Advertisement

ಶಾಲೆ ಕಟ್ಟಡ ಸುರಕ್ಷತೆಗೆ ಮುಖ್ಯ ಶಿಕ್ಷಕರಿಗೆ ಸೂಚನೆ

04:02 PM Jul 27, 2022 | Team Udayavani |

ಭಾಲ್ಕಿ: ಮುಖ್ಯ ಶಿಕ್ಷಕರು ತಮ್ಮ ತಮ್ಮ ಶಾಲೆಗಳ ಕಟ್ಟಡ ಸುರಕ್ಷತೆ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬಸವಂತರಾಯ ಜಿಡ್ಡೆ ಸೂಚಿಸಿದರು.

Advertisement

ಪಟ್ಟಣದ ಕ್ಷೇತ್ರ ಸಂಪನ್ಮೂಲ ಕೇಂದ್ರ (ಬಿಆರ್‌ ಸಿ)ದಲ್ಲಿ ಮಂಗಳವಾರ ನಡೆದ ಸರ್ಕಾರಿ ಮತ್ತು ಅನುದಾನಿತ ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಭೆಯಲ್ಲಿ ಮಾತನಾಡಿದ ಅವರು, ನಮ್ಮ ತಾಲೂಕಿನಲ್ಲಿರುವ ಎಲ್ಲ ಶಾಲೆಗಳಲ್ಲಿ ಸುಮಾರು 1,809 ಕೊಠಡಿಗಳಿವೆ. ಅವುಗಳಲ್ಲಿ 190 ಕೊಠಡಿಗಳು ಶಿಥಿಲಾವಸ್ಥೆಯಲ್ಲಿವೆ. ಇವುಗಳ ಬಗ್ಗೆ ಮುಖ್ಯ ಶಿಕ್ಷಕರು ಲಿಖೀತ ಮಾಹಿತಿ ನೀಡಿ ಅನುದಾನ ಪಡೆದು ಕೊಠಡಿಗಳು ಸುರಕ್ಷಿತವಾಗಿಟ್ಟುಕೊಳ್ಳುವಂತೆ ನೋಡಿಕೊಳ್ಳಬೇಕು. ಮಳೆಗಾಲ ಇರುವ ಕಾರಣ ಮುಖ್ಯ ಶಿಕ್ಷಕರು ಸ್ವತ್ಛತೆ ಮತ್ತು ಸುಸ್ಥಿರತೆ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ಅಲ್ಲದೇ ಇದುವರೆಗೆ ಕ್ರೀಢಾನಿಧಿ, ಶಿಕ್ಷಕರ ಕಲ್ಯಾಣ ನಿಧಿ, ವಿದ್ಯಾರ್ಥಿಗಳ ಕಲ್ಯಾಣ ನಿಧಿ ಸೇರಿದಂತೆ ಯಾವುದೇ ಸರ್ಕಾರಿ ಶುಲ್ಕ ಪಾವತಿಸದೇ ಇದ್ದಲ್ಲಿ ತಕ್ಷಣ ಶುಲ್ಕ ಪಾವತಿಸಬೇಕು ಎಂದು ತಾಕೀತು ಮಾಡಿದರು.

ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆ ನಿಟ್ಟಿನಲ್ಲಿ, ಶಿಕ್ಷಕರ ಕೊರತೆ ನೀಗಿಸುವಂತೆ ಶಾಸಕರ ಮುತುವರ್ಜಿಯ ಮೇರೆಗೆ ಎಲ್ಲ ಪ್ರೌಢಶಾಲೆಗಳಿಗೂ ಸುಮಾರು 42 ಜನ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲು ಅನುಮತಿ ಪಡೆಯಲಾಗಿದೆ. ಯಾವ ಶಾಲೆಗಳಿಗೆ ಶಿಕ್ಷಕರ ಕೊರತೆ ಇದೆಯೋ ಅಂತಹ ಶಾಲೆ ಮುಖ್ಯ ಶಿಕ್ಷಕರು ತಮ್ಮ ಶಾಲೆ ವಿಷಯವಾರು ಅತಿಥಿ ಶಿಕ್ಷಕರನ್ನು ನೇಮಿಸಿಕೊಂಡು, ಉತ್ತಮವಾಗಿ ಪಾಠ ಮಾಡಿ ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಿಸುವ ನಿಟ್ಟಿನಲ್ಲಿ ಕಾರ್ಯ ಮಾಡಬೇಕು ಎಂದು ಹೇಳಿದರು.

