Advertisement

ಸಾಮಾನ್ಯ ವರ್ಗದ ಸರ್ಕಾರಿ ನೌಕರರಿಗೆ ಅನ್ಯಾಯ

01:42 PM Oct 09, 2017 | |

ವಿಜಯಪುರ: ಬಡ್ತಿ ಮೀಸಲಾತಿಯಲ್ಲಿನ ಅವೈಜ್ಞಾನಿಕ ನೀತಿ-ನಿಯಮಾವಳಿಗಳಿಂದಾಗಿ ಅಲ್ಪಸಂಖ್ಯಾತ, ಹಿಂದುಳಿದ ವರ್ಗ ಹಾಗೂ ಸಾಮಾನ್ಯ ವರ್ಗದ ಸರ್ಕಾರಿ ನೌಕರರು ಅನೇಕ ರೀತಿಯ ಅನ್ಯಾಯ ಎದುರಿಸುವಂತಾಗಿದೆ. ಪರಿಣಾಮವಾಗಿ ನೌಕರರು ಮಾನಸಿಕ ನೋವು ಅನುಭವಿಸುತ್ತಿದ್ದಾರೆ ಎಂದು
ಅಹಿಂಸಾ ಸಂಘಟನೆ ರಾಜ್ಯ ಘಟಕದ ಅಧ್ಯಕ್ಷ ಎಂ.ನಾಗರಾಜ ಹೇಳಿದರು.

Advertisement

ನಗರದ ದರಬಾರ್‌ ಹೈಸ್ಕೂಲ್‌ ಮೈದಾನದಲ್ಲಿ ಅಲ್ಪಸಂಖ್ಯಾತ, ಹಿಂದುಳಿದ ವರ್ಗ ಹಾಗೂ ಸಾಮಾನ್ಯ ವರ್ಗಗಳ ಸರ್ಕಾರಿ ನೌಕರರ ಹಾಗೂ ಸಿಬ್ಬಂದಿ, ನಿವೃತ್ತರ ಹಿತರಕ್ಷಣಾ ಒಕ್ಕೂಟದ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಕೇವಲ ಸಂಬಳಕ್ಕಾಗಿ ಸರ್ಕಾರಿ ನೌಕರ ನೌಕರಿ ಮಾಡುವುದಿಲ್ಲ. ಜನಸೇವೆಯನ್ನು ತಮ್ಮ ಧ್ಯೇಯವಾಗಿರಿಸಿಕೊಳ್ಳುವ ಜೊತೆಗೆ ಸಮಾಜದಲ್ಲಿ ಘನತೆ ಸಂಪಾದಿಸುವ ದೃಷ್ಟಿಯಿಂದಲೂ ಕಾರ್ಯ ನಿರ್ವಹಿಸುತ್ತಾರೆ. ಆದರೆ ನ್ಯಾಯಯುತವಾಗಿ ದೊರಕಬೇಕಾದ ಬಡ್ತಿ ದೊರಕದೇ ಮನಸ್ಸಿಗೆ ನೋವುಂಟಾಗುವುದಂತೂ ಸತ್ಯ ಎಂದರು.

ತನ್ನೊಡನೆ ಸೇವೆಗೆ ಪದಾರ್ಪಣೆ ಮಾಡಿದ, ತನ್ನಷ್ಟೇ ವಿದ್ಯಾರ್ಹತೆ ಹೊಂದಿದ ಆತನ ಪರಿಶಿಷ್ಟ ಪಂಗಡದ ಸಹುದ್ಯೋಗಿ ಮೇಲಾಧಿಕಾರಿಯಾಗುತ್ತಾನೆ. ಆದರೆ ಸಾಮಾನ್ಯ ವರ್ಗಕ್ಕೆ ಸೇರಿದ ವ್ಯಕ್ತಿ ಮಾತ್ರ ಪ್ರಮೋಷನ್‌ನಿಂದ ವಂಚಿತವಾಗಿ ಕೆಳಹಂತದ ಹುದ್ದೆಯಲ್ಲಿ ಕಾರ್ಯ ನಿರ್ವಹಿಸಬೇಕಾಗುತ್ತದೆ. ಇದು ಸಹಜವಾಗಿಯೇ ನೌಕರರಲ್ಲಿ ನೋವಿಗೆ ಕಾರಣವಾಗುತ್ತದೆ ಎಂದರು.

ನಾವು ಮೀಸಲಾತಿ ವಿರೋಧಿಗಳಲ್ಲ ಎಂದು ಸ್ಪಷ್ಟಪಡಿಸಿ ಅವರು, ಸುಪ್ರೀಂಕೋರ್ಟ್‌ ಸಹ ಮೀಸಲಾತಿ ಅವಶ್ಯಕತೆ ಒತ್ತಿ ಹೇಳಿದೆ. ನೇಮಕಾತಿ ಸಂದರ್ಭದಲ್ಲಿ, ಶೈಕ್ಷಣಿಕ ಸೇವೆ ಪಡೆದುಕೊಳ್ಳುವಲ್ಲಿ ಮೀಸಲಾತಿ ಇರಬೇಕು. ಆದರೆ ಬಡ್ತಿ ಸಮಯದಲ್ಲಿ ಮೀಸಲಾತಿ ಇರಬೇಕಾಗಿರುವುದು ಅವಶ್ಯವಲ್ಲ
ಎಂಬುದು ನಮ್ಮ ಪ್ರತಿಪಾದನೆ ಎಂದರು.

