Advertisement
ಕೇಂದ್ರ ಸರ್ಕಾರದ “ಉನ್ನತ್ ಜ್ಯೋತಿ ಬೈ ಅಫಡ‚ìಬಲ್ ಎಲ್‌ಇಡೀಸ್ ಫಾರ್ ಆಲ್’ ಎಂಬ ಯೋಜನೆ; ಹೃಸ್ವವಾಗಿ ಹೇಳುವುದಾದರೆ “ಉಜಾಲಾ’ ಮೂಡಿಸಿದ ಭರವಸೆಯ ಬೆಳಕು, ಅದು ರಿಯಾಯ್ತಿ ದರದಲ್ಲಿ ನೀಡಿದ 9 ವ್ಯಾಟ್ ಎಲ್‌ಇಡಿ ಬಲ್ಬ್ ಬೆಳಕಿಗಿಂತ ಹೆಚ್ಚು. ಮೂರು ವರ್ಷಗಳ ಗ್ಯಾರಂಟಿ ಸಹಿತ 80 ರೂ.ಗೆ ಒಂದು ವರ್ಷದ ಹಿಂದೆ ಈ ಬಲ್ಬ್ ಹಂಚಿದಾಗ ಜನ ಮುಗಿಬಿದ್ದು ತೆಗೆದುಕೊಂಡರು. ಮಾರುಕಟ್ಟೆಯಲ್ಲಿ 200, 300 ರೂ. ಎಂಆರ್‌ಪಿ ಇರುವಾಗ ಅದೇ ಬಲ್ಬ್ ಕೇವಲ 80 ರೂಪಾಯಿಗೆ ಸಿಗುವುದಷ್ಟೇ ಅಲ್ಲ, ಅದಕ್ಕೆ, ಮೂರು ವರ್ಷದ ಗ್ಯಾರಂಟಿ ಇರುವಾಗ ಏಕೆ ಬಿಡಬೇಕು? ಈ ಸೌಲಭ್ಯ, ಬಂಪರ್ ಎಂದುಕೊಂಡರು.
ಅಂಕಿಅಂಶಗಳ ಪ್ರಕಾರ, ಈವರೆಗೆ 270 ಮಿಲಿಯನ್ ಎಲ್‌ಇಡಿ ಬಲ್ಬ್ಗಳು ಮಾರಾಟವಾಗಿವೆ. ಇದರಿಂದ ಜನರಿಗೆ 14,017 ಕೋಟಿ ರೂ. ಉಳಿತಾಯವಾಗಿದೆ ಎಂಬುದು ಕೇಂದ್ರದ ಅಧಿಕೃತ www.eeslindia.org ವೆಬ್ ಮಾಹಿತಿ. ಇದೊಂದು ಕುರುಡು ಲೆಕ್ಕ. ಇಂದು ಮತ್ತೂಮ್ಮೆ ಎಲ್ಲೆಡೆ ಎಲ್‌ಇಡಿ ಬಲ್ಬ್ಗಳನ್ನು ತರಿಸುವ ಕೌಂಟರ್‌ಗಳು ಆಯಾ ಭಾಗದ ವಿದ್ಯುತ್ ವಿತರಣಾ ಕಂಪನಿಗಳಲ್ಲಿ ಜಾರಿಗೊಂಡಿದೆ. ಈಗ ಬಲ್ಬ್ಗೆ 80 ಅಲ್ಲ, 60 ರೂ. ಮಾತ್ರ. ಆದರೂ ಅಲ್ಲಿ ಕಾಣಿಸುವ ಜನಸಂದಣಿ ಬಲ್ಬ್ ಖರೀದಿಗೆ ಬರುತ್ತಿಲ್ಲ. ಈ ಹಿಂದೆ ಖರೀದಿಸಿ ತಿಂಗಳೊಪ್ಪತ್ತಿನಲ್ಲಿ ಹಾಳಾದ ಬಲ್ಬ್ಗಳನ್ನು ಬದಲಿಸಿಕೊಳ್ಳಲು ಎಡತಾಕುತ್ತಿದ್ದಾರೆ! ಖರೀದಿಸಿದ ಬಲ್ಬ್ ಬಳಕೆಗೇ ಬಂದಿಲ್ಲ ಎಂತಾದರೆ ಸರ್ಕಾರದ ವಿದ್ಯುತ್ ಬಿಲ್ ಉಳಿದಿದೆ, ವಾರ್ಷಿಕ 7015 ಮೆಗಾವ್ಯಾಟ್ ಲೋಡ್ ಕುಸಿದಿದೆ, 28 ಮಿಲಿಯನ್ ಟನ್ ಸಿಓಟು ಕಡಿಮೆಯಾಗಿದೆ ಎಂಬ ಲೆಕ್ಕಗಳೆಲ್ಲ ಬೋಗಸ್ ಆಗುತ್ತವೆ. ಇಂತಹ ಚೆಂದದ ಲೆಕ್ಕಗಳನ್ನು ಪ್ರತಿ 15 ಸೆಕೆಂಡ್‌ಗೊಮ್ಮೆ ಅಪ್‌ಡೇಟ್ ಮಾಡಿ ಕೊಡುವ ಈ ವೆಬ್‌ಲಿಂಕ್‌ನಲ್ಲಿ [//www.ujala.gov.in/] ನೋಡಿ ಆನಂದಿಸಿ, ನಂಬಬೇಡಿ!
Related Articles
Advertisement
ಕಡಿಮೆ ಬೆಲೆಯ ಆಕರ್ಷಣೆ!ಎಲ್‌ಇಡಿ ಬಲ್ಬ್ಗಳ ಬೆಲೆ ದುಬಾರಿಯಾಗಿದ್ದರಿಂದ ಜನ ಅದರಿಂದ ದೂರ ಉಳಿದಿದ್ದರು. ಸರ್ಕಾರದ ಯೋಜನೆಯ ಕಾರಣ ಅದು ಸಹಾಯಧನದ ಮೂಲಕ ಕಡಿಮೆ ದರಕ್ಕೆ ಮಾರಾಟ ಮಾಡಲು ಮುಂದಾಗಿದ್ದುದು ಜನರನ್ನು ಆಕರ್ಷಿಸಿತು. ಜಿಯೋ ಮೊಬೈಲ್ ಡಾಟಾವನ್ನು ಕಡಿಮೆ ದರಕ್ಕೆ ತರಿಸಲಾರಂಭಿಸಿದ ಮೇಲೆ ಅದು ಅಷ್ಟು ದುಬಾರಿಯಲ್ಲ, ಮೊಬೈಲ್ ಕಂಪನಿಗಳು ಪರಮಾವಧಿ ಲಾಭ ಗಿಟ್ಟಿಸಿಕೊಳ್ಳಲಷ್ಟೇ ಈ ದುಬಾರಿ ದರ ಇರಿಸಿದ್ದರು ಎಂಬುದು ಈಗ ಎಲ್ಲರಿಗೂ ಅರ್ಥವಾಗಿದೆ. ಅವರೂ ಜಿಯೋದೊಂದಿಗೆ ಪೈಪೋಟಿಗೆ ಇಳಿದು ಜಿಬಿ ಡಾಟಾಗಳ ಬೆಲೆಯನ್ನು ಪಾತಾಳಕ್ಕೆ ಇಳಿಸಿದ್ದಾರೆ. ಈ ಉದಾಹರಣೆಯನ್ನು ದಟ್ಟವಾಗಿ ನೆನಪಿಸುವಂತೆ ಈ ಎಲ್‌ಇಡಿ ಬಲ್ಬ್ಗಳ ಬೆಲೆ ಪ್ರಸಂಗವೂ ನಡೆದಿದೆ. ಇಂದು ಬ್ರಾಂಡೆಡ್ ಕಂಪನಿಗಳ ಬೆಲೆ ಜರ್ರನೆ ಇಳಿದಿದೆ. 9 ವ್ಯಾಟ್‌ನ ಪ್ರೋತ್ಸಾಹ ನಾಲ್ಕು ಬಲ್ಬ್ ಬೆಲೆ 500 ರೂ. ಅಥವಾ ಅದಕ್ಕಿಂತ ಕಡಿಮೆ. ಎವರೆಡಿ, ಸಿಸ್ಕಾ ಇನ್ನೂ ಕಡಿಮೆಗೇ ಲಭ್ಯ. ಒಂದು ಬಲ್ಬ್ಗೆ 90-100 ರೂ. ಸರಾಸರಿ ಬೆಲೆ ಎನ್ನುವವರು ಹೊಸ ಬೆಳಕು ಯೋಜನೆಯಡಿ ಮಾರಾಟವಾಗುವ ಬಲ್ಬ್ಗೆ ಸರ್ಕಾರ ಶೇ. 50ರ ಸಬ್ಸಿಡಿ ನೀಡುತ್ತದೆ ಎಂಬುದನ್ನು ಮರೆಯಬಾರದು. ಸರ್ಕಾರದ ಕೆಲಸ ದೇವರ ಕೆಲಸ ಎಂಬ ಮಾತು 50 ಪೈಸೆ ನಾಣ್ಯದಂತೆ ಅನಧಿಕೃತವಾಗಿ ರದ್ದಾಗಿದೆ! ಈ ಯೋಜನೆಯಡಿ ಮಾರಾಟವಾಗುತ್ತಿರುವ ಬಲ್ಬ್ಗಳ ಗುಣಮಟ್ಟ ಪ್ರಶ್ನಾರ್ಹವಾಗಿರುವುದರಿಂದಲೇ ದೊಡ್ಡ ಸಂಖ್ಯೆಯ ಬಲ್ಬ್ಗಳು ಹಾಳಾಗಿ ಕಂಪನಿಗಳಿಗೆ ವಾಪಸಾಗುತ್ತಿರುವುದು. ಅದೇ ಹೊರ ಮಾರುಕಟ್ಟೆಯಲ್ಲಿ ಸಿಗುವ ಬಲ್ಬ್ ವರ್ಷ, ಎರಡು ವರ್ಷ ಅತ್ಯುತ್ತಮವಾಗಿ ಸೇವೆ ಸಲ್ಲಿಸುತ್ತಿವೆ. ಅಂದರೆ ಸರ್ಕಾರಿ ಯೋಜನೆಯಡಿ ಮಾರಾಟವಾಗುವ ಬಲ್ಬ್ಗಳ ಗುಣಮಟ್ಟವನ್ನು ಕೆಳದರ್ಜೆಗೆ ಇಳಿಸಿರುವ ಅನುಮಾನ ಸತ್ಯವಾಗುತ್ತದೆ. ಇಇಎಸ್‌ಎಲ್ ವೆಬ್ ಗ್ರಾಹಕ ಬದಲಿಸಿಕೊಂಡ ಬಲ್ಬ್ಗಳ ಲೆಕ್ಕ ಮಾತ್ರ ಕೊಡುವುದಿಲ್ಲ! ತಪ್ಪು ಮಾಡಿದ್ದು ಗ್ಯಾರಂಟಿ!