ಅಕ್ಷರ ದಾಸೋಹ ಯೋಜನೆ ಸಹಾಯಕ ನಿರ್ದೇಶಕ ಮಲ್ಲಿನಾಥ ಸಜ್ಜನ ಮಾತನಾಡಿ, ಅಕ್ಷರ ದಾಸೋಹ ಯೋಜನೆಯಲ್ಲಿ ವಿದ್ಯಾರ್ಥಿಗಳ ಹಾಜರಾತಿ ನೀಡುವುದು ಕಡ್ಡಾಯವಾಗಿದೆ. ಮುಖ್ಯಶಿಕ್ಷಕರು ಎಸ್‌ಎಟಿಎಸ್‌ ತಂತ್ರಾಂಶದಲ್ಲಿ ಮತ್ತು ಈಜಿ ಎಸ್‌ಎಂಎಸ್‌ ಮೂಲಕ ತಮ್ಮ ಶಾಲೆಗಳ ಹಾಜರಾತಿ ಬೆಳಗ್ಗೆ 11 ಗಂಟೆಯವರೆಗೆ ಕಡ್ಡಾಯವಾಗಿ ನಮೂದಿಸಬೇಕು. ಅಡುಗೆ ಕೋಣೆ ಮತ್ತು ಆಹಾರ ಧಾನ್ಯಗಳ ಸ್ವಚ್ಛತೆ ಬಗ್ಗೆ ಹೆಚ್ಚಿನ ಗಮನ ಕೊಡಬೇಕು ಎಂದು ಹೇಳಿದರು.

ಪಠ್ಯ ಪುಸ್ತಕಗಳ ನೋಡಲ್‌ ಅಧಿಕಾರಿಯಾದ ಇಸಿಒ ಜಯರಾಮ ಬಿರಾದಾರ ಮಾತನಾಡಿ, ಕೆಲವು ಶಾಲೆಯವರು ಪಠ್ಯಪುಸ್ತಕಗಳನ್ನು ತೆಗೆದುಕೊಂಡು ಹೋಗಿ ವಿದ್ಯಾರ್ಥಿಗಳಿಗೆ ಹಂಚಿಕೆ ಮಾಡಿದ್ದಾರೆ. ಆದರೆ ಎಸ್‌ಎಟಿಎಸ್‌ ತಂತ್ರಾಂಶದಲ್ಲಿ ಈ ಕುರಿತು ಮಾಹಿತಿ ಸಲ್ಲಿಸಿಲ್ಲ. ತಕ್ಷಣ ಈ ಮಾಹಿತಿ ಸಲ್ಲಿಸಬೇಕು ಎಂದು ಹೇಳಿದರು.

Advertisement

ಬಿಆರ್‌ಪಿ ಶಕುಂತಲಾ ಸಾಲಮನಿ ಮಾತನಾಡಿ, ನಿಷ್ಟಾ 2.0 ತರಬೇತಿ ಪಡೆದ ಶಿಕ್ಷಕರು ಕಡ್ಡಾಯವಾಗಿ ತಮ್ಮ ಎಲ್ಲ ಪ್ರಮಾಣ ಪತ್ರಗಳೊಂದಿಗೆ ತಮ್ಮ ಸಂಪೂರ್ಣ ಮಾಹಿತಿ ಸಲ್ಲಿಸಬೇಕು ಎಂದು ಹೇಳಿದರು.

ಇಸಿಒ ಸಹದೇವ ಜಿ. ಮಾತನಾಡಿ, ಎಸ್‌ಎಸ್‌ ಎಲ್‌ಸಿ ವಿದ್ಯಾರ್ಥಿಗಳ ಗೈರು ಹಾಜರಿಯ ಬಗ್ಗೆ ಮಾಹಿತಿ ನೀಡಬೇಕು. ಈ ಸಲ ಹಾಜರಾತಿ ಬಗ್ಗೆ ಹೆಚ್ಚಿನ ಗಮನ ಕೊಟ್ಟು ಪ್ರತಿಶತ 75 ಹಾಜರಾತಿ ಇರುವ ಮಕ್ಕಳ ಪರೀಕ್ಷಾ ಶುಲ್ಕ ಮಾತ್ರ ಮಂಡಳಿಗೆ ಸಲ್ಲಿಸಬೇಕು ಎಂದು ಮಾಹಿತಿ ನೀಡಿದರು.

ಮುಖ್ಯಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ರಾಜಕುಮಾರ ಜೊಳದಪಕೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಜೋಷಿ, ಮುಖ್ಯ ಶಿಕ್ಷಕ ಎಂ.ಡಿ. ಹನೀಫ್‌, ಶ್ರೀಕಾಂತ ಮೂಲಗೆ, ರಮೇಶ ಮರೂರಕರ ಇದ್ದರು. ಮುಖ್ಯ ಶಿಕ್ಷಕ ಜಯರಾಜ ದಾಬಶೆಟ್ಟಿ ಸ್ವಾಗತಿಸಿದರು. ಚಂದ್ರಕಾಂತ ಖಂಡಾಳೆ ನಿರೂಪಿಸಿದರು. ಅಶೋಕ ಬರ್ಮಾ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next