Advertisement
ಶ್ರೀಲಂಕಾದಲ್ಲಿ ಮುದ್ದಿನ ಮಡದಿಯೊಂದಿಗೆ ಹತ್ತು ದಿನ ಬಂಧುಬಳಗ ಎಂದೆಲ್ಲ ಸುತ್ತಾಡಿ, ರಜೆ ಕಳೆದು ದುಬೈಗೆ ಮರಳಿದ ಅಬ್ದುಲ್ ಖಾದರ್ ಕುಕ್ಕಾಡಿ ವಿಮಾನವಿಳಿದು ಹೊರಹೊರಟಿದ್ದರಷ್ಟೇ. ಸುದ್ದಿ ಬಂದು ಅಪ್ಪಳಿಸಿತು, ಕಿವಿಗಳಿಗೆ ಕಾದ ಸೀಸದಂತೆ. ಕೆಲವೇ ಗಂಟೆಗಳ ಹಿಂದೆ ತನ್ನನ್ನು ಬೀಳ್ಕೊಂಡ ಹೆಂಡತಿ ಇದೀಗ ಯಾರೋ ಸಿಡಿಸಿದ ಬಾಂಬಿಗೆ ಬಲಿಯಾಗಿ ನೆಲಕ್ಕೊರಗಿದ್ದಾಳೆ ಎಂದರೆ ನಂಬುವುದಾದರೂ ಹೇಗೆ? ಮತ್ತೂಂದು ವಿಮಾನದಲ್ಲಿ ಮರಳಿ ಶ್ರೀಲಂಕಾಕ್ಕೆ ಹೊರಟ ಅಬ್ದುಲ್ಲರ ಮನದಲ್ಲಿ ಸುನಾಮಿಯಂತೆ ಏಳುತ್ತಿದ್ದ ಭಾವನೆಗಳು… ಬಾಂಬ್ ಸಿಡಿಸಿದವರ ಮೇಲೆ ಕೋಪ ಜ್ವಾಲಾಮುಖೀಯಂತೆ ಒಳಗೇ ಕುದಿಯುತ್ತಿತ್ತು. ಮನದಾಳದಲ್ಲಿ ಹತಾಶೆ, ದುಃಖ, ಅಸಹಾಯಕತೆ ಮಡುಗಟ್ಟಿತ್ತು. ನಾಲ್ಕು ದಶಕಗಳ ಹೆಂಡತಿಯ ಸಾಂಗತ್ಯವನ್ನು ಅರೆಕ್ಷಣದಲ್ಲಿ ಬಾಂಬ್ ಸ್ಫೋಟ ಛಿದ್ರಗೊಳಿಸಿತ್ತು.
Related Articles
ಸಾಂಪ್ರದಾಯಿಕ ಪದ್ಧತಿಗಳನ್ನು ಚಾಚೂತಪ್ಪದೇ ಪಾಲಿಸುತ್ತಿದ್ದ ರಜೀನಾ ಇಸ್ಲಾಂ ಧರ್ಮದ ಮೂಲತತ್ವಗಳನ್ನು ಅರಿತುಕೊಂಡಿದ್ದರು. ತನ್ನ ಸುತ್ತಲೂ ಪ್ರೀತಿ, ಶಾಂತಿ ಮತ್ತು ಸಂತಸವನ್ನು ಹರಡುವುದೇ ಧರ್ಮದ ಮೂಲಬೇರು ಎಂಬುದನ್ನು ಕಂಡುಕೊಂಡಿದ್ದರು. ಬೇರೆ ಸಂಸ್ಕೃತಿ, ಮತಗಳನ್ನು ಆದರಿಸುತ್ತಿದ್ದ ಆಕೆ ತನ್ನೊಳಗೊಂದು ಆಧುನಿ ಕತೆಯ ಕಣ್ಣನ್ನು ಸದಾ ತೆರೆದಿಟ್ಟುಕೊಂಡಿದ್ದರು. ಸಂಗೀತದ ಕುರಿತು