Advertisement

ಹಾಸನ ರೈಲೆ ನಿಲ್ದಾಣದ ಸೌಕರ್ಯ ಪರಿಶೀಲನೆ

03:48 PM Apr 09, 2022 | Team Udayavani |

ಹಾಸನ: ನೈಋತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕ ಸಂಜೀವ್‌ ಕಿಶೋರ್‌ ಅವರು ಶುಕ್ರವಾರ ಹಾಸನ ರೈಲು ನಿಲ್ದಾಣಕ್ಕೆ ಭೇಟಿ ನೀಡಿ ಮೂಲ ಸೌಕರ್ಯಗಳ ಪರಿಶೀಲನೆ ನಡೆಸಿದರು.

Advertisement

ಹಾಸನ ನಿಲ್ದಾಣದ ರೈಲ್ವೆ ಪ್ಲಾಟ್‌ ಫಾರಂಗಳು, ಸಿಬ್ಬಂದಿಗಳ ವಸತಿಗೃಹಗಳ ಸೌಲಭ್ಯದ ಪರಿಶೀಲನೆ ನಡೆಸಿದರು. ಮೈಸೂರು ರೈಲ್ವೆ ವಿಭಾಗದ ಹಿರಿಯ ಅಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದು ಪ್ರಯಾಣಿಕರಿಗೆ ರೈಲು ನಿಲ್ದಾಣದಲ್ಲಿ ಕಲ್ಪಿಸಿರುವ ಸೌಕರ್ಯಗಳ ಬಗ್ಗೆ ವಿವರ ನೀಡಿದರು.

ವಿವೇಚನಾ ಅಧಿಕಾರವಿದೆ: ಹಾಸನದಲ್ಲಿದ್ದ ರೈಲ್ವೆ ರಕ್ಷಣಾ ಶ್ವಾನದಳವನ್ನು ಮೈಸೂರಿಗೆ ಸ್ಥಳಾಂತರಿಸಿರುವ ಬಗ್ಗೆ ಸುದ್ದಿಗಾರರು ಗಮನ ಸೆಳೆದಾಗ ಪ್ರತಿಕ್ರಿಯಿಸಿದ ಅವರು, ರೈಲ್ವೆ ವಿಭಾಗದ ಅಧಿಕಾರಿಗಳಿಗೆ ಕೆಲವು ಅಧಿಕಾರವನ್ನು ನೀಡಲಾಗಿದೆ. ಯಾವ ಸೌಲಭ್ಯಗಳು ಎಲ್ಲಿದ್ದರೆ ಸೂಕ್ತ ಎಂದು ಆ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಾರೆ. ಹಾಗೆಯೇ ಹಾಸನದಲ್ಲಿದ್ದ ರೈಲ್ವೆ ರಕ್ಷಣಾ ಶ್ವಾನ ದಳದ ಬಗ್ಗೆಯೂ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಂಡಿರಬಹುದು ಎಂದರು.

ವಸತಿ ವ್ಯವಸ್ಥೆ ಸುಧಾರಿಸಬೇಕಿದೆ: ಈ ಹಿಂದೆಯೂ ಹಾಸನಕ್ಕೆ ನಾನು ಭೇಟಿ ನೀಡಿ ಪರಿಶೀಲಿಸಿದ್ದೆ. ರೈಲ್ವೆ ಪ್ರಯಾಣಿಕರಿಗೆ ಹಾಸನ ನಿಲ್ದಾಣದಲ್ಲಿ ಉತ್ತಮ ವ್ಯವಸ್ಥೆಯಿದೆ. ರೈಲ್ವೆ ಸಿಬ್ಬಂದಿ ವಸತಿಗೃಹಗಳ ಸಮುತ್ಛಯವನ್ನು ಪರಿಶೀಲನೆ ನಡೆಸಿದ್ದು, ಇನ್ನಷ್ಟು ಸುಧಾರಣೆ ಕೈಗೊಳ್ಳಬೇಕಾಗಿದೆ ಎಂದು ಹೇಳಿದರು.

ಪ್ರಯಾಣಿಕ ಸ್ನೇಹಿ ಕ್ರಮ: ರೈಲ್ವೆ ಟ್ರ್ಯಾಕ್‌ ಸೇಫ್ಟಿ, ರೈಲ್ವೆ ಮೇಲ್ಸೆತುವೆಗಳ ಸುರಕ್ಷತೆಯ ಬಗ್ಗೆಯೂ ಆಗಿಂದಾಗೆ ಪರಿಶೀಲನೆ ನಡೆಸಲಾಗುತ್ತಿದೆ. ರೈಲ್ವೆ ಇಲಾಖೆಯಲ್ಲಿ ಪ್ರಯಾಣಿಕ ಸ್ನೇಹಿ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ಸ್ವರಾಜ್ಯ ವಿಕಾಸ ಟ್ರಸ್ಟ್‌ ಪರವಾಗಿ ಐಜೆಟ್‌ ವಿಜಯಕುಮಾರ್‌ ಅವರು ಸಂಜೀವ್‌ ಕಿಶೋರ್‌ ಅವರಿಗೆ ಮನವಿ ಸಲ್ಲಿಸಿ ಮೈಸೂರಿಗೆ ಸ್ಥಳಾಂತರಿಸಿರುವ ರೈಲ್ವೆ ರಕ್ಷಣಾ ಶ್ವಾನದಳವನ್ನು ಪುನಃ ಹಾಸನಕ್ಕೆ ವರ್ಗಾಯಿಸಬೇಕು ಎಂದು ಮನವಿ ಮಾಡಿದರು.

