Advertisement

ಪಶು ಆಸ್ಪತ್ರೆಗೆ ಸಿಬ್ಬಂದಿ ನೇಮಿಸಲು ಒತ್ತಾಯ

03:45 PM May 25, 2022 | Team Udayavani |

ಬ್ಯಾಡಗಿ: ತಾಲೂಕಿನ ಪಶು ಆಸ್ಪತ್ರೆಗಳಿಗೆ ಅಗತ್ಯ ಸಿಬ್ಬಂದಿ ನಿಯೋಜಿಸುವಂತೆ ಸರಕಾರವನ್ನು ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಮಂಗಳವಾರ ತಹಶೀಲ್ದಾರ್‌ ತಿಪ್ಪೇಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು.

Advertisement

ಈ ವೇಳೆ ಮಾತನಾಡಿದ ರೈತ ಮುಖಂಡ ಶಶಿಧರಸ್ವಾಮಿ ಛತ್ರದಮಠ, ತಾಲೂಕಿನ ಕದರಮಂಡಲಗಿ, ಮಾಸಣಗಿ, ಗುಂಡೇನಹಳ್ಳಿ ಸೇರಿದಂತೆ ಬಹುತೇಕ ಪಶು ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆಯಿದೆ. ಸರ್ಕಾರದ ಬೇಜವಾಬ್ದಾರಿ ವರ್ತನೆಯಿಂದಾಗಿ ರೈತರು ಪರದಾಡಬೇಕಾಗಿದೆ ಎಂದು ಆರೋಪಿಸಿದರು.

ಸಿಬ್ಬಂದಿ ಕೊಡಿ ಇಲ್ಲವೇ ಆಸ್ಪತ್ರೆ ಮುಚ್ಚಿ: ರೈತ ಪರ ಸರ್ಕಾರ ಎಂದು ಬಡಾಯಿ ಕೊಚ್ಚಿಕೊಳ್ಳುವ ಸರ್ಕಾರ, ರಾಜ್ಯದ ಬಹುತೇಕ ಕೃಷಿಕ ಸಮುದಾಯ ಎಲ್ಲ ರೀತಿಯಿಂದಲೂ ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ. ಗೊಬ್ಬರ ಕೇಳಿದವರ ಮೇಲೆ ಗುಂಡು ಹಾರಿಸಿದ ನಿಮಗೆ ರೈತರ ನೋವು ಅರ್ಥವಾಗುವುದಾದರೂ ಹೇಗೆ? ಕೂಡಲೇ ಸರ್ಕಾರ ಪಶು ವೈದ್ಯ ಸೇವಾ ಇಲಾಖೆಗೆ ಅಗತ್ಯ ಸಿಬ್ಬಂದಿ ನಿಯೋಜಿಸಿ. ಇಲ್ಲದಿದ್ದರೆ ಅವುಗಳನ್ನು ಮುಚ್ಚುವ ಮೂಲಕ ಇರುವಂತಹ ಅಲ್ಪಸ್ವಲ್ಪ ಸಿಬ್ಬಂದಿಯನ್ನು ಬೇರೆ ಇಲಾಖೆಗೆ ಎರವಲು ವರ್ಗಾವಣೆ ಮಾಡುವಂತೆ ಸಲಹೆ ನೀಡಿದರು.

ಹೈನುಗಾರಿಕೆ ಜೀವಾಳ: ಜಿಲ್ಲೆಯಲ್ಲಿ ಹೈನುಗಾರಿಕೆ ಜೀವಾಳವಾಗಿದೆ. ಜಿಲ್ಲೆಯಲ್ಲಿ ಪಶುಪಾಲನಾ ಇಲಾಖೆ ಸಿಬ್ಬಂದಿ ಕೊರತೆಯಿಂದಾಗಿ ಜಾನುವಾರುಗಳು ರೋಗಗ್ರಸ್ತವಾಗುತ್ತಿವೆ. ನಿಮ್ಮ ಉದ್ದೇಶವಾದರೂ ಏನು? ರೈತನ ಮಕ್ಕಳು ಎಂದು ಹೇಳಿಕೊಳ್ಳುವ ಶಾಸಕರು ಸಹ ಸುಳ್ಳು ಭರವಸೆಗಳನ್ನು ನೀಡುತ್ತಿದ್ದಾರೆ. ಸಿಬ್ಬಂದಿಯನ್ನು ನಿಯೋಜಿಸಿದ ಬಳಿಕವೇ ರೈತರ ಬಗ್ಗೆ ಮಾತನಾಡಲಿ. ಶೀಘ್ರದಲ್ಲಿ ವೈದ್ಯರ ಕೊರತೆ ಸರಿಪಡಿಸದಿದ್ದಲ್ಲಿ ಸಂಘಟನೆ ವತಿಯಿಂದ ತೀವ್ರ ಸ್ವರೂಪದ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.

ಜಾನುವಾರು ಜೀವಕ್ಕೆ ತೊಂದರೆ: ಕದರಮಂಡಲಗಿ ಗ್ರಾಪಂ ಉಪಾಧ್ಯಕ್ಷ ಭೀಮಪ್ಪ ನಾಯ್ಕರ ಮಾತನಾಡಿ, ತಾಲೂಕಿನ ಬಹುಪಾಲು ಪಶು ಆಸ್ಪತ್ರೆಗಳಲ್ಲಿ ವೈದ್ಯರಿಲ್ಲ. ಜಾನುವಾರುಗಳಿಗೆ ಚಿಕಿತ್ಸೆಗಾಗಿ ನಾಲ್ಕೈದು ಕಿಮೀ ದೂರದ ಪಶು ಆಸ್ಪತ್ರೆಗಳಿಗೆ ಹೋಗಬೇಕಾಗಿದೆ. ಸಿಬ್ಬಂದಿ ಹಾಗೂ ಮೂಲ ಸೌಲಭ್ಯದ ಕೊರತೆಯಿಂದ ಜಾನುವಾರುಗಳಿಗೆ ಸಕಾಲಕ್ಕೆ ಚಿಕಿತ್ಸೆ ಸಿಗುತ್ತಿಲ್ಲ. ಇದರಿಂದ ರೋಗಪೀಡಿತ ಮತ್ತು ಅಪಘಾತಕ್ಕೊಳಗಾದ ಜಾನುವಾರುಗಳು ಚಿಕಿತ್ಸೆ ಸಿಗದೇ ಸಾವನ್ನಪ್ಪುತ್ತಿವೆ ಎಂದು ಆರೋಪಿಸಿದರು.

Advertisement

ಈ ಸಂದರ್ಭದಲ್ಲಿ ವಿಶ್ವನಾಥ ಹಿರೇಮಠ, ಮುನ್ನೀರ ಹಲಗೇರಿ, ಮಲ್ಲೇಶ್‌ ಎರೇಶೀಮಿ, ಯಲ್ಲಪ್ಪ ಅಜ್ಜಮ್ಮನವರ, ಯಲ್ಲಪ್ಪ ಓಲೇಕಾರ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next