ಹುಬ್ಬಳ್ಳಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬಸ್ ಅನ್ನು ಸಂಚಾರಿ ಫಿವರ್ ಕ್ಲಿನಿಕ್ ಆಗಿ ಮಾರ್ಪಡಿಸಲಾಗಿದೆ. ಕೋವಿಡ್-19 ಕಂಡು ಬಂದ ಹುಬ್ಬಳ್ಳಿ-ಧಾರವಾಡ ಪ್ರದೇಶದಲ್ಲಿ ಇದು ಸಂಚರಿಸಿ ಜ್ವರ, ಕೆಮ್ಮು ಹಾಗೂ ಉಸಿರಾಟದ ತೊಂದರೆ ಕಾಣಿಸಿಕೊಂಡವರನ್ನು ಪರೀಕ್ಷಿಸಲಾಗುವುದು ಎಂದು ಬೃಹತ್ ಮಧ್ಯಮ ಕೈಗಾರಿಕೆ, ಸಾರ್ವಜನಿಕ ಉದ್ದಿಮೆ ಹಾಗೂ ಜಿಲ್ಲಾ ಉಸ್ತವಾರಿ ಸಚಿವರಾದ ಜಗದೀಶ ಶೆಟ್ಟರ ಹೇಳಿದರು.
ಇಲ್ಲಿನ ಹೊಸೂರನ ಬಿಆರ್‌ಟಿಎಸ್ ಪ್ರಾದೇಶಿಕ ಬಸ್ ನಿಲ್ದಾಣದಲ್ಲಿನ ಕಂಟ್ರೋಲ್ ರೂಮ್ ಹಾಗೂ ಸಂಚಾರಿ ಫಿವರ್ ಕ್ಲಿನಿಕ್ ಪರಿಶೀಲಿಸಿ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಜಿಲ್ಲಾಡಳಿತ ಹಾಗೂ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ ವಿನೂತನ ಪ್ರಯತ್ನ ಮಾಡಲಾಗಿದ್ದು, ಇದು ರಾಜ್ಯದ ಮೊದಲ ಸಂಚಾರಿ ಫಿವರ್ ಕ್ಲಿನಿಕ್ ಆಗಿದೆ. ಕೊವೀಡ್-19 ಲಕ್ಷಣ ಕಂಡು ಬಂದರೆ ತಕ್ಷಣ ಅವರನ್ನು ಆಂಬ್ಯುಲೆನ್ಸ್ ನಿಂದ ಕಿಮ್ಸ್ ಕೊವೀಡ್ ಆಸ್ಪತ್ರೆಗೆ ಕಳುಹಿಸಿಕೊಡಲಾಗುವುದು. ಓರ್ವ ಡಾಕ್ಟರ್, ನರ್ಸ್, ಗ್ರೂಪ್ ಡಿ ನೌಕರರು ಸಂಚಾರಿ ಫೀವರ್ ಕ್ಲಿನಿಕ್‌ನಲ್ಲಿ ಕೆಲಸ ನಿರ್ವಹಿಸುತ್ತಾರೆ. ಥರ್ಮಲ್ ಸ್ಕ್ಯಾನರ್, ರಕ್ತ ಪರೀಕ್ಷೆ ನಡೆಸಲಾಗುವುದು. ರಕ್ತದ ಒತ್ತಡಯಂತ್ರ ಪರೀಕ್ಷಿಸಿ ಇತರೆ ಕಾಯಿಲೆಗಳಿಗೆ ಅಗತ್ಯ ಔಷಧೋಪಚಾರ ಸೌಲಭ್ಯ ನೀಡಲಾಗುವುದು ಎಂದರು.
