ದೇವನಹಳ್ಳಿ: ತಾಲೂಕಿನ ಹಾಗೂ ಪಟ್ಟಣದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ವೀಲಿಂಗ್ ಮಾಡುವರ ಸಂಖ್ಯೆ ಹೆಚ್ಚಾಗುತ್ತಿದ್ದು, ಕೂಡಲೇ ಪೋಲೀ ಸರು ಕಡಿವಾಣ ಪ್ರಜಾ ವಿಮೋಚನಾ ಬಹುಜನ ಸಮಿತಿ ಸಂಸ್ಥಾಪಕ ಅಧ್ಯಕ್ಷ ಬಿಜ್ಜವಾರ ನಾಗರಾಜ್ ಒತ್ತಾಯಿಸಿದರು.
ತಾಲೂಕಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆ, ಬೆಂಗಳೂರು ರಸ್ತೆ, ಬೈಚಾಪುರ ರಸ್ತೆ, ಬೂದಿಗೆರೆ ರಸ್ತೆ, ದೇವನಹಳ್ಳಿ ಪಟ್ಟಣದಿಂದ ಬೆಂಗಳೂರಿನ ಕಡೆಗೆ ಹೋಗುವ ರಸ್ತೆ, ಚಿಕ್ಕಬಳ್ಳಾಪುರದ ಕಡೆಗೆ ಹೋಗುವ ರಸ್ತೆ, ವಿಜಯಪುರದ ಕಡೆಗೆ ಸಂಚರಿಸುವ ರಸ್ತೆಗಳಲ್ಲಿ ವಾಹನಗಳ ದಟ್ಟಣೆ ಹೆಚ್ಚಾಗಿರುತ್ತದೆ.
ವಾಹನಗಳ ದಟ್ಟಣೆಯ ನಡುವೆಯೂ ಕೆಲವರು ಯುವಕರು, ತಲೆಗೆ ಹೆಲ್ಮೆಟ್ ಗಳನ್ನೂ ಧರಿಸಿಕೊಳ್ಳದೇ ದ್ವಿಚಕ್ರ ವಾಹನಗಳಲ್ಲಿ ವೇಗವಾಗಿ ಹೋಗುವುದಲ್ಲದೇ ವಾಹನ ಚಾಲನೆಯಲ್ಲಿರುವಾಗ ವೀಲಿಂಗ್ ಮಾಡುವುದು, ಹಿಂಬದಿ ಕುಳಿತಿರುವ ಸವಾರನನ್ನು ಮುಂದಕ್ಕೆ ಕೂರಿಸಿ ಚಾಲನೆ ಮಾಡುವುದು, ವಾಹನ ಚಲಿಸುವಾಗ ನಿಂತುಕೊಂಡು ಎರಡೂ ಕೈಗಳನ್ನು ಬಿಟ್ಟು ಚಾಲನೆ ಮಾಡುವಂತಹ ಅಪಾಯಕಾರಿ ಚಾಲನೆ ಮಾಡುತ್ತಿರುತ್ತಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಪಟ್ಟಣದ ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ರಸ್ತೆಗಳಲ್ಲಿ ಟ್ರಾಫಿಕ್ ನಡುವೆಯೂ ದ್ವಿಚಕ್ರ ವಾಹನಗಳಲ್ಲಿ ವೀಲಿಂಗ್ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ವೀಲಿಂಗ್ ಮಾಡುವ ಯುವಕರ ಪುಂಡಾಟಿಕೆಯಿಂದ ಸಾರ್ವಜನಿಕರು ಅಪಾಯಕ್ಕೆ ಸಿಲುಕಿಕೊಳ್ಳುತ್ತಿದ್ದಾರೆ. ಇಂತಹ ಯುವಕರ ಮೇಲೆ ಕೇಸು ದಾಖಲು ಮಾಡಬೇಕು ಯುವಕರ ನಿರ್ಲಕ್ಷ್ಯದಿಂದಾಗಿ ರಸ್ತೆಯಲ್ಲಿ ಚಲಿಸುವ ವಾಹನ ಸವಾರರೂ ಅಪಘಾತಗಳಿಗೆ ಒಳಗಾಗುದ್ದಾರೆ.
ಆದ್ದರಿಂದ ಪೊಲೀಸರು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ದ್ವಿಚಕ್ರ ವಾಹನಗಳಾಗಲಿ, ಸೈಕಲ್ ಗಳಾಗಲಿ ವೀಲಿಂಗ್ ಮಾಡುವುದು ಕಂಡು ಬಂದಾಗ ಅವರ ಮೇಲೆ ಕೇಸು ದಾಖಲಿಸಬೇಕು. ಎಂದು ಆಗ್ರಹಿಸಿದರು.