ಚಿಕ್ಕಮಗಳೂರು: ನಗರಸಭೆ ಅಧಿಕಾರಿಗಳು ಬುಧವಾರ ನಗರದ ಮಾರ್ಕೆಟ್ ರಸ್ತೆಯ ದಿನಸಿ ಅಂಗಡಿಗಳಿಗೆ ದಿಢೀರ್ ದಾಳಿ ನಡೆಸಿ ಪ್ಲಾಸ್ಟಿಕ್ ವಶಪಡಿಸಿಕೊಂಡು ಅಂಗಡಿ ಮಾಲೀಕರಿಗೆ ದಂಡ ವಿಧಿಸಿದ ಘಟನೆ ನಡೆಯಿತು.
ನಗರದ ಮಾರ್ಕೆಟ್ ರಸ್ತೆಯಲ್ಲಿರುವ ಕೆಂಚಾಂಬ ಟ್ರೇಡರ್ಗೆ 10ಸಾವಿರ ರೂ. ಹಾಗೂ ಕೆಂಚಾಂಬ ಕಮರ್ಶಿಯಲ್ ಅಂಗಡಿಗೆ 5ಸಾವಿರ ದಂಡ ವಿಧಿಸಿದರು. ಆ ನಂತರ ಖಚಿತ ಮಾಹಿತಿ ಆದರಿಸಿ ಷರೀಫ್ ಗಲ್ಲಿಯ ಗಜೇಂದ್ರ ಕುಮಾರ್ ಎಂಬುವವರಿಗೆ ಸೇರಿದ ಗೋಡಾನ್ ಮೇಲೆ ದಾಳಿ ನಡೆಸಿದರು. ಅಲ್ಲಿ ಸುಮಾರು 30 ಸಾವಿರ ರೂ. ಮೌಲ್ಯದ ಪ್ಲಾಸ್ಟಿಕ್ ದೊರೆತಿದ್ದು, ಅವುಗಳನ್ನು ಸ್ಥಳದಲ್ಲಿಯೇ ನಾಶಮಾಡಿ 15 ಸಾವಿರ ದಂಡ ವಿಧಿಸಲಾಯಿತು. ನಗರಸಭೆ ಆಯುಕ್ತೆ ತುಷಾರ ಮಣಿ ಮಾತನಾಡಿ, ಈ ಹಿಂದೆ ಎರಡು ಬಾರಿ ಅಂಗಡಿ ಮಾಲೀಕರಿಗೆ ಪ್ಲಾಸ್ಟಿಕ್ ಬಳಸದಂತೆ
ಎಚ್ಚರಿಕೆ ನೀಡಲಾಗಿತ್ತು. ಆದರೂ ಕೂಡ ಕೆಲವು ಅಂಗಡಿಗಳಲ್ಲಿ ಪ್ಲಾಸ್ಟಿಕ್ ಬಳಸಲಾಗುತ್ತಿದೆ ಎಂದು ತಿಳಿಸಿದರು.
ಅಂಗಡಿ ಮಾಲೀಕರಿಗೆ ಇದೊಂದು ಎಚ್ಚರಿಕೆ ಗಂಟೆಯಾಗಿದ್ದು, ಯಾವ ಅಂಗಡಿಗಳಲ್ಲಿ ಪ್ಲಾಸ್ಟಿಕ್ ಬಳಕೆ ಮಾಡಲಾಗುತ್ತಿದೆಯೋ ಅಂತಹ ಅಂಗಡಿಗಳಿಗೆ ದಾಳಿ ನಡೆಸಿ ಪ್ಲಾಸ್ಟಿಕ್ ವಶಪಡಿಸಿಕೊಂಡು ದಂಡ ವಿಧಿಸಲಾಗುವುದು ಎಂದರು.
ನಗರವನ್ನು ಪ್ಲಾಸ್ಟಿಕ್ ಮುಕ್ತ ನಗರ ಮಾಡಲು ನಗರಸಭೆ ಮುಂದಾಗಿದೆ. ಅಂಗಡಿ ಮಾಲೀಕರು ಎಷ್ಟೆ ವಿರೋಧ ವ್ಯಕ್ತಪಡಿಸಿದರೂ ಪ್ಲಾಸ್ಟಿಕ್ ವಶಪಡಿಸಿಕೊಳ್ಳಲಾಗುವುದು. ಇಂದು ಒಂದು ಟ್ರಾಕ್ಟರ್ ಪ್ಲಾಸ್ಟಿಕ್ ವಶಪಡಿಸಿಕೊಂಡು ನಾಶಪಡಿಸಲಾಗಿದೆ. ಅಂಗಡಿ ಮಾಲೀಕರು ಪ್ಲಾಸ್ಟಿಕ್ ಬಳಕೆ ಮಾಡದಂತೆ ಎಚ್ಚೆತ್ತುಕೊಳ್ಳಬೇಕು. ಸಾರ್ವಜನಿಕರೂ ಪ್ಲಾಸ್ಟಿಕ್ ಬಳಕೆ ಮಾಡಬಾರದು. ತರಕಾರಿ ಹಾಗೂ ಇನ್ನಿತರೆ ಪದಾರ್ಥಗಳನ್ನು ಖರೀದಿಸಲು ಹೋಗುವ ಸಂದರ್ಭದಲ್ಲಿ ಮನೆಯಿಂದಲೇ ಕೈಚೀಲಗಳನ್ನು ತರುವುದು ಒಳ್ಳೆಯದು ಎಂದರು. ದಿಢೀರ್ ಕಾರ್ಯಾಚರಣೆಯಲ್ಲಿ ನಗರಸಭೆ ಅಧ್ಯಕ್ಷೆ ಕವಿತಾ ಶೇಖರ್, ಶ್ವೇತಾ ಇದ್ದರು.