Advertisement

ಕನ್ನಡ ಅಭಿವೃದ್ಧಿ ವಿಚಾರದಲ್ಲೂ ಕೇಂದ್ರದಿಂದ ಅನ್ಯಾಯ

11:11 PM Feb 20, 2024 | Team Udayavani |

ಬೆಂಗಳೂರು: ಕೇಂದ್ರದಿಂದ ತೆರಿಗೆ ಅನುದಾನ ಹಂಚಿಕೆಯಲ್ಲಿ ಮಾತ್ರವಲ್ಲ; ಕನ್ನಡ ಅಭಿವೃದ್ಧಿ ವಿಚಾರದಲ್ಲೂ ಅನ್ಯಾಯ ಆಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಮಾಡಿದ ಆರೋಪ ಮಂಗಳವಾರ ಮೇಲ್ಮನೆಯಲ್ಲಿ ವಾಗ್ವಾದಕ್ಕೆ ಎಡೆಮಾಡಿಕೊಟ್ಟಿತು.

Advertisement

ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ (ತಿದ್ದುಪಡಿ) ಮಸೂದೆ 2024ರ ಮೇಲಿನ ಸದಸ್ಯರ ಸಲಹೆ ಮತ್ತು ಅಭಿಪ್ರಾಯಗಳಿಗೆ ಪ್ರತಿಕ್ರಿಯಿಸಿದ ಸಚಿವ ಶಿವರಾಜ ತಂಗಡಗಿ, ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಸಿಕ್ಕಿದೆ. ಆದರೆ ಅದರ ಅಭಿವೃದ್ಧಿಗೆ ಇದುವರೆಗೆ ಅನುದಾನ ಬಂದಿಲ್ಲ. ಪಕ್ಕದ ತಮಿಳುನಾಡಿಗೆ ಭಾಷಾ ಅಭಿವೃದ್ಧಿಗೆ ಸಾಕಷ್ಟು ಅನುದಾನ ಬಂದಿದೆ. ಈ ವಿಚಾರದಲ್ಲಿ ಕೇಂದ್ರ ಸರಕಾರ ಮೂಗಿಗೆ ತುಪ್ಪ ಸವರಿದೆ. ತೆರಿಗೆ ಅನುದಾನ ಹಂಚಿಕೆಯಲ್ಲಿ ಮಾತ್ರವಲ್ಲ; ಕನ್ನಡ ಅಭಿವೃದ್ಧಿ ವಿಚಾರದಲ್ಲೂ ಕರ್ನಾಟಕ ಅನ್ಯಾಯಕ್ಕೆ ಒಳಗಾಗುತ್ತಾ ಬಂದಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಇದಕ್ಕೂ ಮುನ್ನ ಮಾತನಾಡಿದ ಕಾಂಗ್ರೆಸ್‌ನ ಬಿ.ಕೆ. ಹರಿಪ್ರಸಾದ್‌, ಹಿಂದಿ ಅಭಿವೃದ್ಧಿಗೆ 1,600 ಕೋ. ರೂ. ನೀಡಿದ್ದರೆ, ಸಂಸ್ಕೃತಕ್ಕೆ 600 ಕೋ. ರೂ. ಕೊಡಲಾಗಿದೆ. ಕನ್ನಡಕ್ಕೆ ಬರೀ 3 ಕೋಟಿ ರೂ. ಮಾತ್ರ. ನೀವು ಪ್ರಧಾನಿ ಮನವೊಲಿಸಿ, ಕನ್ನಡಕ್ಕೆ ಹೆಚ್ಚು ಅನುದಾನ ಕೊಡಿಸಿ ಎಂದು ವಿಪಕ್ಷ ಸದಸ್ಯರಿಗೆ ಮನವಿ ಮಾಡಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಒಂದೆಡೆ ನೀವು ಪ್ರಧಾನಿ ನರೇಂದ್ರ ಮೋದಿ ಅವರನ್ನು ಏಕವಚನದಲ್ಲಿ ಬಯ್ಯುತ್ತೀರಿ. ಮತ್ತೂಂದೆಡೆ ಅವರಿಂದ ಅನುದಾನ ಬಯಸುತ್ತೀರಿ. ನಿಮ್ಮಲ್ಲೇ ಸ್ಪಷ್ಟತೆ ಇಲ್ಲ. ಅಷ್ಟಕ್ಕೂ ತೆರಿಗೆ ಹಂಚಿಕೆ ವಿಚಾರವೇ ಬೇರೆ; ಕನ್ನಡಕ್ಕೆ ಸಂಬಂಧಿಸಿದ ಮಸೂದೆಯ ಚರ್ಚೆಯೇ ಬೇರೆ ಎಂದರು.

