ಲಕ್ಷ್ಮೇಶ್ವರ: ತಾಲೂಕಿನ ಸೂರಣಗಿ ಗ್ರಾಮದ ರೈತ ರಾಜೇಸಾಬ ದೊಡ್ಡಲಾಡಸಾಬ ಹಾಲಗಿ ಪೋತಿಯಾಗಿದ್ದಾರೆ ಎಂದು ಸುಳ್ಳು ದಾಖಲೆ ಸೃಷ್ಟಿಸಿ, ಇವರಿಗೆ ಸೇರಿದ್ದ ಜಮೀನನ್ನು ಕಾನೂನು ಬಾಹೀರವಾಗಿ ಕಂದಾಯ ನಿರೀಕ್ಷಕರು ಖಾತೆ ಬದಲಾವಣೆ ಮಾಡಿದ್ದಾರೆ.
ಇವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ತಮ್ಮ ಕುಟುಂಬಕ್ಕೆ ಸೇರಿದ ಜಮೀನಿನನ್ನು ವಾಪಸ್ ಕೊಡಿಸಬೇಕೆಂದು ಆಗ್ರಹಿಸಿ ಶನಿವಾರ ಹಾಲಗಿ ಕುಟುಂಬಸ್ಥರು ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ ದೂರಿನಲ್ಲಿ, ಸೂರಣಗಿ ಗ್ರಾಮದ 3 ಎಕರೆ 36 ಗುಂಟೆ ಜಮೀನನ್ನು 15-11-2016ರಂದು ಪಾತಿಮಾ ರಾಜೇಸಾಬ ಹಾಲಗಿ ಎಂಬುವರ ಹೆಸರಿಗೆ ಖಾತೆ ಬದಲಾವಣೆ ಮಾಡಿದ್ದಾರೆ. ಮೂಲ ಆಸ್ತಿದಾರ ರಾಜೇಸಾಬ ದೊಡ್ಡಲಾಡಸಾಬ ಹಾಲಗಿ ಕುಟುಂಬದವರು ಹೊಟ್ಟೆ ಪಾಡಿಗಾಗಿ ಗುಳೆ ಹೋದ ಸಂದರ್ಭವನ್ನು ಬಳಸಿಕೊಂಡು ಖೊಟ್ಟಿ ದಾಖಲೆ ಸೃಷ್ಟಿಸಿ, ಖೊಟ್ಟಿ ಸಹಿಗಳನ್ನು ಮಾಡಿಸಿ ಬೇರೆಯವರ ಹೆಸರಿಗೆ ಖಾತೆ ಬದಲಾವಣೆ ಮಾಡಿದ್ದಾರೆ.
ರಾಜೇಸಾಬ ದೊಡ್ಡಲಾಡಸಾಬ ಹಾಲಗಿ ಎಂಬ ರೈತನು 1974ರಲ್ಲಿ ಪೋತಿಯಾಗಿದ್ದಾನೆ ಎಂದು ಗ್ರಾಮಲೆಕ್ಕಾಧಿಕಾರಿ ಅವರು 2016ರಲ್ಲಿ ಸುಳ್ಳು ದಾಖಲೆ ಸೃಷ್ಟಿಸಿ ಜಮೀನಿನ ಖಾತೆ ಬದಲಾವಣೆ ಮಾಡಿದ್ದಾರೆ. ಆದರೆ 1981ರಲ್ಲಿ ರಾಜೇಸಾಬ ಹಾಲಗಿ ಅವರು ಸೂರಣಗಿ ಗ್ರಾಮದ ಈರಪ್ಪ ಪುಟ್ಟಪ್ಪ ನೀರಲಗಿ ಅವರಿಂದ ಸದರಿ ಜಮೀನನ್ನು ಖರೀದಿ ಮಾಡಿದ್ದಾರೆ. ಆದರೆ ಗ್ರಾಮಲೆಕ್ಕಾಧಿಕಾರಿ ವಿ.ವಿ.ಶಿರೂರ ಮತ್ತು ಕಂದಾಯ ನಿರೀಕ್ಷಕ ಎಸ್.ಎಸ್.ಪಾಟೀಲ ಸೇರಿಕೊಂಡು ಯಾವುದೇ ಆಸೆಯಿಂದ ಬೇರೆಯವರ ಹೆಸರಿನಲ್ಲಿ ಖಾತೆ ಮಾಡಿದ್ದಾರೆ. ಇವರ ಮೇಲೆ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಈಗಾಗಲೇ ಲಕ್ಷ್ಮೇಶ್ವರ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ ಎಂದು ಮನವಿಯಲ್ಲಿ ಬರೆಯಲಾಗಿದೆ.
ಈ ಕುರಿತು ತಹಶೀಲ್ದಾರ್ ಭ್ರಮರಾಂಬ ಗುಬ್ಬಿಶೆಟ್ಟಿ ಪ್ರತಿಕ್ರಿಯಿಸಿ, ಈ ವಿಷಯಕ್ಕೆ ಸಂಬಂಧಿಸಿದಂತೆ ಕಂದಾಯ ನಿರೀಕ್ಷಕರಿಗೆ ಕಾರಣ ಕೇಳಿ ನೋಟಿಸ್ ನೀಡಲಾಗಿದೆ. ಅಲ್ಲದೇ ಜಿಲ್ಲಾಧಿಕಾರಿಗಳಿಗೂ ಈ ಬಗ್ಗೆ ಸಮಗ್ರ ವರದಿ ನೀಡಲಾಗಿದೆ ಎಂದರು. ರಾಜೇಸಾಬ ಹಾಲಗಿ, ಮೋದಿನಸಾಬ ಹಾಲಗಿ, ರಾಜಬೀ ಹಾಲಗಿ, ಖೈರುನಬಿ ಹಾಲಗಿ, ಕುಮಾರ ಬೆಟಗೇರಿ, ಮಂಜುನಾಥ ಮೂಲಿಮನಿ ಇದ್ದರು.