ಹುಬ್ಬಳ್ಳಿ: ನೈಋತ್ಯ ರೈಲ್ವೆ ವಲಯ ಮಲಪ್ರಭಾ ಮತ್ತು ಕೃಷ್ಣಾ ನದಿಗಳ ನೀರಿನ ಮಟ್ಟ ಅಳೆಯುವಿಕೆ ಹಾಗೂ ಅಪಾಯ ಸ್ಥಿತಿ ಮುನ್ಸೂಚನೆ ನಿಟ್ಟಿನಲ್ಲಿ ತಂತ್ರಜ್ಞಾನ ಆಧಾರಿತ ಸಾಧನ ಅಳವಡಿಸಿದ್ದು, ಇದು ನದಿಗಳ ನೀರಿನ ಮೇಲ್ವಿಚಾರಣೆಗೆ ಸಹಕಾರಿ ಆಗಲಿದೆ.
ರೈಲ್ವೆ ಸೇತುವೆಗಳಲ್ಲಿನ ನೀರಿನ ಮಟ್ಟವನ್ನು ನಿಯಮಿತವಾಗಿ ಮೇಲ್ವಿಚಾರಣೆ ಮಾಡಬೇಕಾಗುತ್ತದೆ. ಮಳೆಗಾಲದಲ್ಲಿ ನೀರಿನ ಮಟ್ಟ ಗರಿಷ್ಠ ಮಿತಿ ತಲುಪಿದಾಗ ಮತ್ತು ಸೂಕ್ತ ಕ್ರಮ ಕೈಗೊಳ್ಳಲು ಅದು ಅಗತ್ಯವಾಗಿರುತ್ತದೆ. ಇದುವರೆಗೆ ನದಿಯ ನೀರಿನ ಮಟ್ಟವನ್ನು ಸಾಮಾನ್ಯವಾಗಿ ಸೇತುವೆಯ ಕಟ್ಟೆಗಳಲ್ಲಿ ಹಾಕಿದ ಗುರುತುಗಳಿಗೆ ಸಂಬಂಧಿಸಿ ಮ್ಯಾನುವೆಲ್ ರೂಪದಲ್ಲಿ ಮೇಲ್ವಿಚಾರಣೆ ಮಾಡಲಾಗುತ್ತಿತ್ತು. ಮಳೆಗಾಲ ಸಂದರ್ಭದಲ್ಲಿ ನಿರಂತರವಾಗಿ ನದಿಯ ನೀರಿನ ಮಟ್ಟವನ್ನು ದೂರದಿಂದಲೇ ಮೇಲ್ವಿಚಾರಣೆ ಮಾಡಲು ಇಂಟಲಿಜೆಂಟ್ ಫಿಲ್ಡ್ ಡಿವೈಸ್‌ನೊಂದಿಗೆ ಸಾಧ್ಯವಿದೆ.
ಇದು ನದಿಮಟ್ಟದ ದತ್ತಾಂಶವನ್ನು ಕೇಂದ್ರ ಸ್ಥಾನದಲ್ಲಿರುವ ಸರ್ವರ್ ಗೆ ರವಾನಿಸುತ್ತದೆ. ನೈಋತ್ಯ ರೈಲ್ವೆ ವಲಯ ನದಿನೀರಿನ ಮಟ್ಟ ಮೇಲ್ವಿಚಾರಣೆ ಮಾಡಲು ಹುಬ್ಬಳ್ಳಿ ವಿಭಾಗ ವ್ಯಾಪ್ತಿಯ ಪ್ರಮುಖ ಎರಡು ಸೇತುವೆಗಳಾದ ಲೋಡಾ-ಮಿರಜ್ ವಿಭಾಗದ ಗುಂಜಿ ಮತ್ತು ಖಾನಾಪುರ ರೈಲ್ವೆ ನಿಲ್ದಾಣ ನಡುವಿನ ಮಲಪ್ರಭಾ ನದಿಯ ಸೇತುವೆ ನಂ.44 ಹಾಗೂ ಕುಡಚಿ ಮತ್ತು ಉಗಾರ ಖುರ್ದ ರೈಲ್ವೆ ನಿಲ್ದಾಣ ನಡುವಿನ ಕೃಷ್ಣಾ ನದಿಯ ಸೇತುವೆ ನಂ.184ರಲ್ಲಿ ನದಿ ಮಟ್ಟದ ಮೇಲ್ವಿಚಾರಣೆ ಸಾಧನಗಳನ್ನು ಸ್ಥಾಪಿಸಿದೆ. ಮಳೆಗಾಲದಲ್ಲಿ ವಿಶೇಷವಾಗಿ ಮಳೆ ನೀರು ಹಿಡಿಯುವ ಪ್ರದೇಶಗಳಲ್ಲಿ, ಹೆಚ್ಚುವರಿ/ ಹಠಾತ್ ನೀರಿನ ಹರಿವು ಅಥವಾ ಪ್ರವಾಹ ಪ್ರಮಾಣ ಮೇಲ್ವಿಚಾರಣೆ ಮಾಡಲು ಈ ಸಾಧನಗಳು ಸುರಕ್ಷಿತ ಪರ್ಯಾಯವಾಗಿ ಕಾರ್ಯ ನಿರ್ವಹಿಸುತ್ತವೆ.
