Advertisement

ಆಟೋವೇ ಅರಮನೆ : ಮೊಮ್ಮಕ್ಕಳ ಶಿಕ್ಷಣಕ್ಕಾಗಿ ಆಟೋ ಓಡಿಸಿ ಬದುಕು ಸಾಗಿಸುವ 74 ರ ವೃದ್ಧ

07:44 PM Feb 24, 2021 | ಸುಹಾನ್ ಶೇಕ್ |

ಜೀವನದ ದಿನನಿತ್ಯದ ಖರ್ಚನ್ನು ನಿಭಾಯಿಸುವುದು ಒಂದು ಸವಾಲು. ದುಡಿಯುವ ದೇಹಕ್ಕೆ ಗಳಿಸುವುದಕ್ಕಿಂತ, ಉಳಿಸಿಡುವುದು ಸುಲಭಕ್ಕೆ ನನಸಾಗದ ಕನಸಿನಂತೆ.! ಸಂಪಾದನೆಯಲ್ಲಿ ಕೊಂಚವಾದರು ಸ್ವಾರ್ಥವಾಗಿ ಯೋಚಿಸಿ ಹಣವನ್ನು ಭವಿಷ್ಯಕ್ಕೆ ಕೊಡಿಡುವ ಈ ದುಬಾರಿ ಕಾಲದ ದಿನದಲ್ಲಿ, ಕೆಲವೊಂದಿಷ್ಟು ವ್ಯಕ್ತಿತ್ವ ಜನ ಮನಕ್ಕೆ ಹತ್ತಿರವಾಗಿ ಗಮನ ಸೆಳೆಯುತ್ತಾರೆ.

Advertisement

ದಿನವಿಡೀ ದುಡಿದು ದಣಿಯುವ ಜೀವಕ್ಕೆ ಸ್ನಾಯುಗಳೆಲ್ಲ ವಿಶ್ರಾಂತಿ ಪಡೆಯುವ ನಿದ್ದೆಯೊಂದು ಬಂದರೆ ಮುಗಿಯಿತು. ಯಾವ ಜಂಜಾಟದ ಜಾಡು‌ ಕಾಡುವುದಿಲ್ಲ. ಆದರೆ ಇಲ್ಲೊಬ್ಬ ಹಿರಿಯ ವ್ಯಕ್ತಿ ದುಡಿಯುವ ಆಟೋದಲ್ಲೇ ರಾತ್ರಿಯ ದಣಿವು ನೀಗಿಸಿಕೊಂಡು, ಬದುಕನ್ನು ಸಾರ್ಥಕವಾಗಿ ನಡೆಸುತ್ತಿದ್ದಾರೆ.

ದೇಸ್ ರಾಜ್ ಜೋತ್ ಸಿಂಗ್ . ಮುಂಬಯಿ ಖಾರ್ ಸ್ಟೇಷನ್ ಬಳಿ ಕಳೆದ 24 ವರ್ಷಗಳಿಂದ ಆಟೋ ಚಾಲಕನಾಗಿ ದುಡಿಯುತ್ತಿದ್ದಾರೆ. ಈಗ ಅವರಿಗೆ ‌74 ವರ್ಷ. ಆದರೆ ಅವರೊಳಗಿನ ಉತ್ಸಾಹಕ್ಕೆ ಈಗ 24 ಹರೆಯ ಅಷ್ಟೇ.!

ದೇಸ್ ರಾಜ್ ಜೋತ್ ಸಿಂಗ್ ಅವರದು ತುಸು ದೊಡ್ಡ ಕುಟುಂಬವೇ. ನಾಲ್ಕು ಜನ ಮಕ್ಕಳ ಬಾಲ್ಯದಲ್ಲಿ ಮಗುವಾಗಿ, ಯೌವನದಲ್ಲಿ ಆಸೆ- ಆಕಾಂಕ್ಷೆಗಳನ್ನು ನೀಗಿಸುವ ಅಪ್ಪನಾಗಿ ಜವಾಬ್ದಾರಿ ‌ನಿಭಾಯಿಸುವುದು ಒಮ್ಮೆಗೆ ಓದಿ ಪರೀಕ್ಷೆ ಬರೆದು ಮುಗಿಸಿದಾಗೆ ಅಲ್ಲ. ಅದೊಂದು ದಿನ ನಿತ್ಯದ ಪ್ರಯತ್ನ – ಪ್ರತಿಫಲದ ತಪ್ಪಸ್ಸು.!

