ಬೆಂಗಳೂರು: ನವೆಂಬರ್ 26ರಂದು ಬೆಳಗ್ಗೆ 11ಕ್ಕೆ “ಸಂವಿಧಾನ ದಿನಾಚರಣೆ’ ಅಂಗವಾಗಿ ಶಾಲಾ, ಕಾಲೇಜುಗಳು ಸೇರಿ ಕೆಲ ಕಡೆಗಳಲ್ಲಿ ಏಕಕಾಲದಲ್ಲಿ ಭಾರತ ಸಂವಿಧಾನದ ಪೀಠಿಕೆ ಓದುವ ಕಾರ್ಯಕ್ರಮ ಹಮ್ಮಿಕೊಳ್ಳಲು ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಸುತ್ತೋಲೆ ಹೊರಡಿಸಲಾಗಿದೆ.
ರಾಜ್ಯದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಸರ್ಕಾರಿ ಮುದ್ರಣಾಲಯ, ಸಾರ್ವಜನಿಕ ಗ್ರಂಥಾಲಯ ಇಲಾಖೆಗಳ ಎಲ್ಲಾ ಹಂತದ ಕಚೇರಿಗಳು, ಸರ್ಕಾರಿ ಅನುದಾನಿತ/ಅನುದಾನ ರಹಿತ ಪ್ರಾಥಮಿಕ, ಪ್ರೌಢಶಾಲೆಗಳು ಹಾಗೂ ಪದವಿಪೂರ್ವ ಕಾಲೇಜುಗಳಲ್ಲಿ ಬೆಳಗ್ಗೆ 11 ಗಂಟೆಗೆ ಏಕಕಾಲದಲ್ಲಿ ಭಾರತ ಸಂವಿಧಾನದ ಪೀಠಿಕೆ ಓದುವ ಕಾರ್ಯಕ್ರಮ ಹಮ್ಮಿಕೊಳ್ಳಲು ಕ್ರಮ ಕೈಗೊಳ್ಳುವಂತೆ ಶಿಕ್ಷಣ ಸಚಿವರು ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದೆ. ಸಂವಿಧಾನದ ಪ್ರಾಮುಖ್ಯತೆ ಮತ್ತು ಶ್ರೇಷ್ಠತೆಯ ಅರಿವನ್ನು ಎಲ್ಲರಿಗೂ ಮೂಡಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ನ.26ರಂದು ಬೆಳಗ್ಗೆ 11ಕ್ಕೆ ಏಕಕಾಲಕ್ಕೆ ಸಂವಿಧಾನದ ಪೀಠಿಕೆ ಓದುವ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಶಾಲಾ ಆವರಣದಲ್ಲಿನ ಪ್ರಮುಖ ಸ್ಥಳದಲ್ಲಿ ಭಾರತ ಸಂವಿಧಾನದ ಪೀಠಿಕೆ ಮತ್ತು ಮೂಲಭೂತ ಕರ್ತವ್ಯಗಳ ಪ್ರದರ್ಶನ ನಡೆಸಬೇಕು. ಶಾಲೆಗಳಲ್ಲಿ ಸಂವಿಧಾನದ ವಿವಿಧ ಅಂಶಗಳ ಕುರಿತು ಚರ್ಚಾ ಸ್ಪರ್ಧೆ, ರಸಪ್ರಶ್ನೆಗಳು, ಪ್ರಬಂಧ ಸ್ಪರ್ಧೆಗಳು ಇತ್ಯಾದಿ ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ಸುತ್ತೋಲೆಯಲ್ಲಿ ಉಲ್ಲೇಖೀಸಲಾಗಿದೆ.