ಕುಮಟಾ: ತಾಲೂಕಿನ ದೀವಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸರ್ವೀಸ್ ರಸ್ತೆ ಹಾಗೂ ಮೇಲ್ಸೇತುವೆ ನಿರ್ಮಾಣ ಮಾಡುವ ಕುರಿತು ಶೀಘ್ರ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ದೀವಗಿ ಗ್ರಾಮಸ್ಥರು ಜಿಲ್ಲಾಧಿಕಾರಿ ಡಾ| ಹರೀಶಕುಮಾರಗೆ ಭಾನುವಾರ ಮನವಿ ಸಲ್ಲಿಸಿದರು.ದೀವಗಿಯಲ್ಲಿ ಚತುಷ್ಪಥ ಕಾಮಗಾರಿ ಪ್ರಾರಂಭವಾದ ದಿನದಿಂದಲೂ ಸರ್ವೀಸ್ ರಸ್ತೆ
ಹಾಗೂ ಮೇಲ್ಸೇತುವೆ ನಿರ್ಮಿಸುವಂತೆ ಒತ್ತಾಯಿಸಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಿದ್ದೇವೆ. ಅಲ್ಲದೇ ಐಆರ್‌ಬಿ ಕಂಪನಿಯ ವಿರುದ್ಧ ಪ್ರತಿಭಟನೆಯನ್ನೂ ನಡೆಸಿದ್ದೇವೆ. ಅಂದಿನ ಉಸ್ತುವಾರಿ ಸಚಿವರಾದ ಆರ್.ವಿ. ದೇಶಪಾಂಡೆ, ಸಂಸದ ಅನಂತಕುಮಾರ ಹೆಗಡೆ ಹಾಗೂ ಸ್ಥಳೀಯ ಶಾಸಕರನ್ನೂ ಇಲ್ಲಿನ ಸಮಸ್ಯೆ ಬಗ್ಗೆ ಗಮನಸೆಳೆದು ಶೀಘ್ರ ಸರಿಪಡಿಸುವಂತೆ ಒತ್ತಾಯಿಸಲಾಗಿತ್ತು. ಆದರೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸರ್ವೀಸ್ ರಸ್ತೆ ಮತ್ತು ಮೇಲ್ಸೇತುವೆ ಕಾಮಗಾರಿ ಕೈಗೊಳ್ಳುವ ಕುರಿತು ಆಸಕ್ತಿ ತೋರದ ಹಿನ್ನೆಲೆಯಲ್ಲಿ ಪುನಃ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಲಾಗಿತ್ತು. ನಂತರ ಸ್ಥಳೀಯ ಶಾಸಕ ದಿನಕರ ಶೆಟ್ಟಿ ಪ್ರತಿಭಟನಾ ಸ್ಥಳಕ್ಕಾಗಮಿಸಿ ಹೆದ್ದಾರಿ ಇಲಾಖೆಯ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ, 15 ದಿನದೊಳಗಡೆ ಕಾಮಗಾರಿ ಆರಂಭಿಸುವ ಬಗ್ಗೆ ಭರವಸೆ ನೀಡಿದ್ದರು. ಆದರೆ ಇಷ್ಟು ದಿನ ಕಳೆದರೂ ಅಧಿಕಾರಿಗಳು ಮಾತ್ರ ಇನ್ನು ಯಾವುದೇ ಉತ್ತರ ನೀಡಿಲ್ಲ.
ದೀವಗಿಯ ಸಮೀಪ ಶಿರಸಿಗೆ ತೆರಳುವ ಸ್ಥಳದಲ್ಲಿ ತೀರಾ ಅವೈಜ್ಞಾನಿಕವಾಗಿ ಚತುಷ್ಪಥ ಹೆದ್ದಾರಿ ನಿರ್ಮಿಸಿದ್ದು, ಇದರಿಂದ ಅಪಘಾತ ಉಂಟಾಗುವ ಸಂಭವ ಅಧಿಕವಾಗಿದೆ. ಅಲ್ಲದೇ, ಗ್ರಾಪಂ ಕಾರ್ಯಾಲಯ, ಗ್ರಾಮ ಲೆಕ್ಕಾಧಿಕಾರಿಗಳ ಕಚೇರಿ, ಅಂಚೆಕಚೇರಿ, ಸಹಕಾರಿ ಸಂಘ, ಮಠ, ದೇವಸ್ಥಾನಗಳಿಗೆ ತೆರಳುವುದಕ್ಕೆ ಸಾರ್ವಜನಿಕರಿಗೆ ಬಹಳ ತೊಂದರೆ ಉಂಟಾಗುತ್ತಿದೆ. ಮುಖ್ಯವಾಗಿ ಹಿರಿಯ ಮತ್ತು ಕಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗೆ ತೆರಳುವ ವಿದ್ಯಾರ್ಥಿಗಳು ಈ ಚತುಷ್ಪಥ ಹೆದ್ದಾರಿಯಲ್ಲೇ ನಡೆದಾಡಬೇಕಾದ ಅನಿವಾರ್ಯತೆಯಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು, ರಾಷ್ಟ್ರೀಯ ಹೆದ್ದಾರಿಗೆ ಸರ್ವೀಸ್ ರಸ್ತೆ ಮತ್ತು ಮೇಲ್ಸೇತುವೆ ನಿರ್ಮಿಸುವಂತೆ ಇಲಾಖೆಗೆ ಸೂಚಿಸಬೇಕು ಎಂದು ಮನವಿಮಾಡಿದರು.
