ಚಾಮರಾಜನಗರ: ಒಂದೇ ಸಮುದಾಯದ ಹುಡುಗ ಹುಡುಗಿ ಪರಿಚಯವಾದದ್ದು ಇನ್‌ಸ್ಟಾಗ್ರಾಂ ಮೂಲಕ. ಎಂಟು ತಿಂಗಳ ಪರಿಚಯ ಪ್ರಣಯದ ಫಲವಾಗಿ ಹುಡುಗನ ತಂದೆ ತಾಯಿಯ ಸಮ್ಮುಖದಲ್ಲೇ ಮದುವೆಯಾದರು. ಪ್ರೇಮಿಸಿ ವಿವಾಹವಾದ ಗಂಡ ತನ್ನ ಹೆಂಡತಿ ಗರ್ಭಿಣಿಯಾದ ನಂತರ ಆಕೆಯನ್ನು ಮನೆಯಿಂದ ಹೊರ ಹಾಕಿದ್ದು, ಯುವತಿ ಈಗ ನ್ಯಾಯಕ್ಕಾಗಿ ಪೊಲೀಸರ ಮೊರೆ ಹೋಗಿದ್ದಾಳೆ.
ನಗರದಲ್ಲಿ ಶನಿವಾರ ಈ ಕುರಿತು ತಮ್ಮ ಸಂಬಂಧಿಕರೊಡನೆ ಸುದ್ದಿಗೋಷ್ಠಿ ನಡೆಸಿದ ನೊಂದ ಯುವತಿ ನದಿಯಾ, ತನಗೆ ತಂದೆ ತಾಯಿ ಇಲ್ಲ. ತಮಿಳುನಾಡು ಸತ್ಯಮಂಗಲ ತಾಲೂಕಿನ ತಾನು, ತನ್ನ ತಾಯಿ 5 ವರ್ಷದ ಹಿಂದೆ ಅಪಘಾತದಲ್ಲಿ ಮೃತರಾದ ನಂತರ ಸೋದರಮಾವನ ಮನೆಯಾದ ಮೂಕನಪಾಳ್ಯದಲ್ಲಿ ವಾಸವಿದ್ದು ತಿರುಪ್ಪೂರಿನ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಿದ್ದೆ. ಇನ್ ಸ್ಟಾ ಮೂಲಕ ಪರಿಚಯವಾದ ಛಲಪತಿನಾಯಕ್ ನಾನು ಕಳೆದ 8 ತಿಂಗಳಿನಿಂದ ಪ್ರೀತಿಸುತ್ತಿದ್ದೆವು. ಒಳ್ಳೆಯ ಜೀವನ ಕೊಡುತ್ತೇನೆ ಎಂದು ವಿವಾಹವಾದರು. ಮದುವೆ ಸಂದರ್ಭದಲ್ಲಿ ಅವರ ತಂದೆತಾಯಿ ಕೂಡ ಇದ್ದರು. ನಮ್ಮ ಮನೆಯವರಿಗೆ ವಿಷಯ ತಿಳಿಸಿರಲಿಲ್ಲ. ನಮ್ಮ ತಾಯಿ ಅಪಘಾತದಲ್ಲಿ ಮೃತರಾದ ಕಾರಣ, ಪರಿಹಾರವಾಗಿ ಬಂದಿದ್ದ 5 ಲಕ್ಷ ರೂ.ನಗದು, 40 ಗ್ರಾಂ ಚಿನ್ನವನ್ನು ಮದುವೆ ಸಂದರ್ಭದಲ್ಲಿ ಗಂಡನ ಮನೆಯವರಿಗೆ ಕೊಟ್ಟಿದ್ದೇನೆ. ಗರ್ಭಿಣಿಯಾದ ಬಳಿಕ ನನ್ನನ್ನು ತ್ಯಜಿಸಿದ್ದಾರೆ. ಮೈಸೂರು ಜಿಲ್ಲೆಯ ಸರಗೂರು ತಾಲೂಕಿನ ಹಳೆಯಪಡಗು ಗ್ರಾಮದಲ್ಲಿರುವ ನಮ್ಮ ಸಂಬಂಧಿಕರ ಮನೆಯ ಹತ್ತಿರ ಬಿಟ್ಟು ಹೋದವರು, ನಂತರ ಬಂದು ಕರೆದುಕೊಂಡು ಹೋಗಲಿಲ್ಲ. ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ಎಲ್ಲಿದ್ದಾರೆ ಎಂಬುದು ಗೊತ್ತಾಗುತ್ತಿಲ್ಲ ಎಂದು ಅಳಲು ತೋಡಿಕೊಂಡರು.
ಹುಡುಗಿಯ ಸೋದರಮಾವ ಬಾಲಾಜಿನಾಯಕ್ ಮಾತನಾಡಿ, ನಮಗೆ ಗೊತ್ತಾಗದ ರೀತಿಯಲ್ಲಿ ಗ್ರಾಮದ ನಾಗುನಾಯಕ ಎಂಬುವರ ಮಗ ಛಲಪತಿನಾಯಕ್ ಹಣದಾಸೆಗಾಗಿ ಪ್ರೀತಿಯ ನಾಟಕವಾಡಿ ಮದುವೆ ಮಾಡಿಕೊಂಡು 40 ಗ್ರಾಂ.ಚಿನ್ನ, 5 ಲಕ್ಷ ರೂ. ಹಣ ಪಡೆದುಕೊಂಡು ಹುಡುಗಿ ಗರ್ಭಿಣಿಯಾದ ಬಳಿಕ ಮಗುವನ್ನು ಉಳಿಸಿಕೊಳ್ಳದೇ ಗರ್ಭಪಾತ ಮಾಡಿಸಿ, ನಂತರ ಈಕೆಯನ್ನು ಬೀದಿಗೆ ತಳ್ಳಿದ್ದಾರೆ. ಇವನ ವಿರುದ್ದ ಚಾಮರಾಜನಗರದ ಮಹಿಳಾ ಠಾಣೆಯಲ್ಲಿ ದೂರು ನೀಡಲಾಗಿದೆ. ಯಾವುದೇ ನ್ಯಾಯ ಸಿಕ್ಕಿಲ್ಲ ಈ ಸಂಬಂಧ ಎಸ್‌ಪಿ ಅವರಿಗೆ ದೂರು ಸಲ್ಲಿಸಲಾಗಿದೆ. ನಮ್ಮ ಹುಡುಗಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಮನವಿ ಮಾಡಿದ್ದಾರೆ. ಸಂಬಂಧಿಕರಾದ ಮಣಿನಾಯಕ, ಸುಶೀಲಾ ಬಾಯಿ, ಸೌಮ್ಯಾ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.