ಬೆಳಗಾವಿ/ಬೆಂಗಳೂರು: ಕಾಂಗ್ರೆಸ್ ಘೋಷಿಸಿದ ಗ್ಯಾರಂಟಿ ಯೋಜನೆಗಳನ್ನು ಯಾವುದೇ ಷರತ್ತು ಇಲ್ಲದೆ ಜಾರಿಗೊಳಿಸಲು ಒತ್ತಾಯಿಸಿ ಬಿಜೆಪಿ ಹಾಗೂ ಜೆಡಿಎಸ್ ಹೋರಾಟಕ್ಕೆ ಮುಂದಾಗಿರುವ ಬೆನ್ನಲ್ಲೇ ಸಚಿವ ಸತೀಶ್ ಜಾರಕಿಹೊಳಿ ಗ್ಯಾರಂಟಿ ಯೋಜನೆಗೆ ಕೆಲವು ಷರತ್ತು ವಿಧಿಸಲಾಗುವುದು ಎಂದು ಹೇಳಿದ್ದಾರೆ.
ಮತ್ತೂಂದೆಡೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೂಡ ಮನೆಯೊಡತಿಗೆ ಎರಡು ಸಾವಿರ ರೂ. ತಲುಪಬೇಕು. ಮನೆಯೊಡತಿ ಅತ್ತೆಯಾ, ಸೊಸೆಯಾ ಎಂಬುದು ಖಾತರಿಪಡಿಸಿಕೊಂಡು ನೇರವಾಗಿ ಬ್ಯಾಂಕ್ ಖಾತೆಗೆ ಜಮೆ ಮಾಡಬೇಕು. ಇವೆಲ್ಲದಕ್ಕೂ ಸಮಯ ಹಿಡಿಯಲಿದೆ ಎಂದು ತಿಳಿಸಿದ್ದಾರೆ.
ಬೆಳಗಾವಿಯಲ್ಲಿ ಮಾತನಾಡಿದ ಸತೀಶ್ ಜಾರಕಿಹೊಳಿ, ಕಾಂಗ್ರೆಸ್ ಘೋಷಿಸಿದಂತೆ ಗ್ಯಾರಂಟಿ ಯೋಜನೆ ಜಾರಿ ಮಾಡಲಾಗುವುದು. ಆದರೆ ಅದಕ್ಕೆ ಕೆಲವು ಷರತ್ತುಗಳನ್ನು ವಿಧಿಸಲಾಗುವುದು ಎಂದು ತಿಳಿಸಿದರು.
ನಾವು ಗ್ಯಾರಂಟಿ ಯೋಜನೆ ಜಾರಿ ಮಾಡದಿದ್ದರೆ ಪ್ರತಿಭಟನೆ ಮಾಡಲಿ. ಅದಕ್ಕಾಗಿ ಒಂದು ನಿರ್ದಿಷ್ಟ ಸಮಯ ಬೇಕು. ಅಲ್ಲಿವರೆಗೂ ತಾಳ್ಮೆ ಇರಬೇಕು. ಮೊದಲ ಸಚಿವ ಸಂಪುಟದಲ್ಲಿ ನಿರ್ಣಯ ಮಾಡಿ ಪಟ್ಟಿ ಮಾಡಿ ನಿಯಮ ಮಾಡಲು ಹೇಳಿದ್ದೇವೆ. ಅದಕ್ಕಾಗಿ ಸ್ವಲ್ಪ ಅವಕಾಶ ಕೊಡಬೇಕು ಎಂದು ಹೇಳಿದರು.
ಕಾಂಗ್ರೆಸ್ ಪಕ್ಷ ಚುನಾವಣೆ ಸಂದರ್ಭದಲ್ಲಿ ನೀಡಿರುವ ಗ್ಯಾರಂಟಿ ಖಂಡಿತವಾಗಿಯೂ ಜಾರಿಗೆ ಬರಲಿದೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ತಿಳಿಸಿದರು.
Related Articles
ಹದಿನೈದು ಲಕ್ಷ ರೂ. ಹಾಕಲಿ
ಬೆಂಗಳೂರಿನಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ಗ್ಯಾರಂಟಿ ಜಾರಿ ನಮ್ಮ ಬದ್ಧತೆ. ಇದರ ಬಗ್ಗೆ ಬಿಜೆಪಿಯವರು ಮಾತನಾಡಲಿ, ಅವರು ಟೀಕೆ, ಮಾತನಾಡಿದಾಗಲೇ ಗ್ಯಾರಂಟಿ ಯೋಜನೆಗಳಿಗೆ ಪ್ರಚಾರ ಸಿಗುತ್ತದೆ ಎಂದು ಹೇಳಿದರು.
ಇಷ್ಟೆಲ್ಲ ಮಾತನಾಡುವ ಬಿಜೆಪಿಯವರಲ್ಲಿ ಕೆಲವು ಪ್ರಶ್ನೆಗಳನ್ನು ಕೇಳಬೇಕಾಗಿದೆ. ಪ್ರಧಾನಿ ಮೋದಿ ಪ್ರತಿಯೊಬ್ಬರ ಖಾತೆಗೆ ಹದಿನೈದು ಲಕ್ಷ ರೂ. ಹಾಕುತ್ತೇನೆ ಎಂದು ಹೇಳಿದ್ದರು. ಹಾಕಿದ್ದಾರಾ? ಪ್ರಣಾಳಿಕೆಯಲ್ಲಿ ರೈತರ 1 ಲಕ್ಷ ರೂ. ಸಾಲ ಮನ್ನಾ ಘೋಷಿಸಿದ್ದರು. ಅದನ್ನು ಮಾಡಿದ್ದಾರಾ? ಕುಮಾರಣ್ಣನೂ ಇದಕ್ಕೆ ಉತ್ತರಿಸಲಿ ಎಂದು ತಿಳಿಸಿದರು.
ಮತ್ತೂಂದೆಡೆ ಸಚಿವ ಡಾ| ಜಿ.ಪರಮೇಶ್ವರ್ ಮಾತನಾಡಿ, ಕೆಟ್ಟ ಆಡಳಿತ ಕೊಟ್ಟು ಮನೆಗೆ ಹೋಗಿರುವ ಬಿಜೆಪಿಯವರಿಂದ ನಾವು ಪಾಠ ಹೇಳಿಸಿಕೊಳ್ಳಬೇಕಿಲ್ಲ. ನುಡಿದಂತೆ ನಡೆಯುತ್ತೇವೆ, ಈಗಾಗಲೇ ಸಂಪುಟದಲ್ಲಿ ತೀರ್ಮಾನ ಮಾಡಿದ್ದೇವೆ. ತಾಳ್ಮೆ ಇರಲಿ ಎಂದು ತಿಳಿಸಿದರು