Advertisement

ಜಿಲ್ಲಾಧಿಕಾರಿಗಳಿಂದ ಫ್ರೀಡಂ ಪಾರ್ಕ್‌ ಜಾಗ ಪರಿಶೀಲನೆ

05:19 PM May 06, 2022 | Niyatha Bhat |

ಶಿವಮೊಗ್ಗ: ಹಳೇ ಜೈಲು ಆವರಣದಲ್ಲಿರುವ ಫ್ರೀಡಂ ಪಾರ್ಕ್‌ ನಿರ್ವಹಣೆ ಇಲ್ಲದೆ ಅತ್ಯಂತ ಕಳಪೆಯ ಸ್ಥಳವಾಗಿ ಬದಲಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಸಾರ್ವಜನಿಕರ ದೂರು ಹಾಗೂ ಜಿಲ್ಲಾ ಬಿಜೆಪಿ ಮುಖಂಡ ಎಸ್.ದತ್ತಾತ್ರಿ ಅವರ ಮನವಿಯ ಮೇರೆಗೆ ಗುರುವಾರ ಬೆಳಗ್ಗೆ ಜಿಲ್ಲಾಧಿಕಾರಿ ಡಾ| ಸೆಲ್ವಮಣಿ ಮಹಾನಗರ ಪಾಲಿಕೆ, ಸ್ಮಾರ್ಟ್‌ಸಿಟಿ ಜಿಲ್ಲಾಡಳಿತದ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಸಮಗ್ರವಾಗಿ ಪರಿಶೀಲಿಸಿದರು.

Advertisement

ಸುಂದರವಾದ ಕಟ್ಟಡದಲ್ಲಿ ನಿರ್ಮಾಣವಾಗಿರುವ ಶೌಚಾಲಯ ಇಂದು ಗಲೀಜಿನ ಕೊಂಪೆಯಾಗಿರುವುದನ್ನು ಗಮನಿಸಿ ಈ ಕಾರ್ಯವನ್ನು ಮಾಡುವ ಸಂಪೂರ್ಣ ಜವಾಬ್ದಾರಿಯನ್ನು ಮಹಾನಗರ ಪಾಲಿಕೆಗೆ ವರ್ಗಾಯಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು. ಅದೇ ರೀತಿ ಕುಡಿಯುವ ನೀರಿನ ಬೆಲೆ ಬಾಳುವ ಯಂತ್ರಗಳು ಹಾಳಾಗುತ್ತಿರುವುದನ್ನು ಗಮನಿಸಿ ಇದನ್ನು ನೋಡಿಕೊಳ್ಳುವುದರ ಜೊತೆಗೆ ಶೌಚಾಲಯವನ್ನು ಶುಲ್ಕ ಸಹಿತ ವ್ಯವಸ್ಥೆ ಮಾಡಲು ಟೆಂಡರ್‌ ಕರೆಯುವಂತೆ ಸೂಚಿಸಿದರು. ಇದಕ್ಕೆ ಸ್ಮಾರ್ಟ್‌ಸಿಟಿ ಇಂಜಿನಿಯರ್‌ ಕೃಷ್ಣಪ್ಪ ಹಾಗೂ ಪಾಲಿಕೆಯ ಆಯುಕ್ತ ಮಾಯಣ್ಣಗೌಡ ಅವರು ಸಹ ಸಹಮತಿಸಿದರು. ಸ್ಮಾರ್ಟ್‌ಸಿಟಿಯ ಕಾಮಗಾರಿಯ ನಡುವೆ ಸಿಗುವ ಡಬ್ರೀಜನ್ನೆಲ್ಲಾ ಈ ಪಾರ್ಕ್‌ನೊಳಗೆ ಹಾಕಿರುವುದನ್ನು ಜಿಲ್ಲಾಧಿಕಾರಿಗಳು ಆಕ್ಷೇಪಿಸಿದರು.

ಇಲ್ಲಿ ನಿತ್ಯ ವಾಕಿಂಗ್‌ ಮಾಡುವ ಪಾದಚಾರಿಗಳ ಆಕ್ಷೇಪಗಳಿಗೆ ಉತ್ತರಿಸಿದ ಜಿಲ್ಲಾಧಿಕಾರಿಗಳು ಇಡೀ ಈ ಹಳೇ ಜೈಲ್‌ ಆವರಣದಲ್ಲಿ ಸುತ್ತಲೂ ಆರು ಅಡಿ ಅಗಲದ ಮತ್ತೂಂದು ಮಣ್ಣಿನ ವಾಕಿಂಗ್‌ ಪಾತ್‌ ನಿರ್ಮಿಸಲು ಸೂಚಿಸಿದರು. ಇದರಲ್ಲಿ ಡಬ್ರೀಜ್‌ನ ವಸ್ತುಗಳನ್ನು ಬಳಸಿಕೊಳ್ಳಲು ತಿಳಿಸಿದರು.

