Advertisement

ಕುಡಿವ ನೀರು ಪೂರೈಕೆಗೆ ಒತ್ತಾಯ

12:23 PM Jun 24, 2022 | Team Udayavani |

ಕಲಬುರಗಿ: ನಗರದ ಕೊಠಾರಿ ಭವನದ ಟ್ಯಾಂಕ್‌ನಿಂದ ಹಳೆ ಜೇವರ್ಗಿ ರಸ್ತೆಯಲ್ಲಿರುವ ಹನುಮಾನ ನಗರಕ್ಕೆ ನೀರಿನ ಪೈಪ್‌ಲೈನ್‌ ಅಳವಡಿಸಬೇಕು ಎಂದು ಒತ್ತಾಯಿಸಿ ಸೋಷಲಿಸ್ಟ್‌ ಯೂನಿಟಿ ಸೆಂಟರ್‌ ಆಫ್‌ ಇಂಡಿಯಾ (ಕಮ್ಯುನಿಸ್ಟ್‌) ಪಕ್ಷದಿಂದ ಗುರುವಾರ ಮಹಾನಗರ ಪಾಲಿಕೆ ಎದುರು ಪ್ರತಿಭಟನೆ ನಡೆಸಲಾಯಿತು.

Advertisement

ಕಳೆದ ಐದು ವರ್ಷದ ಹಿಂದೆ ಜಿಲ್ಲಾಧಿಕಾರಿ ಆದೇಶದ ಮೇರೆಗೆ ವಿಶೇಷ ಅನುದಾನದಲ್ಲಿ ಈ ಬಡಾವಣೆಗೆ ಶಾಶ್ವತ ನೀರಿನ ವ್ಯವಸ್ಥೆಗಾಗಿ ಹೊಸ ಪೈಪ್‌ಲೈನ್‌ ಅಳವಡಿಸಲು ಯೋಜಿಸಲಾಗಿತ್ತು. ಪಿಡಬ್ಲ್ಯುಡಿ ಇಲಾಖೆಯಿಂದ ಬಡಾವಣೆಯಿಂದ ಕೊಠಾರಿ ಭವನದ ನೀರಿನ ಟ್ಯಾಂಕ್‌ ವರೆಗೆ ಹೊಸ ಪೈಪ್‌ಲೈನ್‌ ಅಳವಡಿಸಲಾಗಿದೆ. ಆದರೆ ನೀರು ಸರಬರಾಜಿನ ಸಂಪರ್ಕ ಮಾತ್ರ ಕಲ್ಪಿಸಿಲ್ಲ. ಅಧಿಕಾರಿಗಳು ಸಂಪೂರ್ಣ ನಿರ್ಲಕ್ಷ್ಯ ವಹಿಸಿದ್ದಾರೆ. ಕಳೆದ ಬೇಸಿಗೆ ಯಿಂದಲೂ ಜನರು ಪಾಲಿಕೆ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜವಾಗಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ದಶಕದ ಹೋರಾಟಕ್ಕೆ ಫಲ ದೊರೆತರೂ ಇನ್ನೂವರೆಗೆ ಹನುಮಾನ ನಗರದ ನಿವಾಸಿಗಳಿಗೆ ನೀರು ದೊರೆಯುತ್ತಿಲ್ಲ. ಈಗ ಈ ಪೈಪ್‌ಗೆ ಕೋಠಾರಿ ಭವನದ ನೀರಿನ ಟ್ಯಾಂಕ್‌ನ ಸಂಪರ್ಕ ಸ್ಥಾಪಿಸಲು ಅನಾವಶ್ಯಕವಾದ ಕಾಲಹರಣ ಮಾಡಲಾಗುತ್ತಿದೆ. ಇದರಿಂದಾಗಿ ಬಡಾವಣೆ ಜನರು ನೀರಿಗಾಗಿ ಕಾಯುತ್ತಿದ್ದಾರೆ. ಅದ್ದರಿಂದ ಕೂಡಲೇ ಸಂಪರ್ಕ ಕಲ್ಪಿಸಬೇಕು ಎಂದು ಒತ್ತಾಯಿಸಿ ಮನವಿ ಸಲ್ಲಿಸಲಾಯಿತು.

ಬಡಾವಣೆಯ ಗೌರಮ್ಮ ಸಿ.ಕೆ, ಮಹೇಶ ಎಸ್‌.ಬಿ, ಸಾಬಮ್ಮ, ಶರಣಮ್ಮ, ಮಹಾದೇವಿ, ಲಕ್ಷ್ಮಿಬಾಯಿ, ಪಾರ್ವತಿ, ಸುನೀತಾ ಇತರರು ಈ ಸಂದರ್ಭದಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next