ಹುಬ್ಬಳ್ಳಿ: ಶಿಗ್ಗಾವಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಗ್ಗೆ ಸಂಸದ ಬಸವರಾಜ ಬೊಮ್ಮಾಯಿ ಅನಗತ್ಯ ಅಪಪ್ರಚಾರ ಮಾಡುತ್ತಿದ್ದು, ಸಿಎಂ ಆಗಿದ್ದವರು ಈ ರೀತಿ ಹೇಳಿಕೆ ನೀಡುವ ಬದಲು, ಸ್ಪಷ್ಟವಾಗಿ ಹೇಳಿಕೆ ನೀಡಲಿ ಎಂದು ಸಚಿವ ಶಿವಾನಂದ ಪಾಟೀಲ ಒತ್ತಾಯಿಸಿದರು.
ನ. 12ರ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿಗ್ಗಾವಿ ಕಾಂಗ್ರೆಸ್ ಅಭ್ಯರ್ಥಿ ವಿರುದ್ದ ರೌಡಿಶೀಟರ್ ಕೇಸ್ ಇದೆ ಎಂದು ಬಸವರಾಜ ಬೊಮ್ಮಾಯಿ ಆರೋಪಿಸಿದ್ದು, ಹಾವೇರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೇಲೆ ಒತ್ತಡ ತಂದು ಹೇಳಿಕೆ ಬದಲಿಸಲಾಗಿದೆ. ಚುನಾವಣಾ ಅಧಿಕಾರಿ ಮೇಲು ಪ್ರಭಾವ ಬೀರಲಾಗಿದೆ ಎಂದು ಆರೋಪಿಸಿದ್ದಾರೆ.
ಯಾರು ಪ್ರಭಾವ ಬೀರಿದ್ದಾರೆ ಎಂಬುದನ್ನು ಬೊಮ್ಮಾಯಿಯವರು ಬಹಿರಂಗಪಡಿಸಲಿ. ಒಂದು ವೇಳೆ ನಾನು ಪ್ರಭಾವ ಬೀರಿದ್ದೇನೆ ಎಂದು ಸಾಬೀತುಪಡಿಸಿದರೆ ರಾಜಕೀಯ ನಿವೃತ್ತಿ ಘೋಷಿಸುವೆ ಎಂದು ಹೇಳಿದರು.
ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ನಾನಾಗಲಿ, ಸಿಎಂ, ಡಿಸಿಎಂ ಯಾರು ಪ್ರಭಾವ ಬೀರಿದ್ದಾರೆ ಎಂದು ಹೇಳಲಿ. ಎಸ್ಪಿ ಅವರ ಹೆಸರನ್ನು ದುರ್ಬಳಕೆ ಮಾಡಿಕೊಂಡಿದ್ದು ತಪ್ಪು. ಮುಸ್ಲಿಂ ಅಭ್ಯರ್ಥಿ ಎಂಬ ಕಾರಣಕ್ಕೆ ಈ ರೀತಿ ಆರೋಪಿಸಲಾಗುತ್ತಿದೆ. ಮುಸ್ಲಿಂ ಅಭ್ಯರ್ಥಿ ಸ್ಪರ್ಧಿಸಿದಾಗಲೆಲ್ಲ. ಇಂತಹ ಅಪಪ್ರಚಾರ ಮಾಡಲಾಗುತ್ತಿದೆ ಎಂದರು.
ಈ ಹಿಂದೆ ಅಜ್ಜಂಪುರ ಖಾದ್ರಿ ಸ್ಪರ್ಧಿಸಿದಾಗ ಅವರು ಖಾದ್ರಿಯವರು, ಭಯೋತ್ಪಾದಕರೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ಆರೋಪಿಸಿ ಬಸವರಾಜ ಬೊಮ್ಮಾಯಿ ಗೆದ್ದಿದ್ದರು.ಇದೀಗ ಮಗನ ಗೆಲುವಿಗೆ ಕಾಂಗ್ರೆಸ್ ಅಭ್ಯರ್ಥಿ ವಿರುದ್ದ ರೌಡಿಶೀಟರ್ ಕೇಸ್ ಇದೆ ಎಂದು, ಹಿಂದು-ಮುಸ್ಲಿಂ ವಿಚಾರ ಕೆದಕುವ ಕೆಲಸ ಮಾಡಿದ್ದಾರೆ. ಇದು ರಾಜಕೀಯ ದುರ್ದೈವ ಎಂದು ಹೇಳಿದರು.
ರಾಜಕೀಯದಲ್ಲಿ ವೈಯಕ್ತಿಕ ನಿಂದನೆಗಿಳಿಯಬಾರದು. ಎಚ್.ಡಿ.ಕುಮಾರಸ್ವಾಮಿಗೆ ಕರಿಯಾ ಎಂಬ ಹೇಳಿದ್ದನ್ನು ನಾನು ಒಪ್ಪುವುದಿಲ್ಲ ಎಂದರು.