Advertisement

ಅವೈಜ್ಞಾನಿಕ ಬಡ್ತಿ ಮೀಸಲಾತಿ ವಿರುದ್ಧ ನಡೆಯುತ್ತಿರುವ ಹೋರಾಟ ನಿನ್ನೆ ಮೊನ್ನೆಯದಲ್ಲ. 1978ರಿಂದಲೂ ನಿರಂತರವಾಗಿ ಈ ಬಡ್ತಿ ಮೀಸಲಾತಿ ವಿರುದ್ಧ ಕಾನೂನಾತ್ಮಕ ಹೋರಾಟ ಕೈಗೊಳ್ಳಲಾಗುತ್ತಿದೆ. ಸುಪ್ರೀಂಕೋರ್ಟ್‌ಗೆ ಹೋಗಿ ನ್ಯಾಯ ಪಡೆದುಕೊಳ್ಳಲಾಗಿದೆ. ಆದರೆ ಸುಪ್ರೀಂಕೋರ್ಟ್‌ ತೀರ್ಪು ಅನುಷ್ಠಾನದ ಹೊಣೆ ಹೊತ್ತ ಸರ್ಕಾರಗಳು ಮಾತ್ರ ಸುಪ್ರೀಂ ಆದೇಶ ಪಾಲಿಸಲಿಲ್ಲ. ಬದಲಾಗಿ ಹಿಂಬಡ್ತಿ ಪಡೆದ ಪರಿಶಿಷ್ಟ ಪಂಗಡ ಅಧಿಕಾರಿಗಳು ಆಡಳಿತ ಯಂತ್ರಕ್ಕೆ ಒತ್ತಡದಿಂದಾಗಿ ನ್ಯಾಯಾಲಯದ ಆದೇಶಕ್ಕೆ ವಿರುದ್ಧವಾಗಿ ಸಂಸತ್‌ನಲ್ಲಿ ಸಂವಿಧಾನ ತಿದ್ದುಪಡಿ ಮಾಡಿ ಮಸೂದೆ ಅಂಗೀಕರಿಸಲಾಗಿದೆ ಎಂದರು.

ಇದು ನಮಗೆ ಹಿನ್ನೆಡೆಯಾದರೂ ಸಹ ನಾವು ಹೋರಾಟ ಮಾತ್ರ ಕೈ ಬಿಡಲಿಲ್ಲ. ಸರ್ವೋತ್ಛ ನ್ಯಾಯಾಲಯದ ತೀರ್ಪು ಅಸಿಂಧು ಗೊಳಿಸುವ ಕಾರಣದಿಂದಾಗಿಯೇ ಬಡ್ತಿ ಮೀಸಲಾತಿಗೆ ಸಂವಿಧಾನ ತಿದ್ದುಪಡಿ ಮಾಡಲಾಗಿದೆ. ಈ ಬಗ್ಗೆ ನ್ಯಾಯಾಲಯ ಗಮನ ಹರಿಸಬೇಕು ಎಂಬ ವಿಷಯವನ್ನೇ ಕೇಂದ್ರಿಕರಿಸಿ ಪುನಃ ಸುಪ್ರೀಂಗೆ ಅರ್ಜಿ ಸಲ್ಲಿಸಿದೆವು. ಅದರೊಂದಿಗೆ ನ್ಯಾಯಾಂಗ ನಿಂದನೆ ಸಹ ದಾಖಲಿಸಲಾಯಿತು ಎಂದು ಕಾನೂನು ಹೋರಾಟದ ಕುರಿತು ವಿವರಿಸಿದರು.

ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಶ್ರೀಗಳು, ಯರನಾಳ ವಿರಕ್ತಮಠದ ಸಂಗನಬಸವ ಶ್ರೀಗಳು, ಹಜರತ್‌ ಸೈಯ್ಯದ್‌ ತನ್ವೀರಪೀರಾ ಹಾಶ್ಮೀ, ಬುರಾಣಪುರ ಆರೂಢಾಶ್ರಮದ ಮಾತೋಶ್ರೀ ಯೋಗೇಶ್ವರಿ ಮಾತಾಜಿ ಸಾನ್ನಿಧ್ಯ ವಹಿಸಿದ್ದರು. ಪೀಟರ್‌ ಅಲೆಕ್ಸಾಂಡರ್‌, ವಿಶ್ವನಾಥ ಭಾವಿ ಇದ್ದರು. ಸಂಘಟನೆ ಅಧ್ಯಕ್ಷ ವಿಜಯಕುಮಾರ ಹಲಕುಡೆ
ಪ್ರಾಸ್ತಾವಿಕ ಮಾತನಾಡಿದರು. ಮೆಹತಾಬ್‌ ಕಾಗವಾಡ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next