ಅಗತ್ಯ ವಸ್ತುಗಳ ಮಾರಾಟಗಾರರು ಹಾಗೂ ತುರ್ತು ಸಂದರ್ಭಗಳ ಪಾಸು ವಿತರಿಸಲು ಆನ್‌ಲೈನ್ ವ್ಯವಸ್ಥೆ ಕಲ್ಪಿಸಲಾಗಿದೆ. www.supportdharwad.in ಮೂಲಕ ವ್ಯಾಪಾರಿಗಳು ಮತ್ತು ವಿವಿಧ ತುರ್ತು ಉದ್ದೇಶಗಳಿಗೆ ಸಾರ್ವಜನಿಕರಿಗೆ ಇ-ಪಾಸ್ ಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿಗಳನ್ನು ಪರಿಶೀಲಿಸಿ ಕ್ಯೂಆರ್ ಕೋಡ್ ವುಳ್ಳ ಪಾಸ್‌ಗಳನ್ನು ವಿತರಿಸಲಾಗುವುದು. ಇದರಿಂದ ಪಾಸ್‌ಗಳ ದುರುಪಯೋಗ ಆಗುವುದು ತಪ್ಪುತ್ತದೆ ಎಂದರು.
ಹೊಸೂರಿನ ಬಿಆರ್‌ಟಿಎಸ್ ಕಚೇರಿಯಲ್ಲಿ ಸ್ಥಾಪಿಸಿರುವ ಕಂಟ್ರೋಲ್‌ರೂಮ್‌ನಲ್ಲಿ ಅವಳಿ ನಗರದಲ್ಲಿ ಬಿಆರ್ ಟಿಎಸ್, ಪಾಲಿಕೆ ಹಾಗೂ ಪೊಲೀಸ್ ಕಮಿಷನರೇಟ್ ಕಡೆಯಿಂದ ವಿವಿಧೆಡೆ ಅಳವಡಿಸಿರುವ ಸಿಸಿ ಕ್ಯಾಮರಾಗಳನ್ನು ಸಂಪರ್ಕಿಸಿ ಮಾನಿಟರಿಂಗ್ ವ್ಯವಸ್ಥೆ ರೂಪಿಸಲಾಗಿದೆ. ಆ ಮೂಲಕ ಕೊವೀಡ್ -19 ಲಾಕ್‌ಡೌನ್ ಪ್ರದೇಶಗಳಲ್ಲಿ ಜನರು ಅನಗತ್ಯ ಸಂಚರಿಸುವುದು ಹಾಗೂ ಗುಂಪು ಸೇರುವುದನ್ನು ತಡೆಗಟ್ಟಲಾಗುತ್ತದೆ. ಅಲ್ಲದೇ ಹುಬ್ಬಳ್ಳಿ-ಧಾರವಾಡ ಸ್ಮಾರ್ಟ್‌ಸಿಟಿ ಹಾಗೂ ದೇಶಪಾಂಡೆ ಫೌಂಡೇಶನ್ ವತಿಯಿಂದ ಕೋವಿಡ್ ಪಾಸಿಟಿವ್ ಸೋಂಕಿತರ ಸಂಪರ್ಕ ಸಂಗ್ರಹ, ಕ್ವಾರಂಟೈನ್‌ಲ್ಲಿರುವ ವ್ಯಕ್ತಿಗಳ ನಿಗಾ ವಹಿಸುವಿಕೆಯ ಕೇಂದ್ರೀಕೃತ ಕಾರ್ಯ ಸಹ ನಿರ್ವಹಿಸಲಾಗುತ್ತಿದೆ ಎಂದರು.
