ಕಾಪು: ಇನ್ನಂಜೆ ರೈಲ್ವೆ ಸ್ಟೇಷನ್ ಬಳಿ ಮಧುರೈನಿಂದ ಮುಂಬಯಿಗೆ ತೆರಳುತ್ತಿದ್ದ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೋರ್ವರ ಕುತ್ತಿಗೆಯಿಂದ ಅಪರಿಚಿತ ವ್ಯಕ್ತಿಯೋರ್ವ ಲಕ್ಷಾಂತರ ಬೆಲೆ ಬಾಳುವ ಚಿನ್ನದ ಸರವನ್ನು ಸುಲಿಗೆಗೈದು ಪರಾರಿಯಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ತಮಿಳುನಾಡು ಜಿಲ್ಲೆಯ ಮಧುರೈ ನಿವಾಸಿ ಸುಂದರಿ ಗಣೇಶನ್ ಎಂಬವರು 32 ಗ್ರಾಂ ತೂಕದ ಚಿನ್ನವನ್ನು ಕಳೆದುಕೊಂಡಿದ್ದು, ಅದರ ಮೌಲ್ಯ ಸುಮಾರು 1.70 ಲಕ್ಷ ರೂ ಎಂದು ಅಂದಾಜಿಸಲಾಗಿದೆ.
ಸುಂದರಿ ಗಣೇಶನ್ ಮೇ 29ರಂದು ತನ್ನ ಗಂಡನೊಂದಿಗೆ ಮುಂಬಯಿಯಲ್ಲಿರುವ ಮಗಳ ಮನೆಗೆ ಮಧುರೈನಿಂದ ಪನ್ವೇಲ್ ಗೆ ತಿರುನಲ್ವೇಲಿ ದಾದರ್ ಸೂಪರ್ ಪಾಸ್ಟ್ ಎಕ್ಸ್‌ಪ್ರೆಸ್ ಸ್ಲೀಪರ್ ಕೋಚ್ ರೈಲಿನಲ್ಲಿ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ. ರೈಲಿನ ಎಸ್1 ಬೋಗಿಯಲ್ಲಿ ಪ್ರಯಾಣಿಸುತ್ತಿದ್ದ ಅವರು ರಾತ್ರಿ 9.30 ರ ವೇಳೆ ಊಟ ಮುಗಿಸಿ 76 ನೇ ನಂಬರಿನ ಕೆಳಗಿನ ಸೀಟಿನಲ್ಲಿ ಮಲಗಿದ್ದರು. ಮತ್ತೆ 11.15 ವೇಳೆಗೆ ಎಚ್ಚರವಾದಾಗ ಯಾವುದೋ ಸ್ಟೇಷನ್ ಬಳಿ ರೈಲು ನಿಂತುಕೊಂಡಿರುವುದನ್ನು ಗಮನಿಸಿದ್ದರು.
ಈ ವೇಳೆ ಯಾರೋ ಅಪರಿಚಿತ ಅವರ ಕುತ್ತಿಗೆಯಲ್ಲಿದ್ದ ಚೈನ್ ನನ್ನು ಎಳೆದಂತಾಗಿದ್ದು ಪೂರ್ತಿ ಎಚ್ಚರವಾಗುವ ವೇಳೆಗೆ ರೈಲು ಅಲ್ಲಿಂದ ಹೊರಟಾಗಿತ್ತು. ಆ ವೇಳೆ ಸುಂದರಿ ಗಣೇಶನ್ ಅವರು ತನ್ನ ಕುತ್ತಿಗೆಯನ್ನು ನೋಡಿದಾಗ ಕುತ್ತಿಗೆಯಲ್ಲಿದ್ದ ಸುಮಾರು 4 ಗ್ರಾಂ ತೂಕದ 2 ಚಿನ್ನದ ಕಾಸು ಹಾಗೂ 2 ಚಿನ್ನದ ಗುಂಡುಗಳನ್ನು ಜೋಡಿಸಿರುವ ಮಾಂಗಲ್ಯ ರೀತಿಯ ಹಳದಿ ಬಣ್ಣದ ದಾರ ಹಾಗೂ ಸುಮಾರು 28 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರ ಕಳವಾಗಿರುವುದು ಗಮನಕ್ಕೆ ಬಂದಿತ್ತು.
ಈ ಬಗ್ಗೆ ರೈಲಿನಲ್ಲಿರುವ ಟಿಟಿಇ ಬಳಿ ನಡೆದ ವಿಚಾರವನ್ನು ತಿಳಿಸಿ ಸರವನ್ನು ಎಳೆದುಕೊಂಡು ಹೋದ ಬಗ್ಗೆ ದೂರು ನೀಡಿದ್ದರು. ಮುಂಬೈಗೆ ಹೋದ ಬಳಿಕ ರೈಲ್ವೆ ಪೊಲೀಸರನ್ನು ಸಂಪರ್ಕಿಸಿದಾಗ ಅವರ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಎಳೆದುಕೊಂಡು ಹೋಗಿರುವ ಸ್ಥಳ ಇನ್ನಂಜೆ ರೈಲ್ವೆ ಸ್ಟೇಷನ್ ಎಂದು ತಿಳಿದು ಬಂದಿತ್ತು.
ಅದರಂತೆ ರೈಲಿನಲ್ಲಿ ಚಿನ್ನದ ಸರ ಕಳವಾಗಿರುವ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದ್ದು ಕಾಪು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.