ಜೋತ್ ಸಿಂಗ್ ಅವರಿಗೆ ‌ಡ್ರೈವರ್ ಕೆಲಸವೊಂದು ಬಿಟ್ಟು ಬೇರೆ ಯಾವ ಕೆಲಸವೂ ಕೈಗೆ ಎಟುಕದ, ದೇಹ ಬಯಸದ ನಿರ್ಲಕ್ಷ್ಯವೇ ಆಗಿತ್ತು. ‌1986 ರಲ್ಲಿ ಮುಂಬಯಿಗೆ ಆಟೋಚಾಲಕರಾಗಿ ದುಡಿಯಲು ಆರಂಭಿಸಿದವರು ಇವತ್ತಿನವರೆಗೂ ತಮ್ಮ ವಯಸ್ಸು ಮೀರಿದರೂ ಬದುಕಿನ ಆಟೋವನ್ನು ಚಲಾಯಿಸುತ್ತಲೇ ಇದ್ದಾರೆ.

Advertisement

ದೇವರ ಆಟ  ; ಎಂಥಾ ದುರದೃಷ್ಟ ಶಾಪ..!

ಜೋತ್ ಸಿಂಗ್ ಅವರ ನಾಲ್ಕು ಮಕ್ಕಳಲ್ಲಿ ಎರಡನೇ ಮಗನಿಗೆ ಆಗಾಗ ಅನಾರೋಗ್ಯ ಸಮಸ್ಯೆ ಕಾಡುತ್ತಲೇ ಇತ್ತು, ಎರಡು ಬಾರಿ ನಡೆದ ಆಪರೇಷನ್, ಪರಿಹಾರ ಕಾಣಿಸುವ ಬದಲು, ಎಂದೂ ಮಾಸದ ದುಃಖವೊಂದನ್ನು  ನಿತ್ಯದ ನಿದ್ದೆಯೊಂದಿಗೆ ಅಂಟಿಸಿಕೊಂಡು ಹೋಯಿತು. ಅನಾರೋಗ್ಯದಿಂದ ಬಳಲುತ್ತಿದ್ದ ಜೋತ್ ಸಿಂಗ್ ಅವರ ಮಗ, ವಯಸ್ಸಲ್ಲದ ವಯಸ್ಸಿನಲ್ಲಿ ಇಹಲೋಕ ತ್ಯಜಿಸುತ್ತಾನೆ. ಈ ದುಃಖ ಎಂದೂ ಮರೆಯಾಗದ ದಟ್ಟ ಮೌನವಾಗಿ ಮನಸ್ಸಿನಲ್ಲಿ ಇರುವಾಗಲೇ, ಎರಡು ವರ್ಷದ ಬಳಿಕ, ಜೋತ್ ಅವರ ಇನ್ನೊಬ್ಬ ಮಗ ರೈಲ್ವೆ ಪಟ್ಟಿಗೆ ಜೀವಕೊಟ್ಟು ಬಲಿಯಾಗುತ್ತಾನೆ.

