ಬೆಳಗಾವಿ: ಸರ್ಕಾರದ ನಿರ್ದೇಶನದಂತೆ ಸೆ.17 ರಂದು ಬೆಳಗಾವಿಯ ಆರ್ಮಿ ಎನ್ವಿರಾನ್ಮೆಂಟ್ ಪಾರ್ಕ್ ಟ್ರೈನಿಂಗ್ ಸೆಂಟರ್ ನಲ್ಲಿ ಯೋಗಥಾನ್ ಕಾರ್ಯಕ್ರಮ ಆಯೋಜಿಸಲಾಗಿದ್ದು, ಇದಕ್ಕೆ ಅಗತ್ಯ ಪೂರ್ವ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಯೋಗಥಾನ್ ಕಾರ್ಯಕ್ರಮದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಎನ್ .ಸಿ.ಸಿ, ಎನ್.ಎಸ್.ಎಸ್, ಮಿಲಿಟರಿ ಯೋಧರು, ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಪೊಲೀಸ್ ಇಲಾಖೆ, ಪೌರ ಕಾರ್ಮಿಕರು, ಅಂಗನವಾಡಿ ಕಾರ್ಯಕರ್ತರು, ಆರೋಗ್ಯ ಇಲಾಖೆ, ನರೇಗಾ ಕಾರ್ಮಿಕರು ಹಾಗೂ ವಿವಿಧ ಯೋಗ ಸಂಸ್ಥೆಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿವೆ ಎಂದರು.
ಯೋಗಥಾನ್ ಕಾರ್ಯಕ್ರಮದಲ್ಲಿ ಭಾಗವಹಿಸಲು ಈಗಾಗಲೇ ಅನ್ ಲೈನ್ ಮೂಲಕ 1 ಲಕ್ಷ 22 ಸಾವಿರ ನೋಂದಣಿಗಳಾಗಿವೆ. ಅದರಲ್ಲಿ ಬೆಳಗಾವಿ ಶೈಕ್ಷಣಿಕ ಕ್ಷೇತ್ರದಿಂದ 42 ಸಾವಿರ ಹಾಗೂ ಚಿಕ್ಕೋಡಿ ಭಾಗದಿಂದ 30 ಸಾವಿರ ವಿದ್ಯಾರ್ಥಿಗಳು ಸೇರಿದಂತೆ ಸುಮಾರು 80 ಸಾವಿರ ಶಾಲಾ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪ ನಿರ್ದೇಶಕರಾದ ಜಿನೇಶ್ವರ್ ಪಡನಾಡ ಮಾಹಿತಿ ನೀಡಿದರು.
ಈಗಾಗಲೇ ನೋಂದಣಿ ಮಾಡಿಕೊಂಡ ಸಂಸ್ಥೆಗಳು, ಅಭ್ಯರ್ಥಿಗಳ ಪ್ರವೇಶಕ್ಕೆ ಕ್ಯೂ.ಆರ್ ಕೋಡ್ ನೀಡಲಾಗುವುದು. ಶಾಲಾ, ಕಾಲೇಜು ಹಾಗೂ ಸಂಸ್ಥೆಗಳಿಗೆ ನೀಡಿರುವ ಕ್ಯೂ.ಆರ್ ಕೋಡ್ ಮೂಲಕ 300 ಜನ ಪ್ರವೇಶ ಪಡೆಯಬಹುದು. ಅದೇ ರೀತಿಯಲ್ಲಿ ವೈಯಕ್ತಿಕವಾಗಿ ಭಾಗವಹಿಸಿದ ಅಭ್ಯರ್ಥಿಗಳಿಗೆ ನೀಡಿರುವ ಕ್ಯೂ.ಆರ್ ಕೋಡ್ ಸ್ಕ್ಯಾನ್ ಮೂಲಕ ಒಬ್ಬರಿಗೆ ಒಂದು ಬಾರಿ ಮಾತ್ರ ಪ್ರವೇಶ ಸಿಗಲಿದೆ. ನೋಂದಾಯಿತರಲ್ಲಿ ಮೊದಲು ಬಂದವರಿಗೆ ಆದ್ಯತೆ ನೀಡಲಾಗುವುದು ಎಂದು ಗಿನ್ನಿಸ್ ರಿಕಾರ್ಡ್ ಲಿಮಿಟೆಡ್ ಪ್ರತಿನಿಧಿ ಶೈಲಜಾ ಶ್ರೀಕಾಂತ ಹೇಳಿದರು.
ಯೋಗಥಾನ್ ಕಾರ್ಯಕ್ರಮದ ಗಿನ್ನಿಸ್ ದಾಖಲೆ ಸ್ಪರ್ಧೆಗಳಲ್ಲಿ ಭಾಗವಹಿಸಿದ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರ ವಿತರಣೆ ಮಾಡಲಾಗುವುದು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಭಾಗವಹಿಸಲು ಬರುವವರಿಗೆ ಬಸ್ ವ್ಯವಸ್ಥೆ, ಇ-ಟಾಯ್ಲೆಟ್, ಶಾಲಾ ಕಾಲೇಜು ಆವರಣದಲ್ಲಿ ಪಾರ್ಕಿಂಗ್, ಅಲೊ³àಪಹಾರ ವ್ಯವಸ್ಥೆ ಕಲ್ಪಿಸಬೇಕು. ತುರ್ತು ಸೇವೆಗಳಾದ ಅಗ್ನಿಶಾಮಕ, ಆಂಬ್ಯುಲೆನ್ಸ್ ಹಾಗೂ ವೈದ್ಯಕೀಯ ಚಿಕಿತ್ಸೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಹೇಳಿದರು. ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದರ್ಶನ್. ಎಚ್ ವಿ, ಮಹಾನಗರ ಪಾಲಿಕೆ ಆರೋಗ್ಯ ಅಧಿಕಾರಿ ಡಾ.ಸಂಜಯ ಡುಮ್ಮಗೊಳ, ಆಯುಷ್ ಇಲಾಖೆ ಅಧಿಕಾರಿ ಶ್ರೀಕಾಂತ ಸುಣಧೋಳಿ ಉಪಸ್ಥಿತರಿದ್ದರು.