ಫ್ಲೋರಿಡಾ: ಟೀಂ ಇಂಡಿಯಾ ವಿರುದ್ದ ಇಂದಿನಿಂದ ಆರಂಭವಾಗಲಿರುವ ಟಿ ಟ್ವೆಂಟಿ ಸರಣಿಯ ಮೊದಲೆರಡು ಪಂದ್ಯಗಳಿಂದ ವಿಂಡೀಸ್ ಆಲ್ ರೌಂಡರ್ ಆಂದ್ರೆ ರಸ್ಸೆಲ್ ಹೊರಬಿದ್ದಿದ್ದಾರೆ. ಅನಾರೋಗ್ಯದ ಕಾರಣದಿಂದ ರಸ್ಸೆಲ್ ಮೊದಲೆರಡು ಪಂದ್ಯಗಳಿಂದ ತಪ್ಪಿಸಿಕೊಳ್ಳಲಿದ್ದಾರೆ.
ಆಲ್ ರೌಂಡರ್ ಆಂದ್ರೆ ರಸ್ಸೆಲ್ ರಿಂದ ತೆರವಾದ ಜಾಗಕ್ಕೆ ಜೇಸನ್ ಮೊಹಮ್ಮದ್ ಅವರನ್ನು ಅಯ್ಕೆ ಮಾಡಲಾಗಿದೆ.
ಈ ಮೊದಲು ರಸ್ಸೆಲ್ ರನ್ನು ಟಿ ಟ್ವೆಂಟಿ ಸರಣಿಗೆ ಆಯ್ಕೆ ಮಾಡಲಾಗಿದ್ದರೂ ಫಿಟ್ನೆಸ್ ಪರೀಕ್ಷೆ ಮಾಡಲಾಗುವುದು ಎಂದು ವಿಂಡೀಸ್ ಕ್ರಿಕೆಟ್ ಮಂಡಳಿ ತಿಳಿಸಿತ್ತು. ಸದ್ಯ ಕೆನಡಾದ ಗ್ಲೋಬಲ್ ಟಿ ಟ್ವೆಂಟಿಯಲ್ಲಿರುವ ರಸ್ಸೆಲ್ ಮೂರನೇ ಪಂದ್ಯಕ್ಕೆ ವೆಸ್ಟ್ ಇಂಡೀಸ್ ತಂಡ ಸೇರುವ ನಿರೀಕ್ಷೆಯಿದೆ.
“ಜೇಸನ್ ಮೊಹಮ್ಮದ್ ಅವರನ್ನು ಭಾರತ ವಿರುದ್ದದ ಮೊದಲೆರಡು ಪಂದ್ಯಗಳಿಗಾಗಿ ತಂಡಕ್ಕೆ ಸ್ವಾಗತಿಸುತ್ತೇವೆ. ಜೇಸನ್ ಎಲ್ಲಾ ಮೂರು ಮಾದರಿಯಲ್ಲಿ ಆಡಿರುವ ಹಿರಿಯ ಆಟಗಾರ. ಟ್ರಿನಿಡಾಡ್ ಆಂಡ್ ಟೊಬ್ಯಾಗೊ ಮತ್ತು ಗಯಾನಾ ವಾರಿಯರ್ಸ್ ತಂಡದಲ್ಲಿ ಜೇಸನ್ ಉತ್ತಮ ಪ್ರದರ್ಶನ ನೀಡಿದ್ದಾರೆʼʼ ಎಂದು ವಿಂಡೀಸ್ ಕೋಚ್ ಪ್ಲಾಯಿಡ್ ರೀಫರ್ ಹೇಳಿಕೆ ನೀಡಿದ್ದಾರೆ.
ಭಾರತ- ವಿಂಡೀಸ್ ಸರಣಿಯ ಮೊದಲ ಪಂದ್ಯ ಇಂದು ಫ್ಲೋರಿಡಾದಲ್ಲಿ ನಡೆಯಲಿದೆ. ಭಾರತೀಯ ಕಾಲಮಾನ ಪ್ರಕಾರ ರಾತ್ರಿ ಎಂಟು ಗಂಟೆಗೆ ಆರಂಭವಾಗಲಿರುವ ಈ ಪಂದ್ಯ ವಿಶ್ವಕಪ್ ನಂತರ ಭಾರತ ಆಡುತ್ತಿರುವ ಮೊದಲ ಪಂದ್ಯವಾಗಿದೆ.