ಮಸ್ಕಿ: ರೋಹಿಣಿ, ಮಿರಗ ಮಳೆ ಹೊರತುಪಡಿಸಿ ಉಳಿದ ಮಳೆಯ ತಿಥಿ ಆರಂಭ ಕಾಲಕ್ಕೆ ಬಿತ್ತನೆಯಾದ ತೊಗರಿ ಬೆಳೆಗೆ ಈಗ ಕೀಟಕೂಟಲೆ ಶುರುವಾಗಿದೆ. ಬೆಳೆ ನಾಟಿಯಾಗುತ್ತಲೇ ಜಿಡಿ-ಹುಳು ಬಾಧೆಗೆ ತೊಗರಿ ಬೆಳೆ ಒಣಗುತ್ತಿದ್ದು, ರೈತರಲ್ಲಿ ಆತಂಕ ಉಂಟು ಮಾಡಿದೆ.
ಮಸ್ಕಿ ತಾಲೂಕು ಸೇರಿ ಜಿಲ್ಲಾದ್ಯಂತ ಈ ಬಾರಿ ಖುಷ್ಕಿ ಆಶ್ರಿತ ಪ್ರದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ತೊಗರಿ ಬಿತ್ತನೆ ಮಾಡಲಾಗಿದೆ. ಆದರೆ ಈ ಬೆಳೆಗೆ ಈ ಬಾರಿ ಅವಧಿ ಪೂರ್ವವೇ ಕೀಟಬಾಧೆ ಶುರುವಾಗಿದ್ದು ಬೆಳೆ ಹಾನಿ ಆಗುತ್ತಿದೆ. ಇದನ್ನು ನೋಡಿದರೆ ಇದು ಕೀಟ ಬಾಧೆಯೋ? ಅಥವಾ ಯಾವುದಾದರೂ ರೋಗ ಹರಡಿದೆಯೋ? ಎನ್ನುವ ಆತಂಕ ರೈತರನ್ನು ಕಾಡುತ್ತಿದೆ.
ನೂರಾರು ಎಕರೆ ನಷ್ಟದ ಭೀತಿ: ತಾಲೂಕಿನ ಮಸ್ಕಿ, ಗುಡದೂರು, ಬಳಗಾನೂರು, ಹಾಲಾಪುರ, ಪಾಮನಕಲ್ಲೂರು, ಮೆದಿಕಿನಾಳ, ತಲೆಖಾನ್, ಸಂತೆಕಲ್ಲೂರು ಸೇರಿ ಬಹುತೇಕ ಹೋಬಳಿಯ ಒಣಬೇಸಾಯ ಪ್ರದೇಶದಲ್ಲಿ ತೊಗರಿ ಹೆಚ್ಚು ಬಿತ್ತಲಾಗಿದೆ. ಮುಂಗಾರು ಪೂರ್ವ ಹಾಗೂ ಮುಂಗಾರು ಆರಂಭದ ಮೇ, ಜೂನ್‌ನಲ್ಲಿ ರೋಹಿಣಿ, ಮಿರಗ ಮಳೆಗೆ ಬಿತ್ತನೆಯಾದ ತೊಗರಿ ಬೆಳೆ ಬಹುತೇಕ ನಾಟಿ ನಿಂತಿದೆ. ಈ ಬೆಳೆಗೆ ಹುಳು ಬಾಧೆ ಇದ್ದರೂ ನಷ್ಟದ ಭೀತಿ ಕಡಿಮೆ. ಆದರೆ ಜುಲೈ, ಆಗಸ್ಟ್ ನಲ್ಲಿ ಬಿತ್ತಿದ ತೊಗರಿ ಮಾತ್ರ ಬೆಳೆಯುವ ಮುನ್ನವೇ ಒಣಗುತ್ತಿದೆ. ಗುಡದೂರು, ಬಳಗಾನೂರು, ಪಾಮನಕಲ್ಲೂರು, ಹಾಲಾಪುರ ಹೋಬಳಿಗಳಲ್ಲಿ ನೂರಾರು ಎಕರೆ ತೊಗರಿ ಬೆಳೆ ನಾಶವಾಗುತ್ತಿದೆ. ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳೇ ಬೆಳೆ ಪರಿಶೀಲಿಸಿದ್ದು, ಹುಳು ಬಾಧೆ ಕಂಡು ಗಾಬರಿಯಾಗಿದ್ದಾರೆ. ಪ್ರತಿ ವರ್ಷ ತೊಗರಿ ಬೆಳೆ ಬೆಳೆದ ಮೇಲೆ ಆವರಿಸುತ್ತಿದ್ದ ಜೀಡಿ ಹುಳ ಈ ಬಾರಿ ನಾಟಿಯಾಗುತ್ತಲೇ ಕಾಡುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ಕ್ರಿಮಿನಾಶಕ ಮೊರೆ: ಬೀಜ ಖರೀದಿ, ಬಿತ್ತನೆ ಖರ್ಚು ಭರಿಸಿ ತೊಗರಿ ನಾಟಿ ಮಾಡಿದ ರೈತರು ಈಗ ಬೆಳೆ ರಕ್ಷಣೆಗಾಗಿ ಕ್ರಿಮಿನಾಶಕ ಸಿಂಪರಣೆ ಮೊರೆ ಹೋಗಿದ್ದಾರೆ. ಸಾವಿರಾರು ರೂ. ಮೊತ್ತದ ಕ್ರಿಮಿನಾಶಕಗಳನ್ನು ಖರೀದಿಸಿ ಸಿಂಪರಿಸುವ ಮೂಲಕ ಬೆಳೆ ರಕ್ಷಣೆಗೆ ಹರಸಾಹಸ ಪಡುತ್ತಿದ್ದಾರೆ. ನಷ್ಟದ ಸುಳಿಯಲ್ಲಿರುವ ರೈತರ ನೆರವಿಗೆ ಕೃಷಿ ಇಲಾಖೆ ಧಾವಿಸುತ್ತಿಲ್ಲ ಎನ್ನುವ ಆರೋಪಗಳು ಕೇಳಿ ಬಂದಿವೆ.
