ಬೆಂಗಳೂರು: ರಾಜ್ಯ ಒಕ್ಕಲಿಗರ ಸಂಘಕ್ಕೆ ಸರ್ಕಾರ ನೇಮಿಸಿರುವ ಆಡಳಿತಾಧಿಕಾರಿಯನ್ನು ವಾಪಸ್ ಕರೆಸಿಕೊಳ್ಳಬೇಕು ಎಂದು ಸಂಘದ ಮಾಜಿ ಕಾರ್ಯಾಧ್ಯಕ್ಷ ಎಂ.ಎ.ಆನಂದ್ ಒತ್ತಾಯಿಸಿದ್ದಾರೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಐಎಎಸ್ ಅಧಿಕಾರಿ ಅಶೋಕ್ ಆನಂದ ಅವರನ್ನು ರಾಜ್ಯ ಒಕ್ಕಲಿಗರ ಸಂಘದ ಆಡಳಿತಾಧಿಕಾರಿಯಾಗಿ ನೇಮಕ ಮಾಡಿದಾಗಿನಿಂದಲೂ ಸಂಘದ ಆದಾಯ ಇಳಿಮುಖವಾಗಿದೆ. ವಿದ್ಯಾ ಸಂಸ್ಥೆಗಳ ಚಟುವಟಿಕೆ ಕುಂಠಿತಗೊಂಡಿವೆ.
ಅಶೋಕ್ ಆನಂದ್ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದು, ಅವರು ತಮ್ಮ ಕೆಲಸದ ಮೇಲೆ ಗಮನ ಹರಿಸುತ್ತಿಲ್ಲ ಎಂದು ದೂರಿದರು. ಸಹಕಾರ ಸಚಿವ ಬಂಡೆಪ್ಪ ಕಾಶೆಂಪುರ ಅವರು ಪ್ರತಿ ವರ್ಷ ಸರ್ವ ಸದಸ್ಯರ ಸಭೆ ಕರೆದು, ಲೆಕ್ಕ ಪರಿಶೋಧಕರಿಂದ ಲೆಕ್ಕ ಪರಿಶೋಧನೆ ಮಾಡಿಸಬೇಕಿತ್ತು.
ಆದರೆ ಅದನ್ನು ಮಾಡದೇ 2018 ಆಗಸ್ಟ್‌ನಲ್ಲಿ ಆಡಳಿತಾಧಿಕಾರಿ ನೇಮಿಸುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಸರ್ಕಾರ ಆಡಳಿತಾಧಿಕಾರಿಯನ್ನು ಕೂಡಲೇ ಹಿಂಪಡೆದು, ಸಂಘದ ಅಜೀವ ಸದಸ್ಯರಿಂದ ಆಯ್ಕೆಯಾದ ನಿರ್ದೇಶಕರಿಗೆ ಅಧಿಕಾರ ಬಿಟ್ಟುಕೊಡಬೇಕು ಎಂದು ಆಗ್ರಹಿಸಿದರು.