Advertisement

ಬೆಂಗಳೂರು-ಹಾಸನಕ್ಕೆ ಡೆಮು ರೈಲು ಸೇವೆ ಆರಂಭ : ಹಾಸನ: ಬೆಂಗಳೂರು ಸಿಟಿ ರೈಲು ನಿಲ್ದಾಣ ಮತ್ತು ಹಾಸನ ನಿಲ್ದಾಣದ ನಡುವೆ ಡೆಮು ರೈಲು ಶುಕ್ರವಾರ ದಿಂದ ಸಂಚಾರ ಆರಂಭಿಸಿತು. ಪ್ರತಿ ದಿನ ಬೆಳಗ್ಗೆ 9.45ಕ್ಕೆ ಬೆಂಗಳೂರು ಸಿಟಿ ರೈಲು ನಿಲ್ದಾ ಣದಿಂದ ಹೊರಡುವ ರೈಲು ಯಶವಂಪುರಕ್ಕೆ 9.57ಕ್ಕೆ ತಲುಪಲಿದೆ. 2 ನಿಮಿಷ ನಿಲುಗಡೆ ನಂತರ 9.59ಕ್ಕೆ ಅಲ್ಲಿಂದ ಹೊರಟು 11.05ಕ್ಕೆ ಕುಣಿಗಲ್‌, 12.28ಕ್ಕೆ ಶ್ರವಣ ಬೆಳಗೊಳ, 12.45ಕ್ಕೆ ಚನ್ನರಾಯ ಪಟ್ಟಣಕ್ಕೆ ಆಗಮಿಸುವ ರೈಲು ಮಧ್ಯಾಹ್ನ 1.45ಕ್ಕೆ ಹಾಸನ ರೈಲು ನಿಲ್ದಾಣಕ್ಕೆ ತಲಪಲಿದೆ. ಹಾಸನ ನಿಲ್ದಾಣದಲ್ಲಿ ಅರ್ಧಗಂಟೆ ನಿಲುಗಡೆ ನಂತರ 2.15ಕ್ಕೆ ಹಾಸನದಿಂದ ಬೆಂಗ ಳೂರಿನತ್ತ ಹೊರಡಲಿರುವ ರೈಲು ಚನ್ನರಾಯಪಟ್ಟಣ ನಿಲ್ದಾಣಕ್ಕೆ 2.57ಕ್ಕೆ ತಲಪಲಿದೆ. ಶ್ರವಣಬೆಳಗೊಳಕ್ಕೆ 3.10ಕ್ಕೆ, ಕುಣಿಗಲ್‌ಗೆ 4.11ಕ್ಕೆ, ಯಶವಂತಪುರಕ್ಕೆ ಸಂಜೆ 5.30ಕ್ಕೆ, ಬೆಂಗಳೂರು ಸಿಟಿ ರೈಲು ನಿಲ್ದಾಣಕ್ಕೆ 6 ಗಂಟೆಗೆ ತಲಪಲಿದೆ. ಅಲ್ಲಿಂದ ಈ ರೈಲು ದೇವನಹಳ್ಳಿ, ಚಿಕ್ಕ ಬಳ್ಳಾಪುರ ಮಾರ್ಗವಾಗಿ ಕೋಲಾರಕ್ಕೆ ಹೋಗಿ ತಂಗಲಿದೆ.

ಹಂಗರಹಳ್ಳಿ ರೈಲ್ವೆ ಮೇಲ್ಸೇತುವೆ ದುರಸ್ತಿ ಆರಂಭ : ಹಾಸನ: ಶಿಥಿಲವಾಗಿದ್ದ ಹಂಗರಹಳ್ಳಿ ರೈಲ್ವೆ ಮೇಲ್ಸೇತುವೆ ದುರಸ್ತಿ ಕಾಮಗಾರಿ ಆರಂಭವಾಗಿದೆ. ಹಾಸನ – ಹೊಳೆ ನರಸೀಪುರ ನಡುವೆ ಹಂಗರಹಳ್ಳಿ ಸಮೀಪ ನಿರ್ಮಾಣವಾಗಿದ್ದ ರೈಲ್ವೆ ಮೇಲ್ಸೇತುವೆ ಎರಡು ವರ್ಷಗಳಲ್ಲೇ ಶಿಥಿಲವಾಗಿತ್ತು. ಸೇತುವೆ ಮೇಲೆ ಗುಂಡಿಗಳು ನಿರ್ಮಾಣವಾಗಿ ವಾಹನ ಸಂಚಾರ ದುಸ್ಸಾಹಸವಾಗಿತ್ತು. ಈಗ ಸುಮಾರು ಒಂದು ಕೋಟಿ ರೂ. ವೆಚ್ಚದಲ್ಲಿ ರೈಲ್ವೆ ಮೇಲ್ಸೇತುವೆ ದುರಸ್ತಿ ಕಾಮಗಾರಿ ಆರಂಭವಾಗಿದೆ. ರೈಲ್ವೆ ಮೇಲ್ಸೆತುವೆ ದುರಸ್ತಿ ಕಾಮಗಾರಿ ಆರಂಭವಾಗಿರುವುದರಿಂದ ಹಂಗರಹಳ್ಳಿ – ಹೊಳೆನರಸೀಪುರ ನಡುವಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ಸಂಚಾರ ಬಂದ್‌ ಮಾಡಿದ್ದು, ಬದಲಿ ಮಾರ್ಗವಾದ ಹಂಗರಹಳ್ಳಿ – ಪಡುವಲ ಹಿಪ್ಪೆ – ಮಾಕವಳ್ಳಿ – ನಾಗಲಾಪುರ ಮಾರ್ಗವಾಗಿ ಹೊಳೆನರಸೀಪುರಕ್ಕೆ ವಾಹನಗಳ ಸಂಚಾರದ ವ್ಯವಸ್ಥೆ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next