ಸರ್ಕಾರ ಮೂರು ವರ್ಷಗಳ ಗ್ಯಾರಂಟಿಗಿಂತ ಒಂದು ವರ್ಷದ ಗ್ಯಾರಂಟಿ ಇಟ್ಟು ಅತ್ಯುತ್ತಮ ಗುಣಮಟ್ಟದ ಬಲ್ಬ್ಗಳನ್ನು ಮಾರಾಟ ಮಾಡುವಂತೆ ಏಜೆನ್ಸಿಗಳನ್ನು ನೇಮಿಸಿಕೊಳ್ಳಬೇಕಿತ್ತು. 100ರಲ್ಲಿ ಕೇವಲ ಒಂದೆರಡು ಸಮಸ್ಯೆ ಎಂತಾದರೆ ಜನ ಎಲ್‌ಇಡಿ ಮೇಲೆ ಭರವಸೆ ಹೊಂದುತ್ತಿದ್ದರು. ಈಗ ಸರ್ಕಾರವೂ ವಿಶ್ವಾಸ ಕಳೆದುಕೊಂಡಿದೆ, ಬಲ್ಬ್ ಕೂಡ. ಇದೇ ಯೋಜನೆಯಡಿಯ ಟ್ಯೂಬ್‌ಲೈಟ್, ಫ್ಯಾನ್ ಯೋಜನೆ ಕೂಡ ಗ್ರಾಹಕ ಪರ ಎನ್ನುವಂತಿಲ್ಲ. ಈಗೇನೋ ಬಲ್ಬ್ಗಳ ಮಾರಾಟಕ್ಕೆ ಹೊಸ ಏಜೆನ್ಸಿ ನಿಗದಿಗೊಂಡಿದೆ. ಅವು ಎಸ್ಕಾಂಗಳ ಆವರಣದಲ್ಲಿ ಕೌಂಟರ್ ತೆರೆದಿವೆ. ಒಂದು ರಿಯಾಲಿಟಿ ಚೆಕ್ ಅನ್ವಯ, ಎಲ್ಲೆಲ್ಲಿ ಈ ಕೌಂಟರ್ ಮತ್ತೆ ತೆರೆಯಲಾಗಿದೆಯೋ ಅಲ್ಲೆಲ್ಲ ಹಾಳಾದ ಬಲ್ಬ್ಗಳನ್ನು ವಾಪಾಸು ಪಡೆಯಲಾಗಿದೆ. ಕೇಂದ್ರದ ಗುರಿ 2019ರ ಮಾರ್ಚ್ ಅಂತ್ಯಕ್ಕೆ ದೇಶದ 100 ನಗರಗಳಲ್ಲಿ ಒಟ್ಟು 770 ಮಿಲಿಯನ್ ಎಲ್‌ಇಡಿ ಬಲ್ಬ್ಗಳನ್ನು ಮಾರುವುದಾಗಿದೆ. ಒಮ್ಮೆ ಈ ಏಜೆನ್ಸಿಗಳು 2019ರಲ್ಲಿ ಮುಚ್ಚಿಬಿಟ್ಟರೆ ಆಗ ಗ್ಯಾರಂಟಿ ಜವಾಬ್ದಾರಿಯನ್ನು ನಿರ್ವಹಿಸುವವರಾರು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಬದಲಿಸುವಾಗಿನ ನಿಯಮಗಳ ಬಗ್ಗೆಯೂ ಸ್ಪಷ್ಟ ಚೌಕಟ್ಟು ಇಲ್ಲ. ಹಲವೆಡೆ ಕೇವಲ ಬಲ್ಬ್ ತಂದದ್ದನ್ನೇ ಸಾಕ್ಷಎಂದು ಪರಿಗಣಿಸಿ ಬದಲಿಸಿ ಕೊಡಲಾಗಿದೆ. ಹಲವು ಸಂದರ್ಭಗಳಲ್ಲಿ ಈ ಹಿಂದೆ ಖರೀದಿ ಸಮಯದ ಬಿಲ್ ಕೇಳಲಾಗಿದೆ. ಈ ಬಿಲ್‌ನಲ್ಲಿ ಬಲ್ಬ್ ಬದಲಿಸಿದ ದಿನಾಂಕ, ಬಲ್ಬ್ ಸಂಖ್ಯೆಯನ್ನು ನಮೂದಿಸಿದ್ದನ್ನು ಕಾಣುತ್ತೇವೆ. ಇಇಎಸ್‌ಎಲ್‌ಗೆ ಟ್ವೀಟ್ ಮೂಲಕ ದೂರು ಸಲ್ಲಿಸಿದ ಗ್ರಾಹಕರೊಬ್ಬರಿಗೆ ಕೇಂದ್ರ ಸರ್ಕಾರ ಸ್ಪಷ್ಟವಾಗಿ ತಿಳಿಸಿದೆ, ಹಾಳಾದ ಬಲ್ಬ್ ಬದಲಾಯಿಸಿಕೊಳ್ಳುವಾಗ ಬಿಲ್ ಕಡ್ಡಾಯವಲ್ಲ. ಬಲ್ಬ್ ಡಿಇಎಲ್‌ಪಿ ಅಥವಾ ಉಜಾಲಾ ಬ್ರಾಂಡ್ ಆಗಿರಬೇಕು ಎಂದು ಹೇಳಿದೆ. ಸಧ್ಯಕ್ಕಂತೂ ದೂರು ದಾಖಲಿಸಲು ವಿವಿಧ ಅವಕಾಶಗಳನ್ನು ಕೇಂದ್ರ ಸರ್ಕಾರ ಕಲ್ಪಿಸಿದೆ. ದೂರವಾಣಿ ಸಂಖ್ಯೆ 155275 ಅಥವಾ 1800 180 3580 ಮೂಲಕ ದೂರು ದಾಖಲಿಸಬಹುದು. mailto:helpline@eesl.co.in ಗೆ ಮೈಲ್ ಮಾಡಿ ದೂರು ಸಲ್ಲಿಸಬಹುದು. ಇನ್ನೂ ಸುಲಭದ ಹಾದಿ ಎಂದರೆ www.support.eeslindia.orgಗೆ ತೆರಳಿ ನೇರವಾಗಿ, ಸುಲಭವಾಗಿ ದೂರು ಫಾರಂ ತುಂಬಬಹುದು. ಸದ್ಯ ಹಾಳಾದ ಬಲ್ಬ್ ಬದಲಿಸಿ ಕೊಡುವ ಪ್ರಕ್ರಿಯೆ ನಡೆದಿರುವುದರಿಂದ ಬಹುತೇಕ ಗ್ರಾಹಕರು ಸಂತುಷ್ಟರಾಗಿದ್ದಾರೆ. ಅದಕ್ಕಾಗಿ ಮಾಡಿದ ತಿರುಗಾಟ, ಸುಸ್ತುಗಳನ್ನು ಕೂಡ ಅವರು ಲೆಕ್ಕಕ್ಕೆ ಇಟ್ಟುಕೊಂಡಿಲ್ಲ. ಈಗ ಬರೀ 220 ರೂ.ಗೆ ಎಲ್‌ಇಡಿ ಟ್ಯೂಬ್‌ಲೈಟ್ ಲಭ್ಯವಾಗುತ್ತಿರುವುದರಿಂದ ಅದರ ಬೆನ್ನಿಗೆ ಬಿದ್ದಿದ್ದಾರೆ. 375, 400 ರೂ. ಕನಿಷ್ಠ ಬೆಲೆಯ ಟ್ಯೂಬ್‌ಲೈಟ್‌ಗೆ ಇಲ್ಲಿನ ದರ ಲಾಭದಾಯಕವೇ. ಗ್ಯಾರಂಟಿಯ ಅಂಶವನ್ನು ಮನಸ್ಸಿನಿಂದ ಹೊರಹಾಕಿ ಖರೀದಿಸಬಹುದು! ಮಾ.ವೆಂ.ಸ.ಪ್ರಸಾದ್, ದತ್ತಿ ನಿರ್ದೇಶಕರು, ಬಳಕೆದಾರರ ವೇದಿಕೆ, ಸಾಗರ