ಬೆಳೆದು ನಿಂತು, ದುಡಿದು ಹಾಕಬೇಕಿದ್ದ ಮಕ್ಕಳ ಅನಿರೀಕ್ಷಿತ ಸಾವಿನ ಆಘಾತ, ಜೋತ್ ರನ್ನು ಎಲ್ಲವನ್ನು ಸಹಿಸಿ, ಸೋಲಿಗೆ ಸವಾಲನ್ನು ಹಾಕಿ ಮುನ್ನುಗ್ಗುವಂತೆ ಮಾಡುತ್ತದೆ. ಹೆಂಡತಿ, ಮಕ್ಕಳು ಹಾಗೂ ಮೊಮ್ಮಕ್ಕಳನ್ನು ದೂರದ ತಮ್ಮ ಊರಿಗೆ ಕಳುಹಿಸಿ, ಜೋತ್ ಸಿಂಗ್, ‌ಮಗ ಸತ್ತ ದುಃಖವನ್ನು ಮನಸ್ಸಲೇ ಇಟ್ಟು,  ಹಸಿ ದುಃಖದ ಮುಖವನ್ನಿಟ್ಟುಕೊಂಡು ಎರಡು ದಿನದ ಬಳಿಕ ಆಟೋ ಹಿಡಿದು, ಬಾಡಿಗೆಗೆ ಹೊರಡುತ್ತಾರೆ. ಪರಿಸ್ಥಿತಿ ಮನಸ್ಥಿತಿಗಿಂತ ಭೀಕರವಾಗಿರುತ್ತದೆ..! ಜೋತ್ ಸಿಂಗ್,ದುಡಿದು ಹಣವನ್ನು ಮನೆಗೆ ಕಳುಹಿಸಿ‌ ಕೊಡಲು ಶುರು ಮಾಡುತ್ತಾರೆ. ಆದರೆ ಇದಕ್ಕೆ ಅವರು ಮಾಡಿದ ತ್ಯಾಗ ಇದೆಯಲ್ವಾ ಅದು ಸಾವಿರದಲ್ಲಿ ಕೈ ಲೆಕ್ಕಕ್ಕೆ ಸಿಗುವ ಜನರಷ್ಟೇ ಮಾಡ ಬಲ್ಲರು..

ಆಟೋವೇ ಅರಮನೆ ; ಆಸರೆ.. :

ಜೋತ್ ಸಿಂಗ್ ಅವರ ದುಡಿಮೆ , ಊರಿನಲ್ಲಿರುವ ಮಕ್ಕಳು, ಮೊಮ್ಮಕ್ಕಳ ಹೊಟ್ಟೆ ತುಂಬಿಸಲು, ಕನಸಿಗೆ ರೆಕ್ಕೆ ಕಟ್ಟಲು, ಮೊಮ್ಮಕ್ಕಳ ವಿದ್ಯಾಭ್ಯಾಸ ಮುಂದಸ ಸಾಗಲು ಅನಿವಾರ್ಯವಾಗಿತ್ತು. ಪ್ರತಿನಿತ್ಯ ಬೆಳಿಗ್ಗೆ 6 ಗಂಟೆಗೆ ಏಳುವ ಜೋತ್ ಸಿಂಗ್, ವಾಪಾಸು ರಿಕ್ಷಾ ನಿಲ್ಲಿಸಿ, ಅದರಲ್ಲೇ ಹೊದಿಕೆ,ದಿಂಬಿಗೆ ತಲೆಯಿಟ್ಟು ಮಲಗುವುದು ರಾತ್ರಿ 12 ರ ಬಳಿಕವೇ.  ನಿತ್ಯ ಕರ್ಮಕ್ಕೆ ಸುಲಭ ಶೌಚಾಲಯದ ಬಳಕೆ ಮಾಡುತ್ತಾರೆ. ಮಳೆ ಬಂದರೆ ರಿಕ್ಷಾದ ಎರಡು ಕಡೆಯ ರೈನ್ ಕೋರ್ಟ್ ಪರದೆಯನ್ನು ಅಡ್ಡಗಾವಲಿಟ್ಟು ಮಲಗುತ್ತಾರೆ.

