ಕಲಬುರಗಿ: ಉಪ ಕೃಷಿ ನಿರ್ದೇಶಕಿ ಡಾ| ಅನಸೂಯ ಹೂಗಾರ ಹಾಗೂ ಸಹಾಯಕ ಕೃಷಿ ನಿರ್ದೇಶಕ ಚಂದ್ರಕಾಂತ ಜೀವಣಗಿ ನೇತೃತ್ವದಲ್ಲಿ 12 ಕೃಷಿ ಪರಿವೀಕ್ಷಕರು ನಗರದ ನೆಹರು ಗಂಜ್‌ನಲ್ಲಿರುವ ವಿವಿಧ ಕೃಷಿ ಪರಿಕರ ಮಳಿಗೆಗಳಿಗೆ ಭೇಟಿ ನೀಡಿ ತಪಾಸಣೆ ನಡೆಸಿದರು.
ಉಪ ಕೃಷಿ ನಿರ್ದೇಶಕಿ ಡಾ| ಅನಸೂಯ ಹೂಗಾರ ಅನಧಿಕೃತ ಸಂಸ್ಥೆಯ ಬಿತ್ತನೆ ಬೀಜ, ರಸಗೊಬ್ಬರ ಮಾರಾಟ, ಕಳಪೆ ರಸಗೊಬ್ಬರ ಮಾರಾಟ, ನಿಗದಿತ ದರಕ್ಕಿಂತ ಹೆಚ್ಚಿನ ಬೆಲೆಗೆ ರಸಗೊಬ್ಬರದ ಮಾರಾಟ, ಕೃತಕ ಅಭಾವ ಸೃಷ್ಟಿಸಿ ಬೆಲೆ ಹೆಚ್ಚಿಸುವ ಮಳಿಗೆಗಳ ಪರವಾನಗಿ ರದ್ದುಪಡಿಸುವುದರ ಜೊತೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಕೃಷಿ ಪರಿಕರ ಮಾರಾಟಗಾರರಿಗೆ ಎಚ್ಚರಿಕೆ ನೀಡಿದರು.
ಗ್ಲೈಫೂಸೇಟ್ ಕಳೆನಾಶಕಗಳನ್ನು ಬೆಳೆ ಇಲ್ಲದ ಪ್ರದೇಶಗಳಲ್ಲಿ ಮಾತ್ರ ಉಪಯೋಗಿಸಬೇಕು. ರೈತರು ಕೃಷಿ ಪರಿಕರ ಖರೀದಿ ಸಂದರ್ಭದಲ್ಲಿ ಕೃಷಿ ಇಲಾಖೆಯಿಂದ ಪರವಾನಗಿ ಪಡೆದ ಮಳಿಗೆಗಳಿಂದ ರಸೀದಿ ಪಡೆಯಬೇಕು ಎಂದು ಸಲಹೆ ನೀಡಿದರು.
ಕೃಷಿ ಇಲಾಖೆ ಅಧಿಕಾರಿಗಳು ನಗರದ 15 ಮಳಿಗೆಗಳಿಗೆ ಭೇಟಿ ನೀಡಿದ್ದು, ಕೆಲವು ಅಂಗಡಿಗಳ ಮಾಲೀಕರು ದರಪಟ್ಟಿ ಪ್ರದರ್ಶಿಸದಿರುವುದು, ಪರಿಕರಗಳ ಮೂಲ ಪ್ರತಿ ಇಲ್ಲದಿರುವುದ್ದಕ್ಕೆ ಹಾಗೂ ಇನ್ನಿತರ ಕಾರಣಗಳಿಂದ ನಿಯಮ ಉಲ್ಲಂಘಿಸಿದ ಆರು ಮಳಿಗೆ ಮಾಲೀಕರಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಯಿತು.