ಮೆಲ್ಬರ್ನ್: ಕ್ವಾರ್ಟರ್ ಫೈನಲ್ ಕಾದಾಟದ ವೇಳೆ ಅಮೆರಿಕದ ಸೆಬಾಸ್ಟಿಯನ್ ಕೋರ್ಡ ಗಾಯಾಳಾಗಿ ಹಿಂದೆ ಸರಿದ ಕಾರಣ ರಷ್ಯಾದ ಕರೆನ್ ಕಶನೋವ್ ಮೊದಲ ಬಾರಿಗೆ ಆಸ್ಟ್ರೇಲಿಯನ್ ಓಪನ್ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಕೋರ್ಡ ಪಂದ್ಯ ತ್ಯಜಿಸುವಾಗ ಕಶನೋವ್ 7-6 (7-5), 6-3, 3-0 ಮುನ್ನಡೆಯಲ್ಲಿದ್ದರು. ಬಹುತೇಕ ನೇರ ಸೆಟ್ ಗೆಲುವು ಕಾಣುವ ಎಲ್ಲ ಸಾಧ್ಯತೆ ಇತ್ತು.
22 ವರ್ಷದ ಸೆಬಾಸ್ಟಿಯನ್ ಕೋರ್ಡ ಫೋರ್‌ಹ್ಯಾಂಡ್ ಸರ್ವೀಸ್ ರಿಟರ್ನ್ ಮಾಡುವ ವೇಳೆ ಬಲಗೈ ಮಣಿಗಂಟಿನ ನೋವಿಗೆ ಸಿಲುಕಿದರು. ಟ್ರೇನರ್‌ನನ್ನು ಕರೆದರೂ ಪರಿಸ್ಥಿತಿ ಸುಧಾರಿಸಲಿಲ್ಲ. ಅಂತಿಮವಾಗಿ ಪಂದ್ಯವನ್ನು ಬಿಟ್ಟುಕೊಡುವುದು ಅನಿ ವಾರ್ಯವಾಯಿತು. ಸೆಬಾಸ್ಟಿಯನ್ ಕೋರ್ಡ ಅವರ ತಂದೆ ಪೀಟರ್ ಕೋರ್ಡ 1998ರ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಎಂಬುದು ಉಲ್ಲೇಖನೀಯ.
8ನೇ ಶ್ರೇಯಾಂಕದ ಕರೆನ್ ಕಶನೋವ್ ಅವರಿಗೆ ಇದು ಸತತ 2ನೇ ಗ್ರ್ಯಾನ್‌ಸ್ಲಾಮ್ ಸೆಮಿಫೈನಲ್ ಆಗಿದೆ. 2022ರ ಯುಎಸ್ ಓಪನ್ ಕೂಟದಲ್ಲೂ ಅವರು ಉಪಾಂತ್ಯ ತಲುಪಿದ್ದರು.
ಇನ್ನೊಂದು ಕ್ವಾರ್ಟರ್ ಫೈನಲ್‌ನಲ್ಲಿ ಗ್ರೀಕ್‌ನ ಸ್ಟೆಫನಸ್ ಸಿಸಿಪಸ್ ಗೆಲುವಿನ ಬಾವುಟ ಹಾರಿಸಿದರು. ಇದೇ ಮೊದಲ ಸಲ ಗ್ರ್ಯಾನ್‌ಸ್ಲಾಮ್ ಕ್ವಾರ್ಟರ್ ಫೈನಲ್‌ಗೆ ಏರಿಬಂದಿದ್ದ ಜೆಕ್ ಆಟಗಾರ ಜಿರಿ ಲೆಹೆಕ ವಿರುದ್ಧ 6-3, 7-6 (7-2), 6-4 ಅಂತರದ ಗೆಲುವು ಸಾಧಿಸಿದರು.
ರಿಬಾಕಿನಾ ಉಪಾಂತ್ಯಕ್ಕೆ ವನಿತಾ ವಿಭಾಗದಿಂದ ಸೆಮಿಫೈನಲ್ ಪ್ರವೇಶಿಸಿದ ಆಟಗಾರ್ತಿ ಎಂಬ ಹೆಗ್ಗಳಿಕೆ ವಿಂಬಲ್ಡನ್ ಚಾಂಪಿಯನ್ ಎಲೆನಾ ರಿಬಾಕಿನಾ ಅವರದ್ದಾಯಿತು. ರಿಬಾಕಿನಾ 2017ರ ಫ್ರೆಂಚ್ ಓಪನ್ ಚಾಂಪಿಯನ್ ಜೆಲೆನಾ ಒಸ್ಟಾಪೆಂಕೊ ವಿರುದ್ಧ 6-2, 6-4 ನೇರ ಸೆಟ್‌ಗಳ ಗೆಲುವು ದಾಖಲಿಸಿದರು. ರಿಬಾಕಿನಾ ಕಾಣುತ್ತಿರುವ ಮೊದಲ ಆಸ್ಟ್ರೇಲಿಯನ್ ಓಪನ್ ಸೆಮಿಫೈನಲ್ ಇದಾಗಿದೆ. ಇವರ ಎದುರಾಳಿ ಬೆಲರೂಸ್‌ನ ವಿಕ್ಟೋರಿಯಾ ಅಜರೆಂಕಾ. ಅವರು 6-4, 6-1ರಿಂದ ಅಮೆರಿಕದ ಜೆಸ್ಸಿಕಾ ಪೆಗುಲಾ ಓಟಕ್ಕೆ ತೆರೆ ಎಳೆದರು.
2012 ಮತ್ತು 2013ರ ಆಸ್ಟ್ರೇಲಿಯನ್ ಓಪನ್ ಚಾಂಪಿ ಯನ್ ಆಗಿರುವ ಅಜರೆಂಕಾ ಅನಂತರ “ಮೆಲ್ಬರ್ನ್ ಪಾರ್ಕ್’ನಲ್ಲಿ ಸೆಮಿಫೈನಲ್ ಪ್ರವೇಶಿಸುತ್ತಿರುವುದು ಇದೇ ಮೊದಲು. ಅಮ್ಮನೂ ಆಗಿರುವ ಅಜರೆಂಕಾಗೆ ಈಗ 33 ವರ್ಷ ವಯಸ್ಸು.