ಲಾಕ್ ಡೌನ್ ಗಿಂತ ಮುಂಚೆ ದಿನ ನಿತ್ಯ 600- 800 ರೂಪಾಯಿ ದುಡುಯುತ್ತಿದ್ದ ಜೋತ್ ಸಿಂಗ್ , ಈಗ ದಿನಕ್ಕೆ 400-500 ರೂಪಾಯಿ ದುಡಿಯುತ್ತಾರೆ. ನಿತ್ಯ ದುಡಿದು, ಹೊಟ್ಟೆ ತುಂಬಿಸಲು ಹೊಟೇಲ್ ಹೋದಾಗ, ರಸ್ತೆ ಬದಿಯಿರುವ ಬಡವರು,ನಿರ್ಗತಿಕರಿಗೆ ಏನಾದ್ರು ಕೊಟ್ಟು ತಿನ್ನುವುದು ಇವರ ಮಾನವೀಯತೆಗೊಂದು ಸಾಕ್ಷಿ. ಇವರ ಕಥೆ ಹಲವು ವೈಬ್ ಸೈಟ್ ಗಳಲ್ಲಿ ಬಂದಿದೆ. ಅನೇಕ ಸಂಘ – ಸಂಸ್ಥೆ ಆರ್ಥಿಕ ಸಹಾಯಕ್ಕಾಗಿ ಮುಂದೆ ಬಂದು ದೇಣಿಗೆ ನೀದಿದೆ. ತಾನು ಹಣವನ್ನು ಪಡೆಯದೆ ನೇರವಾಗಿ ಮೊಮ್ಮಕ್ಕಳ ಖಾತೆಗೆ ಹಣವನ್ನು ಹಾಕಿಸಿ, ಅವರ ಒಳಿತು ಬಯಸುವ ಜೋತ್ ಸಿಂಗ್ ಬದುಕು, ದೇವರು ಮೆಚ್ಚುವ ವ್ಯಕ್ತಿತ್ವ ಎಂದರಯ ತಪ್ಪಾಗದು.

ಮೊಮ್ಮಗಳನ್ನು ಟೀಚರ್ ಮಾಡುವ ಉಮೇದು :

ಜೋತ್ ಸಿಂಗ್ ಪ್ರತಿ ತಿಂಗಳು, ಅಷ್ಟು – ಇಷ್ಟು ಉಳಿಸಿ, ಊರಿಗೆ ಒಂದಿಷ್ಟು ಹಣ ಕಳುಹಿಸಿ‌ ಕೊಡುತ್ತಾರೆ. ಅದು ಮೊಮ್ಮಕ್ಕಳ ವಿದ್ಯಾಭ್ಯಾಸಕ್ಕಾಗಿ. ತನ್ನ ಕಷ್ಟ ತನ್ನ ಮೊಮ್ಮಕ್ಕಳಿಗೆ ಬರಬಾರದು. ಮೊಮ್ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಜೋತ್ ಸಿಂಗ್ ತಮ್ಮ ಸ್ವಂತ ಮನೆಯನ್ನು ಮಾರಿದ್ದಾರೆ. ದೇಹದಲ್ಲಿ ಜೀವ ಇರುವವರಿಗೆ, ಕೈ ಕಾಲಿನಲ್ಲಿ ಶಕ್ತಿ ಇರುವವರಿಗೂ ದುಡಿಯುತ್ತೇನೆ ಎನ್ನುತ್ತಾರೆ ಜೋತ್ ಸಿಂಗ್. ಮೊಮ್ಮಗಳು ಕಲಿಯುವೆ ಎನ್ನುವವರೆಗೂ ಕಲಿಸುವೆ ಎನ್ನುವ ಜೋತ್ ಸಿಂಗ್ ಉತ್ಸಾಹ ಎಂಥವವರನ್ನು ಸ್ಪೂರ್ತಿಗೊಳಿಸದೆ ಬಿಡದು. ವರ್ಷಕ್ಕೆ ಒಂದೆರಡು ಬಾರಿ ಊರಿಗೆ ಹೋಗಿ ಬರುತ್ತಾರೆ. ನಿತ್ಯ ಮಗಳು,ಮೊಮ್ಮಕ್ಕಳೊಂದಿಗೆ ಫೋನಿನಲ್ಲಿ ಮಾತು.

ವಯಸ್ಸು ಮೀರಿದರೂ‌ ಮಾಸದ ಮನಸ್ಸಿನ ಉತ್ಸಾಹಕ್ಕೊಂದು ಸೆಲ್ಯೂಟು..

 

– ಸುಹಾನ್ ಶೇಕ್

Advertisement

Udayavani is now on Telegram. Click here to join our channel and stay updated with the latest news.

Next