Advertisement

Medicine ಅದಲು ಬದಲು : ಔಷಧಾಲಯ ಮಾಲಕರಿಂದ ಕ್ಷಮೆ; ವೆಚ್ಚ ಪಾವತಿ

11:11 PM Oct 25, 2023 | Team Udayavani |

ಉಪ್ಪಿನಂಗಡಿ: ವೈದ್ಯರು ಸೂಚಿಸಿದ ಔಷಧವನ್ನು ಔಷಧಾಲಯದ ಸಿಬಂದಿ ಬದಲಾಯಿಸಿ ಬೇರೊಂದು ಔಷಧ ನೀಡಿದ ಪರಿಣಾಮ ರೋಗಿಯೋರ್ವರ ಅನಾರೋಗ್ಯ ಉಲ್ಬಣಿಸಿದ ಘಟನೆಗೆ ಸಂಬಂಧಿಸಿ ತಪ್ಪಿತಸ್ಥ ಔಷಧಾಲಯದ ಮಾಲಕರು ನಷ್ಟ ಮೊತ್ತವನ್ನು ಪಾವತಿಸಿದ ಘಟನೆ ವರದಿಯಾಗಿದೆ.

Advertisement

ಉಪ್ಪಿನಂಗಡಿಯಲ್ಲಿ ವಾಸ್ತವ್ಯ ಇರುವ ಫಾತಿಮಾ (ಹೆಸರು ಬದಲಾಯಿಸಲಾಗಿದೆ) ನರ ದೌರ್ಬಲ್ಯದ ಕಾರಣಕ್ಕೆ ಮಂಗಳೂರಿನ ವೈದ್ಯರಿಂದ ತಪಾಸಣೆ ನಡೆಸಿ, ಅಗತ್ಯ ಔಷಧ ಪಡೆಯುವಂತೆ ಸೂಚಿಸಿದ್ದರು. ವೈದ್ಯರ ಚೀಟಿಯನ್ನು ಅಲ್ಲಿನ ಔಷದಾಲಯವೊಂದಕ್ಕೆ ನೀಡಿದಾಗ ಅವರು ಬೇರೊಂದು ಔಷಧ ನೀಡಿದ್ದರು. ಆ ಔಷಧ ಸೇವಿಸಿದ ರೋಗಿಯ ಅನಾರೋಗ್ಯ ಉಲ್ಬಣಿಸಿದಾಗ ಪುತ್ತೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಈ ವೇಳೆ ವೈದ್ಯರು ರೋಗಿ ಈ ಹಿಂದೆ ಪಡೆದುಕೊಂಡ ಔಷಧಗಳನ್ನು ಪರಿಶೀಲಿಸಿದಾಗ ಔಷಧ ಬದಲಾಗಿರುವುದು ತಿಳಿದುಬಂತು. ಬಿಲ್‌ ಪರಿಶೀಲಿಸಿದಾಗ ಮಂಗಳೂರಿನ ಔಷಧಾಲಯದ ಸಿಬಂದಿಯ ಕರ್ತವ್ಯ ಲೋಪವೇ ಕಾರಣವೆಂದು ತಿಳಿಯಿತು. ಈ ಬಗ್ಗೆ ರೋಗಿಯ ಕುಟುಂಬಸ್ಥರು ಮಂಗಳೂರಿನ ಔಷಧಾಲಯವನ್ನು ಸಂಪರ್ಕಿಸಿ ಔಷಧ ಬದಲಾದ ವಿಷಯ ತಿಳಿಸಿ ದೂರು ನೀಡುವುದಾಗಿ ಎಚ್ಚರಿಸಿದರು.

ಎಚ್ಚೆತ್ತ ಔಷಧಾಲಯದವರು ಸಿಬಂದಿಯ ಪ್ರಮಾದಕ್ಕಾಗಿ ಕ್ಷಮೆಯಾಚಿಸಿ ಆಸ್ಪತ್ರೆ ವೆಚ್ಚ 25,760 ರೂ.ಗಳನ್ನು ಚೆಕ್‌ ಮೂಲಕ ಪಾವತಿಸಿದ್ದಲ್ಲದೇ ಮುಂದಿನ ಎರಡು ತಿಂಗಳು ರೋಗಿ ತೆಗೆದುಕೊಳ್ಳುವ ಔಷಧದ ಖರ್ಚನ್ನು ಭರಿಸುವುದಾಗಿ ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next