Advertisement

ಪುರಾತನ ಅಣೆಕಟ್ಟುಗಳಿಗೆ ಅಭದ್ರತೆ

01:18 PM Nov 08, 2019 | Suhan S |

ಗಂಗಾವತಿ: ಅಕ್ರಮ ಮರಳು ಗಣಿಗಾರಿಕೆಯಿಂದ ವಿಜಯನಗರದ ಅರಸರ ಕಾಲದಲ್ಲಿ ದೇವಘಾಟ ಮತ್ತು ಮೋತಿಘಾಟ ಹತ್ತಿರ ತುಂಗಭದ್ರಾ ನದಿಗೆ ನೈಸರ್ಗಿಕವಾಗಿ ನಿರ್ಮಿಸಿದ ಅಣೆಕಟ್ಟೆಗಳು ಹಾಗೂ ಕಾಲುವೆಗಳು ಅಪಾಯ ಎದುರಾಗಿದೆ.

Advertisement

ದೇವಘಾಟ, ಮೋತಿಘಾಟ, ಸಿಂಗನಗುಂಡು ಪ್ರದೇಶದ ತುಂಗಭದ್ರಾ ನದಿಯಲ್ಲಿ ಜೆಸಿಬಿ ಮೂಲಕ ಹಗಲು ರಾತ್ರಿಯೆನ್ನದೇ ಮರಳು ತೆಗೆಯಲಾಗುತ್ತಿದೆ. ನದಿಯಿಂದ ತೆಗೆದ ಮರಳನ್ನು ಗುಡ್ಡ ಪ್ರದೇಶದಲ್ಲಿ ಸಂಗ್ರಹಿಸಿ ಮಾರಾಟ ಮಾಡುವ ವ್ಯವಸ್ಥಿತ ಜಾಲ ಸೃಷ್ಟಿಯಾಗಿದೆ. ಸಿಂಗನಗುಂಡು ಪ್ರದೇಶದಲ್ಲಿ ಮರಳು ಹೇರಳವಾಗಿದ್ದು ಇದಕ್ಕೆ ಬೆಂಗಳೂರು, ದಾವಣಗೆರೆ, ಚಿತ್ರದುರ್ಗಾ ಸೇರಿ ಇತರೆ ನಗರಗಳಲ್ಲಿ ಬೇಡಿಕೆ ಇದೆ. ನದಿಯಿಂದ ಟ್ರಾಕ್ಟರ್‌ ಮೂಲಕ ಮರಳನ್ನು ಒಂದೆಡೆ ಹಾಕಿ ನಂತರ ಲಾರಿಗಳ ಮೂಲಕ ಬೇರೆ ನಗರಗಳಿಗೆ ಸಾಗಿಸಲಾಗುತ್ತಿದೆ.

ನಿಲ್ಲುತ್ತಿಲ್ಲ ಗಣಿಗಾರಿಕೆ: ಅಕ್ರಮ ಮರಳುಗಾರಿಕೆ ಸಂಬಂಧ ಇಲ್ಲಿಯ ರೈತರು ಹಲವು ಭಾರಿ ಅಧಿ ಕಾರಿಗಳಿಗೆ ಮನವಿ ಮಾಡಿದ್ದಾರೆ. ಅಧಿಕಾರಿಗಳು ಮಾತ್ರ ಸ್ಥಳಕ್ಕೆ ಆಗಮಿಸಿ ಎಚ್ಚರಿಕೆ ನೀಡಿ ಹೋಗುತ್ತಾರೆಯೇ ವಿನಃ ಮರಳು ಗಣಿಗಾರಿಕೆಯನ್ನು ಶಾಶ್ವತವಾಗಿ ನಿಲ್ಲಿಸುವ ಕೆಲಸ ಮಾಡುತ್ತಿಲ್ಲ.