ತೀವ್ರ ಒಲವು ಹೊಂದಿದ್ದ ಆಕೆ ಶಾಸ್ತ್ರೀಯ ಸಂಗೀತದಿಂದ ಹಿಡಿದು ಪಾಪ್ ಸಂಗೀತದವರೆಗೆ ಎಲ್ಲವನ್ನೂ ಖುಷಿಯಿಂದ ಆಲಿಸುತ್ತಿದ್ದರು. ಪಿಯಾನೋ ನುಡಿಸುವುದನ್ನು ಕಲಿತಿದ್ದರು. ನನ್ನ ಹರೆಯದ ದಿನಗಳಲ್ಲಿ ಬ್ರಿಟ್ನಿ ಸ್ಪಿಯರ್, ಸ್ಪೆ çಸ್ ಗರ್ಲ್ಸ್ ಇವರನ್ನೆಲ್ಲ ನನಗೆ ಪರಿಚಯಿಸಿದ್ದೇ ನನ್ನಮ್ಮ. ಒಮ್ಮೆ ಕೇಳಿದರೆ ಸಾಕು, ಹಾಗೆಯೇ ಅದನ್ನು ಪಿಯಾನೋದಲ್ಲಿ ನುಡಿಸುತ್ತಿದ್ದರು. ನನ್ನಮ್ಮ ಯಾರನ್ನೂ ನೋಯಿಸಿದವಳಲ್ಲ, ಯಾರಾದ್ರೂ ಅವಳಿಗೆ ಏನಾದರೂ ಒರಟಾಗಿ ಹೇಳಿದರೂ ಅವರನ್ನು ಕ್ಷಮಿಸಿದ್ದಳು. ಎಲ್ಲರ ಬಗ್ಗೆ ಪ್ರೀತಿ ಇತ್ತು ಅವಳಿಗೆ-ಎಂದು ಆಕೆಯ ಮಗಳು ಫರ್ಹಾನಾ ನೆನಪಿಸಿಕೊಳ್ಳುತ್ತಾರೆ. ಯಾವುದೇ ಕೆಲಸ ಮಾಡಿದರೂ ಅದರಲ್ಲಿ ಒಂದು ಪರಿಪೂರ್ಣತೆ ಇರಬೇಕೆಂದು ಬಯಸುತ್ತಿದ್ದ ರಜೀನಾಗೆ ಹೊಸ ಹೊಸ ಅಡುಗೆಗಳನ್ನು ಕಲಿಯುವುದರಲ್ಲಿಯೂ ತುಂಬ ಆಸಕ್ತಿಯಿತ್ತು.
Advertisement
ರಜೀನಾ ಬಾಲ್ಯ, ಹರೆಯವನ್ನು ಕಳೆದಿದ್ದು ಶ್ರೀಲಂಕಾದಲ್ಲಿ. ಅಲ್ಲಿಯ ನಾಗರಿಕ ಯುದ್ಧ ಸಮಾಜದ ಮೇಲೆ ಚಾಚಿದ್ದ ಕ್ರೌರ್ಯ, ಭಯ, ತಲ್ಲಣಗಳ ಕರಿನೆರಳಿನಲ್ಲಿಯೇ ಮನಸ್ಸನ್ನು ಗಟ್ಟಿಯಾಗಿರಿಸಿಕೊಂಡು ಬೆಳೆದಿದ್ದರು. ಎಲ್‌ಟಿಟಿಇ ಗೆರಿಲ್ಲಾಗಳು ಅವಳ ತಂದೆಯನ್ನು ಅಪಹರಿಸಿ, ಕಾಡಿನಲ್ಲಿ ಒತ್ತೆಯಾಳಾಗಿ ಇರಿಸಿಕೊಂಡಿದ್ದರು. ಆ ಸಂಕಟದ ಸಮಯದಲ್ಲಿ ತಾಯಿಗೆ, ಸಹೋದರರಿಗೆ ಧೈರ್ಯ ತುಂಬಿ, ಸಾಂತ್ವನ ನೀಡಿದ್ದು ರಜೀನಾ!
