕಳನ್ನು ಹತ್ತಿರದ ಅಂಗನವಾಡಿ ಕೇಂದ್ರಗಳಿಗೆ ದಾಖಲಾತಿ ಮಾಡಿಕೊಂಡು
ಅಗತ್ಯ ಸೇವೆ ನೀಡುವುದರೊಂದಿಗೆ ವರದಿಯನ್ನು 15 ದಿನಗಳೊಳಗಾಗಿ ಜಿಲ್ಲಾಧಿಕಾರಿ ಕಚೇರಿಗೆ ಸಲ್ಲಿಸಬೇಕೆಂದರು.

ವಲಸೆ ಕುಟುಂಬದ ಹಿತರಕ್ಷಣೆಗಾಗಿ, ಮಹಿಳೆಯರ ಮತ್ತು ಮಕ್ಕಳ ರಕ್ಷಣೆಗಾಗಿ, ಮಾನವ ಅನೈತಿಕ ಸಾಗಾಣಿಕೆ ತಡೆಗಾಗಿ ಗ್ರಾಪಂ ಮಟ್ಟದಲ್ಲಿ ರಚನೆಯಾಗಿ ಕಾರ್ಯನಿರ್ವಹಿಸುವ ಮಹಿಳೆಯರ ಮತ್ತು ಮಕ್ಕಳ ಕಾವಲು ರಕ್ಷಣಾ ಸಮಿತಿಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುವುದು. ಆಯಾ ಗ್ರಾಪಂ ವ್ಯಾಪ್ತಿಯಲ್ಲಿರುವ ವಲಸೆ ಕುಟುಂಬಗಳ, ಮಹಿಳೆಯರ ಮತ್ತು ಮಕ್ಕಳ ಮಾಹಿತಿಯನ್ನು ಸಂಗ್ರಹಿಸಿ ಇಟ್ಟುಕೊಳ್ಳವುದು.

ಇದನ್ನೂ ಓದಿ:ಯಾವುದೇ ರಾಜಕೀಯ ಪಕ್ಷಕ್ಕೂ ಸೇರ್ಪಡೆಯಾಗಬಹುದು: ಸದಸ್ಯರಿಗೆ ರಜನಿ ಅಭಿಮಾನಿಗಳ ಸಂಘ!

ಇಂತಹ ಕುಟುಂಬಗಳ ಮೇಲೆ ಯಾವುದೇ ರೀತಿಯ ಹಿಂಸೆ, ದೌರ್ಜನ್ಯ ಮತ್ತು ಕಿರುಕುಳ ಸಂಭವಿಸದಂತೆ ಸೂಕ್ತ ಕ್ರಮ ಕೈಗೊಳ್ಳುವುದರೊಂದಿಗೆ ಸಂವೇದನಾಶೀಲರಾಗಿ ಕಾರ್ಯನಿರ್ವಹಿಸುವಂತೆ ಅಧಿ ಕಾರಿಗಳಿಗೆ ತಿಳಿಸಿದರು.

Advertisement

ಸಾರ್ವಜನಿಕ ಶಿಕ್ಷಣ ಇಲಾಖೆ ಕೈಗೊಂಡ ಸರ್ವೇ ಹಾಗೂ ಮಾಹಿತಿ ಒಂದು ವರ್ಷದ ಹಿಂದಿನದ್ದಾಗಿದ್ದು, 15 ದಿನದೊಳಗಾಗಿ ಇಲಾಖೆ ಮರು ಸರ್ವೇ ಮಾಡುವುದು ಮತ್ತು ಬೇರೆ-ಬೇರೆ ಜಿಲ್ಲೆ ಹಾಗೂ ರಾಜ್ಯದಿಂದಲೂ ಜಿಲ್ಲೆಗೆ ಆಗಮಿಸಿರುವ ಕುಟುಂಬಗಳ ಮಕ್ಕಳ ಸರ್ವೇಯನ್ನು ಸಹ ಮಾಡಿ ವರದಿ ಸಲ್ಲಿಸುವಂತೆ ಸೂಚಿಸಿದರು.

ಡಿಡಿಪಿಐ ದೊಡ್ಡಬಸಪ್ಪ ನೀರಲಕೆರೆ ಮಾತನಾಡಿ, ಜಿಲ್ಲೆಯಲ್ಲಿ ವಲಸೆ ಕುಟುಂಬಗಳ ಮಕ್ಕಳ ಸರ್ವೇ ಕಾರ್ಯ 2020ರ ಫೆಬ್ರುವರಿಯಲ್ಲಿ ಮಾಡಲಾಗಿದೆ. ಈ ಮಕ್ಕಳ ಹಾಗೆಯೇ ಋತುಮಾನಾಧಾರಿತ ಸೇತುಬಂಧ ಶಾಲೆಗಳನ್ನು ಆರಂಭಿಸಲು ಈಗಾಗಲೇ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ಸಭೆಗೆ ತಿಳಿಸಿದರು.

ಸಭೆಯಲ್ಲಿ ಜಿಲ್ಲೆಯ ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರ್ದೇಶಕರು, ನಿರೂಪನಾಧಿಕಾರಿಗಳು ಹಾಗೂ ಎಲ್ಲ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next