ಮಧ್ಯಪ್ರವೇಶಿಸಿದ ಸಚಿವ ಎಂ.ಬಿ. ಪಾಟೀಲ್‌, ಅನುದಾನ ಕೊಡಿಸ ದಿರುವುದರಿಂದ ಬಯ್ಯುತ್ತಾರೆ. ಹಣ ಕೊಡಿಸಿದರೆ ಹೊಗಳುತ್ತೇವೆ ಎಂದರು.

Advertisement

ಆಡಳಿತ ಪಕ್ಷ ಮತ್ತು ವಿಪಕ್ಷಗಳ ನಡುವೆ ವಾಗ್ವಾದ ಮುಂದುವರಿದು ಗೊಂದಲದ ವಾತಾವರಣ ನಿರ್ಮಾಣವಾಗುತ್ತಿದ್ದಂತೆ ಸಭಾಪತಿ ಬಸವರಾಜ ಹೊರಟ್ಟಿ ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ನಿಭಾಯಿಸಿದರು.

ವಸತಿ ನಿಲಯಗಳಲ್ಲಿ ಮಹಿಳಾ ವಾಚ್‌ಮನ್‌ ನೇಮಕ
ಹಿಂದುಳಿದ ವರ್ಗದ ಸಮುದಾಯದ ಮಕ್ಕಳ ಕಲಿಕೆಗಾಗಿ ಜಿಲ್ಲಾ ಕೇಂದ್ರಗಳಲ್ಲಿ 150 ವಸತಿ ನಿಲಯಗಳನ್ನು ನಿರ್ಮಾಣ ಮಾಡಲು ಸರಕಾರ ಮುಂದಾಗಿದೆ. ಜತೆಗೆ ವಸತಿ ನಿಲಯಗಳಲ್ಲಿ ಮಹಿಳಾ ವಾಚ್‌ ಮನ್‌ಗಳನ್ನು ಹೊರಗುತ್ತಿಗೆ ಆಧಾರದಲ್ಲಿ ನೇಮಕ ಮಾಡಲು ತೀರ್ಮಾನಿಸಲಾಗಿದೆ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದರು.

ಕನ್ನಡ ಪರ ಹೋರಾಟಗಾರರ ಕೇಸು ಹಿಂಪಡೆಯಲು ಸಿಎಂ, ಗೃಹ ಸಚಿವರ ಜತೆ ಚರ್ಚೆ
ಬೆಂಗಳೂರು: ಕನ್ನಡಪರ ಹೋರಾಟಗಾರರ ವಿರುದ್ಧ ದಾಖಲಿಸಲಾದ ಪ್ರಕರಣಗಳನ್ನು ಹಿಂಪಡೆಯಲು ಮುಖ್ಯಮಂತ್ರಿ ಮತ್ತು ಗೃಹ ಸಚಿವರೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಶಿವರಾಜ ತಂಗಡಗಿ ಭರವಸೆ ನೀಡಿದರು.

ಮಸೂದೆ ಮೇಲಿನ ಚರ್ಚೆ ವೇಳೆ ಮಾತನಾಡಿದ ಅವರು, ಪ್ರತಿಭಟನೆ ವೇಳೆ ಕನ್ನಡಪರ ಹೋರಾಟಗಾರರು ಕಾನೂನು ಕೈಗೆತ್ತಿಕೊಂಡರು ಎಂದೂ ಹೇಳಲಾಗುತ್ತಿದೆ. ಆದರೆ ಕನ್ನಡಪರವಾಗಿ ಅವರು ಹೋರಾಟ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಕರಣಗಳನ್ನು ಹಿಂಪಡೆಯುವ ಅಗತ್ಯ ಇದ್ದು, ಮುಖ್ಯಮಂತ್ರಿ ಮತ್ತು ಗೃಹ ಸಚಿವರ ಗಮನಕ್ಕೆ ತಂದು ಮನವೊಲಿಸಲಾಗುವುದು ಎಂದು ಹೇಳಿದರು.

ಇದಕ್ಕೂ ಮುನ್ನ ಪಕ್ಷಾತೀತವಾಗಿ ಮೇಲ್ಮನೆ ಸದಸ್ಯರು ಕನ್ನಡಪರ ಹೋರಾಟಗಾರರ ಪರ ದನಿ ಎತ್ತಿದರು.

Advertisement

Udayavani is now on Telegram. Click here to join our channel and stay updated with the latest news.

Next