ಕೃಷಿ ಸಹಾಯಕ ನಿರ್ದೇಶಕರಿಲ್ಲ: ಮಸ್ಕಿ ತಾಲೂಕಿಗೆ ಇದುವರೆಗೆ ಕಾಯಂ ಕೃಷಿ ಸಹಾಯಕ ನಿರ್ದೇಶಕರೇ ಇಲ್ಲ. ಆಯಾ ಹೋಬಳಿ ವ್ಯಾಪ್ತಿಯ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳೇ ಸುಪ್ರೀಂ. ಹೀಗಾಗಿ ರೈತರ ಸಂಕಷ್ಟಕ್ಕೆ ಪರಿಹಾರದ ಮಾತಿರಲಿ, ಹಾಳಾಗುತ್ತಿರುವ ಬೆಳೆ ರಕ್ಷಣೆಗೆ ಮಾರ್ಗ ತೋರುವವರೂ ಇಲ್ಲದಾಗಿದೆ. ಕೆಲ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳು ಮಾತ್ರ ಫೀಲ್ಡ್‌ಗೆ ಇಳಿದಿದ್ದರೆ, ಇನ್ನು ಕೆಲವರು ಕಚೇರಿಯತ್ತಲೇ ಸುಳಿಯುತ್ತಿಲ್ಲ. ತೊಗರಿಗೆ ಕಾಡುತ್ತಿರುವ ಹುಳು ಬಾಧೆ ನಿವಾರಣೆಗೆ ಸಬ್ಸಿಡಿ ದರದಲ್ಲಿ ಕ್ರಿಮಿನಾಶಕ ವಿತರಿಸುವ ಅಗತ್ಯವಿದೆ. ಆದರೆ ಬಹುತೇಕ ರೈತ ಸಂಪರ್ಕ ಕೇಂದ್ರದಲ್ಲಿ ಇದರ ವಿತರಣೆಗೆ ಮುಂದಾಗದಿರುವುದು ರೈತರಲ್ಲಿ ಆಕ್ರೋಶ ಉಂಟು ಮಾಡಿದೆ.
ಪ್ರತಿ ವರ್ಷ ತೊಗರಿ ಬಿತ್ತನೆಯಾದ ಐದಾರು ತಿಂಗಳ ಬಳಿಕ ಕ್ರಿಮಿನಾಶಕಸಿಂಪರಣೆ ಮಾಡಬೇಕಿತ್ತು. ಆದರೆ ಈ ಬಾರಿ ಬಿತ್ತನೆ ಮಾಡಿದ ಹದಿನೈದು ದಿನದಲ್ಲೇ ರೋಗ ಕಾಣಿಸಿಕೊಳ್ಳುತ್ತಿದೆ. ಇದಕ್ಕೆ ಕಾರಣ, ಪರಿಹಾರ ಏನು? ಎನ್ನುವ ಕುರಿತು ಇಲಾಖೆಯಿಂದ ಮಾಹಿತಿಯೇ ದೊರೆಯುತ್ತಿಲ್ಲ.-
ಫಕೀರಪ್ಪ, ರೈತ.
ಮುಂಗಾರಿಗಿಂತ ತಿಂಗಳು, ಎರಡು ತಿಂಗಳು ತಡವಾಗಿ ಬಿತ್ತನೆ ಮಾಡಿದ ತೊಗರಿಗೆ ಹುಳು ಭಾದೆ ಕಂಡು ಬಂದಿರುವುದು ನಿಜ. ಈ ಬಗ್ಗೆ ನಮ್ಮ ಹೋಬಳಿಯಲ್ಲಿ ಸ್ಥಾನಿಕ ಪರಿಶೀಲನೆ ಮಾಡಲಾಗಿದೆ. ಇದಕ್ಕೆ ಸೂಕ್ತ ಔಷಧದ ಸಿಂಪರಣೆ ಕುರಿತು ರೈತರಿಗೆ ಹೇಳಲಾಗುತ್ತಿದೆ.-
ಶ್ರೀಶೈಲ, ಆರ್‌ಎಸ್‌ಕೆ, ಪಾಮನಕಲ್ಲೂರು.
-ಮಲ್ಲಿಕಾರ್ಜುನ ಚಿಲ್ಕರಾಗಿ