ಶಿರಸಿಗೆ ತೆರಳುವ ಕ್ರಾಸ್‌ನಲ್ಲಿ ಡೇಂಜರ್ ಝೋನ್ ಆಗಿರುವುದರಿಂದ ತುರ್ತಾಗಿ ಹಂಪ್ ವ್ಯವಸ್ಥೆ, ದೀವಗಿ ಕ್ರಾಸ್‌ನಲ್ಲಿ ಹೈ ಮಾಸ್ಕ್ ವಿದ್ಯುತ್ ದೀಪ ಅಳವಡಿಸಬೇಕು. ಇನ್ನು ಸರ್ವೀಸ್ ರಸ್ತೆ ನಿರ್ಮಾಣ ಆಗುವವರೆಗೂ ಈ ಭಾಗದಲ್ಲಿ ಏಕಮುಖ ಸಂಚಾರ ವ್ಯವಸ್ಥೆ ಮಾಡುವಂತಿಲ್ಲ ಎಂದು ಮನವಿಯಲ್ಲಿ ಒತ್ತಾಯಿಸಿದರು.
ಈ ಕುರಿತು ಸ್ಥಳೀಯ ಆರ್.ಕೆ. ಅಂಬಿಗ ಮಾತನಾಡಿದರು. ಜಿಲ್ಲಾಧಿಕಾರಿ ಡಾ| ಹರೀಶಕುಮಾರ ಪ್ರತಿಕ್ರಿಯಿಸಿ, ಸರ್ವೀಸ್ ರಸ್ತೆ ಹಾಗೂ ಮೇಲ್ಸೇತುವೆ ಕಾಮಗಾರಿ ಕುರಿತು ಚರ್ಚಿಸಿ, ಆದಷ್ಟು ಶೀಘ್ರದಲ್ಲಿ ಪರಿಹಾರ ದೊರಕಿಸಲು ಪ್ರಯತ್ನಿಸುತ್ತೇನೆ. ಇಲ್ಲಿನ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳುವ ಕುರಿತು ಚರ್ಚಿಸಲು ಕೆಲ ನಿವಾಸಿಗಳು ಜ. 9ರಂದು ಕಚೇರಿಗೆ ಆಗಮಿಸುವಂತೆ ತಿಳಿಸಿದರು.
ಜಿ.ಪಂ. ಸದಸ್ಯ ಗಜಾನನ ಪೈ, ಗ್ರಾ.ಪಂ. ಅಧ್ಯಕ್ಷ ಕೃಷ್ಣ ಗೌಡ, ಗ್ರಾ.ಪಂ. ಸದಸ್ಯರಾದ ಹೇಮಂತಕುಮಾರ ಗಾಂವಕರ, ಶಂಕರ ಅಂಬಿಗ, ವಿನಾಯಕ ದೇಶಭಂಡಾರಿ, ತಾ.ಪಂ. ಮಾಜಿ ಅಧ್ಯಕ್ಷ ಜಿ.ಜಿ. ಹೆಗಡೆ, ಪ್ರಮುಖರಾದ ಮೈಕಲ್ ರೊಡ್ರಗೀಸ್, ಶಂಕರ ನಾಯ್ಕ, ಶ್ರೀಧರ ಬಗ್ಗೊಣ ಸೇರಿದಂತೆ ನೂರಾರು ಸಂಖ್ಯೆಯ ಸಾರ್ವಜನಿಕರು ಇದ್ದರು.