ಈ ಸಾಧನದ ಸ್ಥಾಪನೆಯಿಂದ ನದಿನ ಮಟ್ಟದಲ್ಲಿನ ನೀರನ್ನು ಯಾವುದೇ ಸಮಯದಲ್ಲೂ ಸರಳವಾಗಿ ಇಂಟರ್‌ನೆಟ್ ಬ್ರೌಸರ್ ಮೂಲಕ ಮೇಲ್ವಿಚಾರಣೆ ಮಾಡಬಹುದು. ಆ ಮೂಲಕ ನದಿ ನೀರಿನ ನಿಯಮಿತ ಮಟ್ಟ, ಅಪಾಯದ ಮಟ್ಟ ಇಲ್ಲವೆ ಹೆಚ್ಚಿನ ಪ್ರವಾಹ ಮಟ್ಟ ಸೇರಿದಂತೆ ಇನ್ನಿತರೆ ಮಿತಿಗಳ ಆಧಾರದ ಮೇಲೆ ಬಳಕೆದಾರರಿಗೆ ಎಸ್‌ಎಂಎಸ್ ಸಂದೇಶಗಳನ್ನು ಸ್ವೀಕರಿಸಲು ಸಾಧ್ಯವಾಗುತ್ತದೆ. ಯಾವುದೇ ಆತಂಕಕಾರಿ ಸ್ಥಿತಿಯನ್ನು ತಕ್ಷಣವೇ ಸಂಬಂಧಪಟ್ಟ ಅಧಿಕಾರಿಯ ಮೊಬೈಲ್ ಫೋನ್‌ಗೆ ಕೇಂದ್ರ ಸರ್ವರ್ ರಚಿಸಿದ ಎಸ್‌ಎಂಎಸ್ ಮೂಲಕ ತಿಳಿಸಲಾಗುತ್ತದೆ. ಆಗ ಅಧಿಕಾರಿ ಸಮಸ್ಯೆ ಸರಿಪಡಿಸಲು ಮತ್ತು ಅಗತ್ಯ ನಿರ್ಧಾರ ಕೈಗೊಳ್ಳಲು ತಕ್ಷಣ ಕ್ರಮ ತೆಗೆದುಕೊಳ್ಳಬಹುದು. ತಲಾ 10ಲಕ್ಷ ರೂ. ವೆಚ್ಚದಲ್ಲಿ ಈ ನೀರಿನ ಮಟ್ಟದ ಮೇಲ್ವಿಚಾರಣಾ ವ್ಯವಸ್ಥೆ ಪೂರ್ಣಗೊಳಿಸಲಾಗಿದೆ.
ಪಿಸಿಇ ವಿಜಯ ಅಗರವಾಲ ಮಾರ್ಗದರ್ಶನದಲ್ಲಿ ಸಿಪಿಡಿ/ಬಿಡಬ್ಲ್ಯೂ ಕೌಶಲ ಕಿಶೋರ ನೇತೃತ್ವದಲ್ಲಿ ಎಸ್‌ಡಬ್ಲ್ಯೂಆರ್ ನ ಸೇತುವೆ ಸಂಸ್ಥೆ ಈ ಕೆಲಸ ಕೈಗೊಂಡಿದೆ. ಈ ತಂತ್ರಜ್ಞಾನ ಅಳವಡಿಸಿಕೊಳ್ಳುವ ಮೂಲಕ ಸ್ವತ್ತುಗಳು ಮತ್ತು ತಡೆಸಾಧನಗಳ ಮೇಲ್ವಿಚಾರಣೆ, ನಿರ್ವಹಣೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡಲಾಗುತ್ತದೆ. ಈ ವ್ಯವಸ್ಥೆ ಸೇತುವೆಗಳ ಸುರಕ್ಷಿತ ನಿರ್ವಹಣೆಗೆ ರೈಲ್ವೆ ಇಂಜನಿಯರ್‌ಗಳಿಗೆ ಸಹಾಯ ಮಾಡುತ್ತದೆ ಎಂದು ನೈಋತ್ಯ ರೈಲ್ವೆಯ ಜಿಎಂ ಎ.ಕೆ.ಸಿಂಗ್ ಹೇಳಿದ್ದಾರೆ.