ತೆಂಗಿನ ಮರಗಳನ್ನು ರಕ್ಷಿಸುವ ಜೊತೆಗೆ ಇಲ್ಲಿ ಎಲ್ಲಾ ಬಗೆಯ ಆಯುರ್ವೇದ ಕಾಡುಜಾತಿಯ ಮರಗಳನ್ನು ಸಾಕುವ ಜೊತಗೆ ಅವುಗಳ ಹೆಸರನ್ನು ಮಕ್ಕಳಿಗೆ ಪರಿಚಯಿಸುವಂತಹ ಸಸ್ಯ ಸಂಕುಲವನ್ನು ನಿರ್ಮಿಸುವಂತೆ ಸಲಹೆ ನೀಡಿದರು. ಇದಕ್ಕೆ ಅಗತ್ಯವಾದ ಹಣದ ವ್ಯವಸ್ಥೆಯನ್ನು ಪಾಲಿಕೆ ಹಾಗೂ ಜಿಲ್ಲಾಡಳಿತ ನೋಡಿಕೊಳ್ಳುತ್ತದೆ ಎಂದರು.

ಫ್ರೀಡಂ ಪಾರ್ಕ್‌ನ ಮುಂದಿನ ಕಾಂಪೌಂಡ್‌ ಸಂಪೂರ್ಣಗೊಳಿಸುವ ಜೊತೆಗೆ ಅಗತ್ಯವಿರುವೆಡೆ ಗೇಟನ್ನು ಹಾಕುವಂತೆ ಇಡೀ ವ್ಯವಸ್ಥೆಯನ್ನು ನೋಡಿಕೊಳ್ಳುವಂತಹ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ಸಾರ್ವಜನಿಕರ ಒತ್ತಾಸೆಗೆ ಪೂರಕವಾಗಿ ಸೂಚಿಸಿದರು. ಇಲ್ಲಿರುವ ತೆಂಗಿನ ಮರ, ಹುಣಸೆ ಮರ ಸೇರಿದಂತೆ ಉತ್ಪನ್ನ ಕೊಡುವ ಮರಗಳನ್ನು ಕೂಡಲೇ ಹರಾಜು ಕರೆದು ನೀಡುವಂತೆ ಸೂಚಿಸಿದ ಅವರು ವಾರದೊಳಗೆ ಈ ಎಲ್ಲಾ ಕಾರ್ಯಕ್ರಮಗಳನ್ನು ಮುಗಿಸಲು ತಿಳಿಸಿದರು. ಎಸ್.ದತ್ತಾತ್ರಿ ಹಾಗೂ ಬಿಜೆಪಿಯ ಹಲವು ಪ್ರಮುಖರು ವಿಶೇಷವಾಗಿ ನಿತ್ಯ ವಾಕಿಂಗ್‌ ಮಾಡುವ, ಸ್ವಚ್ಛತೆ ಮಾಡುವ ಹಿರಿಯ ಸ್ಥಳೀಯ ಪ್ರಮುಖರು ಇದ್ದರು.

Advertisement

ಎಣ್ಣೆ ಹೊಡೆಯುವವರಿಗೆ ಗ್ರಹಚಾರ

ಇಲ್ಲಿನ ಸಭೆ- ಸಮಾರಂಭಗಳನ್ನು ನಡೆಸುವ ಸ್ಥಳಗಳಲ್ಲಿ ನಿತ್ಯರಾತ್ರಿ ಮದ್ಯ ಸೇವಿಸುವ ನಿದರ್ಶನಗಳನ್ನು ಹಾಗೂ ಬಾಟಲಿಗಳ ಸತ್ಯ ದರ್ಶನ ಕಂಡ ಜಿಲ್ಲಾಧಿಕಾರಿಗಳು ಇಲ್ಲಿ ಇಂತಹ ಚಟುವಟಿಕೆಗಳು ನಡೆಯುವುದನ್ನು ಸಂಪೂರ್ಣವಾಗಿ ನಿಯಂತ್ರಿಸಲು ಅಬಕಾರಿ ಹಾಗೂ ತುರ್ತು ರಕ್ಷಣಾ ಇಲಾಖೆಯ ವ್ಯವಸ್ಥೆಗಳಿಗೆ ಸೂಚಿಸುವುದಾಗಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next