ಜಲಚರಗಳಿಗೂ ಕುತ್ತು: ತುಂಗಭದ್ರಾ ನದಿ ಅನೇಕ ಜೀವ ವೈವಿಧ್ಯತೆಯಿಂದ ಕೂಡಿದ್ದು ವಿಶೇಷವಾಗಿ ಕಂಪ್ಲಿ ಸೇತುವೆಯಿಂದ ತುಂಗಭದ್ರಾ ಡ್ಯಾಂವರೆಗಿನ ಪ್ರದೇಶವನ್ನು ಚೀರನಾಯಿ (ನೀರನಾಯಿ) ಸಂರಕ್ಷಿತ ಪ್ರದೇಶವೆಂದು ಘೋಷಣೆ ಮಾಡಲಾಗಿದೆ. ಇಲ್ಲಿ ಗುಡ್ಡಗಾಡು ಪ್ರದೇಶ ಇರುವುದರಿಂದ ಕರಡಿ, ಚಿರತೆ, ಮೊಲ, ತೋಳ, ನರಿ ಹೀಗೆ ಹತ್ತು ಹಲವು ಪ್ರಾಣಿ ಸಂಕುಲವಿದೆ. ಆಮೆ, ಮೊಸಳೆ ಸೇರಿದಂತೆ ವಿವಿಧ ಬಗೆಯ ಮೀನು ಮತ್ತು ಪಕ್ಷಿಗಳಿಗೆ ಆಶ್ರಯ ತಾಣವಾಗಿದೆ.

ರಾತ್ರಿ ವೇಳೆ ಜೆಸಿಬಿಯಿಂದ ಮರಳು ತೆಗೆಯುವುದರಿಂದ ಜೀವಿ ಸಂಕುಲಕ್ಕೆ ತೊಂದರೆಯಾಗುತ್ತದೆ. ತುಂಗಭದ್ರಾ ನದಿ ಅಥವಾ ನದಿ ದಡದ ಗುಡ್ಡ ಪ್ರದೇಶಗಳಲ್ಲಿ ಮರಳು ಮತ್ತು ಕಲ್ಲಿನ ಗಣಿಗಾರಿಕೆ ನಡೆಸದಂತೆ ವನ್ಯಜೀವಿ ಸಂರಕ್ಷಣಾ ಸಂಘಟನೆ ಕಾರ್ಯಕರ್ತರು ಈಗಾಗಲೇ ತುಂಗಭದ್ರಾ ಯೋಜನಾಧಿಕಾರಿಗಳಿಗೆ ಮನವಿ ಮಾಡಿದ್ದರೂ ಪ್ರಯೋಜನವಾಗುತ್ತಿಲ್ಲ.

Advertisement

ತುಂಗಭದ್ರಾ ನದಿಯಲ್ಲಿ ಅಕ್ರಮ ಮರಳು ಮತ್ತು ನದಿ ಪಕ್ಕದಲ್ಲಿರುವ ಗುಡ್ಡ ಪ್ರದೇಶಗಳಲ್ಲಿ ಕಲ್ಲುಗಣಿಗಾರಿಕೆ ನಡೆಸುವುದರಿಂದ ಜೀವಿ ಸಂಕುಲ ನಾಶಕ್ಕೆ ಕಾರಣವಾಗಿದೆ. ಪುರಾತನ ವಿಜಯನಗರ ಮೇಲ್ಮಟ್ಟ ಮತ್ತು ಕೆಳಮಟ್ಟದ ಕಾಲುವೆಗಳು ತುಂಗಭದ್ರಾ ನದಿಗೆ ನೈಸರ್ಗಿಕವಾಗಿ ನಿರ್ಮಿಸಲಾಗಿದೆ. ಈ ಪ್ರದೇಶದಲ್ಲಿ ಮರಳು ಗಣಿಗಾರಿಕೆ ಸಂಪೂರ್ಣ ನಿಷೇಧವಿದೆ. ಅಧಿ ಕಾರಿಗಳು ಕೂಡಲೇ ಅಕ್ರಮ ನಡೆಸುವವರ ವಿರುದ್ಧ ಕ್ರಮ ಕೈಗೊಳ್ಳಬೇಕಿದೆ. ಡಾ| ಶರಣಬಸಪ್ಪ ಕೋಲ್ಕಾರ್‌, ಇತಿಹಾಸ ತಜ್ಞರು

 

-ಕೆ.ನಿಂಗಜ್ಜ

Advertisement

Udayavani is now on Telegram. Click here to join our channel and stay updated with the latest news.

Next