ವಾಕರಸಾ ಸಂಸ್ಥೆ ಅಧ್ಯಕ್ಷ ವಿ.ಎಸ್. ಪಾಟೀಲ, ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ, ಶಾಸಕರಾದ ಅರವಿಂದ ಬೆಲ್ಲದ, ಪ್ರಸಾದ ಅಬ್ಬಯ್ಯ, ಜಿಲ್ಲಾಧಿಕಾರಿ ದೀಪಾ ಚೋಳನ, ಜಿಪಂ ಸಿಇಒ ಡಾ| ಬಿ.ಸಿ. ಸತೀಶ, ಪಾಲಿಕೆ ಆಯುಕ್ತ ಡಾ| ಸುರೇಶ ಇಟ್ನಾಳ, ಸ್ಮಾರ್ಟ್‌ಸಿಟಿ ಯೋಜನೆವ್ಯವಸ್ಥಾಪಕ ನಿರ್ದೇಶಕ ಶಕೀಲಅಹ್ಮದ,ಎಚ್ ಡಿಬಿಆರ್‌ಟಿಎಸ್ ಉಪ ಪ್ರಧಾನ ವ್ಯವಸ್ಥಾಪಕ ಗಣೇಶ ರಾಠೊಡ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಯಶವಂತ ಮದೀನಕರ, ಜಿಲ್ಲಾ ಆರ್‌ಸಿಎಚ್ ಅಧಿಕಾರಿಡಾ| ಎಸ್.ಎಂ. ಹೊನಕೇರಿ, ಪಾಲಿಕೆ ಆರೋಗ್ಯಾಧಿಕಾರಿ ಡಾ| ಪ್ರಭು ಬಿರಾದಾರ, ತಹಶೀಲ್ದಾರರಾದ ಶಶಿಧರ ಮಾಡ್ಯಾಳ, ಪ್ರಕಾಶ ನಾಶಿ ಮೊದಲಾದವರಿದ್ದರು.
ಪರಿಶೀಲಿಸಿ ಪ್ರತಿಕ್ರಿಯಿಸುವೆ : ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಏ. 20ರ ನಂತರ ಕೈಗಾರಿಕೆಗಳನ್ನು ಸ್ಥಾಪಿಸುವ ಕುರಿತು ಮಾತುಕತೆ ನಡೆದಿದೆ. ಆದರೆ ಕಂಟೇನ್ಮೆಂಟ್ ಪ್ರದೇಶ ಹೊರತು ಪಡಿಸಿ ಇನ್ನುಳಿದೆಡೆ ದ್ವಿಚಕ್ರ ವಾಹನ ಸವಾರರು ಓಡಾಡಬಹುದೆಂದು ಅವರು ಹೇಳಿದ್ದಾರೆ ಎಂಬುದರ ಬಗ್ಗೆ ನನಗೆ ಮಾಹಿತಿ ಇಲ್ಲ. ಆ ರೀತಿ ಅವರು ಹೇಳಲು ಸಾಧ್ಯವಿಲ್ಲ. ಅದನ್ನು ಪರಿಶೀಲಿಸಿದ ನಂತರವೇ ಪ್ರತಿಕ್ರಿಯಿಸುವೆ ಎಂದು ಸಚಿವ ಜಗದೀಶ ಶೆಟ್ಟರ ಹೇಳಿದರು. ದಾನಿಗಳು, ಎನ್‌ಜಿಒದವರು ಸರಕಾರಕ್ಕೆ ನೀಡಿದ್ದ ಆಹಾರಧಾನ್ಯ ಕಿಟ್‌ಗಳನ್ನು ಬಿಜೆಪಿಯವರು ಮನೆಯಲ್ಲಿ ಇಟ್ಟುಕೊಳ್ಳದೆ ಬಡವರಿಗೆ ಹಂಚಿಕೆ ಮಾಡುತ್ತಿರುವುದರಲ್ಲಿ ಯಾವ ತಪ್ಪಿದೆ. ಅವರಿಗೆ ಆಗಿದ್ದನ್ನು ಅವರು ಮಾಡಲಿ. ಇನ್ನೊಬ್ಬರು ಅವರಿಗೆ ಆಗಿದ್ದನ್ನು ಅವರು ಮಾಡುತ್ತಿದ್ದಾರೆ. ಇಂತಹ ಕಠಿಣ ಪರಿಸ್ಥಿತಿಯಲ್ಲೂ ಇನ್ನಿಲ್ಲದ ಉಸಾಬರಿ ಮಾಡುವುದು, ರಾಜಕಾರಣ ಮಾಡುತ್ತಿರುವುದು ಸರಿಯಲ್ಲವೆಂದು ಕಿಡಿಕಾರಿದರು.