ಯಾದಗಿರಿ: ನಗರದಲ್ಲಿ ಅಂಗಡಿಗಳ ಮೇಲೆ ವ್ಯಾಪಾರಿಗಳು ಆಂಗ್ಲ ನಾಮಫಲಕ ಹಾಕಿದ್ದು, ಕೂಡಲೇ ತೆರವುಗೊಳಿಸಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಯುವ ಘಟಕ ಜಿಲ್ಲಾಧ್ಯಕ್ಷ ವಿಶ್ವರಾಧ್ಯ ದಿಮ್ಮೆ ನೇತೃತ್ವದಲ್ಲಿ ಕರವೇ ಕಾರ್ಯಕರ್ತರು ನಗರಸಭೆ ಪೌರಾಯುಕ್ತರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಅವರು, ನಗರದಲ್ಲಿ ನಗರಸಭೆ ವ್ಯಾಪ್ತಿಗೆ ಬರುವ ಸರ್ಕಾರಿ / ಅರೆ ಸರ್ಕಾರಿ ಅಂಗಡಿ ಮುಂಗಟ್ಟುಗಳ ಮುಂದೆ ಕನ್ನಡದಲ್ಲಿ ನಾಮಫಲಕ ಅಳವಡಿಸಬೇಕು ಎಂದು ಒತ್ತಾಯಿಸಿದರು.
ಈಗಾಗಲೇ ಸರ್ಕಾರ, ಬಿ.ಬಿ.ಎಂ.ಪಿ.ಯಲ್ಲಿ ಮಹತ್ವದ ಆದೇಶ ಹೊರಡಿಸಿದ್ದು, ಅದೇ ಮಾದರಿಯಲ್ಲಿ ನಗರದಲ್ಲಿ ಕೂಡ ಕಡ್ಡಾಯವಾಗಿ ಕನ್ನಡದಲ್ಲಿ ನಾಮಫಲಕ ಹಾಕುವಂತೆ ಆದೇಶಿಸಬೇಕು. ನಾಮಫಲಕ ಅಳವಡಿಸದೇ ಇರುವ ಅಂಗಡಿಗಳ ಪರವಾನಗಿ ರದ್ದು ಪಡಿಸಿ ಆದೇಶಿಸಬೇಕು. ಅಧಿ ಕಾರಿಗಳಿಂದ ಕನ್ನಡಕ್ಕೆ ಪ್ರಥಮ ಆದ್ಯತೆ ನೀಡುವಂತ ಕೆಲಸಕ್ಕೆ ತಾವು ಮುಂದಾಗಬೇಕು ಎಂದು ಆಗ್ರಹಿಸಿದರು.
ವಿಶೇಷವಾಗಿ ಯಾದಗಿರಿ ನಗರದಲ್ಲಿ ಪ್ಲಾಸ್ಟಿಕ್ ನಿಷೇಧ ಮಾಡಿ ಪ್ಲಾಸ್ಟಿಕ್ ಬಳಕೆ ಮಾಡುತ್ತಿರುವವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು. ನವೆಂಬರ್ 1 ರೊಳಗೆ ಈ ಬಗ್ಗೆ ಕ್ರಮ ಕೈಗೊಳ್ಳದಿದ್ದರೆ ನವೆಂಬರ್-1 ರಂದು ಕರವೇ ಯುವ ಘಟಕದ ವತಿಯಿಂದ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು.
ನಗರದ ವಿವಿಧ ವೃತ್ತಗಳಲ್ಲಿ ರಾಜ್ಯೋತ್ಸವ ನಿಮಿತ್ತ ಕನ್ನಡ ಧ್ವಜಾರೋಹಣ ಕಾರ್ಯಕ್ರಮ ನಡೆಯುವುದರಿಂದ ಆ ಎಲ್ಲಾ ವೃತ್ತಗಳಲ್ಲಿ ನಗರಸಭೆ ವತಿಯಿಂದ ಸ್ವತ್ಛತೆ ಕಾರ್ಯ ಕೈಗೊಳ್ಳಬೇಕೆಂದು ಮನವಿ ಮಾಡಿದರು.
ಜಿಲ್ಲಾಧ್ಯಕ್ಷ ಟಿ.ಎನ್.ಭೀಮು ನಾಯಕ ಮನವಿಗೆ ಸ್ಪಂದಿಸಿದ ಪೌರಾಯುಕ್ತ ರಮೇಶ ಸುಣಗಾರ, ನಗರದಲ್ಲಿ ರಾಜ್ಯೋತ್ಸವ ನಿಮಿತ್ತ ಸ್ವತ್ಛತೆ ಕೈಗೊಳ್ಳುವುದರ ಜೊತೆಗೆ ಎಲ್ಲಾ ಅಂಗಡಿಗಳ ಆಂಗ್ಲ ನಾಮಫಲಕ ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುವುದು. ಆಟೋದಲ್ಲಿ ಪ್ರಚಾರ ಮಾಡಿ ಜನರಲ್ಲಿ ಜಾಗೃತಿ ಮೂಡಿಸಲಾಗುವುದು ಎಂದು ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ದು ನಾಯಕ ಹತ್ತಕುಣಿ, ಸಾಬು ನಾಯಕ ಬಗ್ಲಿ, ದೀಪಕ ಒಡೆಯರ್, ರಿಯಾಜ್ ಪಟೇಲ್, ರವಿ ನಾಯಕ ಜಮ್ಮಾರ, ನಾಗು ತಾಂಡೂರಕರ್, ಅನೀಲ ದಾಸನಕೇರಿ, ಜೀವನ ಸೇರಿದಂತೆ ಅನೇಕ ಕಾರ್ಯಕರ್ತರಿದ್ದರು.