ಸ್ವದೇಶಾಭಿಮಾನಿ !ಶ್ರೀಲಂಕಾದ ಜನಜೀವನ ಉತ್ತಮಗೊಳ್ಳಬೇಕು, ಆ ದೇಶ ಮತ್ತೆ ಪ್ರವಾಸೀತಾಣವಾಗಿ ಸಮೃದ್ಧಿಯತ್ತ ಸಾಗಬೇಕು ಎಂದು ಆಕೆ ತಮ್ಮ ಮಾತುಕತೆಗಳಲ್ಲಿ ಸದಾ ಹೇಳುತ್ತಿದ್ದರು. ಶ್ರೀಲಂಕಾಕ್ಕೆ ಕೆಲವು ವರ್ಷಗಳ ನಂತರ ಗಂಡನೊಂದಿಗೆ ಹೋಗಿದ್ದ ಆಕೆ ಅಲ್ಲಿಯ ಬಂಧು, ಬಾಂಧವರನ್ನು ಕಂಡು ಸಂತೋಷಪಟ್ಟಿದ್ದರು. ಶಾಂಗ್ರೀಲಾ ಹೊಟೇಲ್‌ನಲ್ಲಿ ಹತ್ತು ದಿನ ಕಳೆದ ನಂತರ ಭಾನುವಾರ ಬೆಳಗ್ಗೆ ಗಂಡ ಅಬ್ದುಲ್ ದುಬೈಗೆ ವಾಪಾಸಾದರು. ಎಲ್ಲ ಸರಿಯಾಗಿದ್ದಿದ್ದರೆ ಅದೇ ದಿನ ಸಂಜೆ ಆ ಹೊಟೇಲ್‌ನಿಂದ ಚೆಕ್‌ಔಟ್ ಆಗಿ, ತನ್ನ ತಮ್ಮನ ಮನೆಗೆ ಹೋಗಿ, ಅಲ್ಲಿ ಒಂದೆರಡು ದಿನವಿದ್ದು, ನಂತರ ರಜೀನಾ ದುಬೈಗೆ ಮರಳಬೇಕೆಂದು ಅಂದುಕೊಂಡಿದ್ದರು. ಆದರೆ, ಸರಣಿ ಬಾಂಬ್‌ಹಂತಕರು ವಿಧಿಯಾಟವನ್ನು ನಿಯಂತ್ರಿಸಿದ್ದರು. ಶ್ರೀಲಂಕಾದಲ್ಲಿ ರಜೆಯನ್ನು ಖುಷಿಯಿಂದ ಗಂಡ ಮತ್ತು ಬಂಧುಗಳೊಂದಿಗೆ ಕಳೆಯುತ್ತಿದ್ದಾಗ ರಜೀನಾ ಕೊನೆಯ ಬಾರಿ ಪಿಯಾನೋ ನುಡಿಸಿದ್ದರು. ವ್ಯಂಗ್ಯವೆಂದರೆ ಆಕೆಯ ಬೆರಳುಗಳು ಕೊನೆಯದಾಗಿ ಪಿಯಾನೋದಲ್ಲಿ ನುಡಿಸಿದ್ದು ಶ್ರೀಲಂಕಾದ ರಾಷ್ಟ್ರಗೀತೆಯಾಗಿತ್ತು! ರಜೀನಾಳ ಸುಂದರ ಮುಖದಲ್ಲಿ ಕಿರುನಗೆಯಿತ್ತು. ಬೆಳಗ್ಗೆಯಷ್ಟೇ ಗಂಡನನ್ನು ಕಳಿಸಿ, ಅಮೆರಿಕದಲ್ಲಿದ್ದ ಮಗನೊಂದಿಗೆ ಫೋನಿನಲ್ಲಿ ಮಾತನಾಡಿದ ರಜೀನಾ, ಹುಚ್ಚು ಮತಾಂಧತೆಯ ಕಿಚ್ಚಿಗೆ ಬಲಿಯಾಗಿದ್ದರು. ರಜೀನಾಳಿಲ್ಲದ ಬದುಕು ಇನ್ನು ಮೊದಲಿನಂತೆ ಇರುವುದು ಸಾಧ್ಯವೇ ಇಲ್ಲ. ಅವಳೆಂತಹ ಅದ್ಭುತ ಮಾನವೀಯ ಅಂತಃಕರಣದ ವ್ಯಕ್ತಿ… ಯಾಕೆ ಅವಳಿಗೇ ಹೀಗೆ ಆಗಬೇಕು… ಯಾಕೆ ನಮ್ಮ ಕುಟುಂಬಕ್ಕೆ ಈ ಕಟುಶಿಕ್ಷೆ ಅಬ್ದುಲ್ಲರು ನೋವಿನಿಂದ ಕೇಳುತ್ತಾರೆ. ಅಬ್ದುಲ್ಲರಂತೆಯೇ ಆಪ್ತರನ್ನು ಕಳೆದುಕೊಂಡ ಕುಟುಂಬಗಳು ಉತ್ತರ ಸಿಗದ ಪ್ರಶ್ನೆಯನ್ನು ಕೇಳುತ್ತಲೇ ಇವೆ. -ಸುಮಂಗಲಾ