ನವದೆಹಲಿ : ಪ್ರಧಾನ ಮಂತ್ರಿ ನರೇಂದ್ರ ಮೋದಿಯನ್ನು ಸ್ಪೂರ್ತಿಯಾಗಿ ಪಡೆದು ಎಷ್ಟೋ ಜನ ಪದವೀಧರರು ಚಹಾ ಅಂಗಡಿಯನ್ನು ಇಟ್ಟು ಜೀವನ ಸಾಗಿಸುತ್ತಿದ್ದಾರೆ. ಇದೇ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರು ಕಳೆದ ಮೂರು ವರ್ಷದಿಂದ ಟೀ ಅಂಗಡಿ ನಡೆಸಿಕೊಂಡು ಬರುತ್ತಿದ್ದು, ಇದೀಗ ಪಂಚಾಯಿತಿ ಚುನಾವಣೆಗೆ ಸ್ಪರ್ಧೆ ಮಾಡುತ್ತಿದ್ದಾರೆ. ಇದಕ್ಕೆಲ್ಲ ನರೇಂದ್ರ ಮೋದಿಯೇ ಸ್ಪೂರ್ತಿ ಎಂದು ಹೇಳುತ್ತಾರೆ.
ಮೀರತ್ ಯೂನಿವರ್ಸಿಟಿಯಿಂದ ಪದವಿ ಪಡೆದಿರುವ ಮೀನಾಕ್ಷಿ ಎಂಬುವವರು ಮುಜಾಫರ್ ನಗರದ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಇವರ ಪತಿ ಗ್ಯಾನ್ ಸಿಂಗ್ ಕಾರ್ಪೆಂಟರ್ ಕೆಲಸ ಮಾಡುತ್ತಿದ್ದು ಪತ್ನಿಯ ಕನಸಿಗೆ ನೀರೆರೆದಿದ್ದಾರೆ.
ಮುಜಫರ್ ನಗರದ ಚೋರಾವಾಲಾ ಎಂಬಲ್ಲಿ ಟೀ ಅಂಗಡಿಯನ್ನು ನಡೆಸುತ್ತಿರುವ ಮೀನಾಕ್ಷಿ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ಯೋಜನೆಯಡಿಯಲ್ಲಿ ಚಹಾ ಅಂಗಡಿಯನ್ನು ಪ್ರಾರಂಭ ಮಾಡಿದ್ದಾರೆ.
ನಾನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಜೀವನದ ಹಾದಿಯನ್ನು ತಿಳಿದು, ಸ್ಪೂರ್ತಿ ಪಡೆದಿದ್ದೇನೆ. ಚಹಾವಾಲಾ ಆಗಿದ್ದ ಮೋದಿ ಮುಂದೆ ದೇಶದ ಪ್ರಧಾನಮಂತ್ರಿಯಾದರು. ಚಹಾವಾಲಿಯಾಗಿರುವ ನಾನೇಕೆ ಹಳ್ಳಿಯ ಮುಖ್ಯಸ್ಥೆಯಾಗಬಾರದು ಎಂದು ಹೇಳಿದ್ದಾರೆ. ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ನಡೆಸಲು ಇಚ್ಛಿಸಿರುವ ಮೀನಾಕ್ಷಿಯವರು ಯಾವ ರಾಜಕೀಯ ಪಕ್ಷದ ಸಹಾಯವನ್ನು ಬಯಸಿಲ್ಲವಂತೆ. ನನಗೆ ನನ್ನ ಹಳ್ಳಿ ಜನರ ಸಂಪೂರ್ಣ ಬೆಂಬಲ ಇದೆ ಎಂದಿದ್ದಾರೆ.
ಮೀನಾಕ್ಷಿಯವರ ಪತಿ ಗ್ಯಾನ್ ಸಿಂಗ್ ಹೇಳಿದ್ದು, ಈ ಹಿಂದೆ ನನ್ನ ಪತ್ನಿ ಗ್ರಾಮ ಪಂಚಾಯಿತಿಗೆ ಸ್ಪರ್ಧಿಸಿ ಗೆದ್ದಿದ್ದರು. ನಮ್ಮ ಹಳ್ಳಿಯವರು ಇದೀಗ ಮತ್ತೆ ಚುನಾವಣೆಗೆ ನಿಲ್ಲುವಂತೆ ಹೇಳಿರುವುದಾಗಿ ತಿಳಿಸಿದ್ದಾರೆ. ಇನ್ನು ಮೀನಾಕ್ಷಿಯವರಿಗೆ ಮೂರು ಮಕ್ಕಳಿದ್ದು, ಕಳೆದ ಮೂರು ವರ್ಷಗಳಿಂದ ಟೀ ಅಂಗಡಿ ನಡೆಸಿಕೊಂಡು ಬರುತ್ತಿದ್ದಾರೆ.