Advertisement

ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ಒತ್ತಾಯ

02:38 PM Jun 07, 2017 | |

ಮೈಸೂರು: ಕೇಂದ್ರ ಸರ್ಕಾರದ ಗೋಹತ್ಯೆ ನಿಷೇಧ ಕಾಯ್ದೆಯನ್ನು ರಾಜ್ಯದಲ್ಲಿ ಜಾರಿಗೊಳಿಸದ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿವಾಸದ ಎದುರು ಗೋ ಪೂಜೆ ನಡೆಸಲು ಮುಂದಾಗಿದ್ದ ಒಂಭತ್ತು ಮಂದಿಯನ್ನು ಪೊಲೀಸರು ಬಂಧಿಸಿ, ಬಿಡುಗಡೆ ಮಾಡಿದರು.

Advertisement

ಗೋಹತ್ಯೆ ಹಾಗೂ ಕಸಾಯಿಖಾನೆಗೆ ಗೋಗಳನ್ನು ಮಾರಾಟ ಮಾಡುವುದನ್ನು ನಿಷೇಧಿಸಿ ಕೇಂದ್ರ ಸರ್ಕಾರ ಕಾನೂನು ಹೊರಡಿಸಿದ್ದು, ಇದರಿಂದ ಹಲವು ವರ್ಷದ ಬಹುಸಂಖ್ಯಾತರ ಬೇಡಿಕೆ ಈಡೇರಿದಂತಾಗಿದೆ. ಈ ಹಿನ್ನೆಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಗೋವುಗಳ ರಕ್ಷಣೆಗೆ ಮುಂದಾಗುವ ಮೂಲಕ ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೊಳಿಸಬೇಕೆಂದು ಆಗ್ರಹಿಸಿ ಅಖಂಡ ಭಾರತ ಸೇವಾ ಸೇನೆ ಅಧ್ಯಕ್ಷ ಚೇತನ್‌ ಮಂಜುನಾಥ್‌ ಹಾಗೂ ಬೆಂಬಲಿಗರು,

-ಮೈಸೂರಿನ ರಾಮಕೃಷ್ಣ ನಗರದಲ್ಲಿರುವ ಸಿಎಂ ಸಿದ್ದರಾಮಯ್ಯರ ನಿವಾಸದ ಎದುರು ಗೋಪೂಜೆ ನಡೆಸಲು ಮುಂದಾಗಿದ್ದರು. ಆದರೆ ಇದಕ್ಕೆ ಪೊಲೀಸ್‌ ಇಲಾಖೆಯಿಂದ ಯಾವುದೇ ಪೂರ್ವಾನುಮತಿ ಪಡೆಯದ ಹಿನ್ನೆಲೆ ಪೊಲೀಸರು ಸಿಎಂ ನಿವಾಸದ ಎದುರು ನಾಕಾಬಂಧಿ ರಚಿಸಿದ್ದರು.

ಆದರೆ ಪೊಲೀಸರ ನಾಕಾಬಂಧಿ ಲೆಕ್ಕಿಸದೆ ಚೇತನ್‌ ಮಂಜುನಾಥ್‌ ಹಾಗೂ ಅಖಂಡ ಭಾರತ ಸೇವಾ ಸೇನೆ ಪದಾಧಿಕಾರಿಗಳು ಗೋಪೂಜೆ ಮಾಡುವ ಉದ್ದೇಶದೊಂದಿಗೆ ಸಿಎಂ ನಿವಾಸದತ್ತ ತೆರಳಿದರು. ಸ್ಥಳದಲ್ಲಿದ್ದ ಸರಸ್ವತಿಪುರಂ ಪೊಲೀಸರು ಚೇತನ್‌ ಮಂಜುನಾಥ್‌, ನಾರಾಯಣ, ಸಂದೇಶ್‌, ಯೋಗಿ, ಸಿದ್ದರಾಜು, ಈರಣ್ಣ, ನವೀನ್‌ಶೆಟ್ಟಿ, ನಾಗೇಶ್‌ ಮತ್ತು ರಾಜು ಎಂಬುವರನ್ನು ಬಂಧಿಸಿ, ಮಧ್ಯಾಹ್ನದ ಬಳಿಕ ಬಿಡುಗಡೆ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next