Advertisement
ಏನಿದು ಐಪಿಒ?: ಉಳಿದ ಎಲ್ಲ ವಿಚಾರಗಳನ್ನು ಚರ್ಚೆ ಮಾಡುವುದಕ್ಕೆ ಮೊದಲು ಐಪಿಒ ಎಂದರೆ ಏನು ಎನ್ನುವು ದನ್ನು ತಿಳಿದುಕೊಳ್ಳಬೇಕಾಗಿದೆ. ಇನಿಶಿಯಲ್ ಪಬ್ಲಿಕ್ ಆಫರಿಂಗ್‌ನ ಸಂಕ್ಷಿಪ್ತ ಪದವೇ ಐಪಿಒ. ಅಂದರೆ ಖಾಸಗಿ ಕಂಪೆನಿ ತನ್ನ ಷೇರುಗಳನ್ನು ಸ್ಟಾಕ್‌ಎಕ್ಸ್‌ಚೇಂಜ್ ಮೂಲಕ ಸಾರ್ವಜನಿಕರ ಖರೀದಿಗೆ ಬಿಡುಗಡೆ ಮಾಡುವುದಕ್ಕೆ ಐಪಿಒ ಎನ್ನುತ್ತಾರೆ. ಸುಲಭವಾಗಿ ಹೇಳುವುದಿದ್ದರೆ ಸಾರ್ವ ಜನಿಕರಿಗೆ ಷೇರು ಖರೀದಿಗೆ ಅವಕಾಶ ಮಾಡಿಕೊಟ್ಟು ಬಂಡವಾಳ ಸಂಗ್ರಹ ಮಾಡಿಕೊಳ್ಳುವುದು. ಮೊದಲು ಸಾರ್ವಜನಿಕರಿಂದ ಬಂಡವಾಳ ಸಂಗ್ರಹ ಮಾಡಿದ ಬಳಿಕ ಅದು ಬಾಂಬೆ ಷೇರುಪೇಟೆಯಲ್ಲಿ ಲಿಸ್ಟಿಂಗ್ ಆಗುತ್ತದೆ.
Related Articles
Advertisement
ಜಗತ್ತಿನಲ್ಲಿ ಟ್ರೆಂಡ್ :
ಅರ್ನೆಸ್ಟ್ ಆ್ಯಂಡ್ ಯಂಗ್ (ಇವೈ) ವರದಿ ಪ್ರಕಾರ ಪ್ರಸಕ್ತ ವಿತ್ತೀಯ ವರ್ಷದ ಮೂರನೇ ತ್ತೈಮಾಸಿಕದಲ್ಲಿ ಐಪಿಒಗಳ ಪ್ರಭಾವ ಹೆಚ್ಚಾಗಿಯೇ ಇದೆ. ಐರೋಪ್ಯ ಒಕ್ಕೂಟ, ಮಧ್ಯ ಏಷ್ಯಾ, ಭಾರತ, ಆಫ್ರಿಕಾ (ಇಎಂಇಐಎ)ಗಳ ಅರ್ಥ ವ್ಯವಸ್ಥೆಯಲ್ಲಿ ಅದು ಪ್ರಧಾನ ಪಾತ್ರ ವಹಿಸಲಿದೆ.
ಏಕಾಏಕಿ ಬೂಮ್ ಏಕೆ? :
ಬಡ್ಡಿದರ ಇಳಿಕೆ: ಎರಡು ವರ್ಷಗಳ ಹಿಂದಿನ ವರೆಗೆ ಹೂಡಿಕೆ ಎಂದರೆ ಜೀವ ವಿಮೆ, ಚಿನ್ನ, ಅಂಚೆ ಕಚೇರಿಯ ಉಳಿತಾಯ ಯೋಜನೆ, ಷೇರುಪೇಟೆ ವಗೈರೆ. ಈಗ ಮಾತೆತ್ತಿದರೆ ಹೊಸ ಹೂಡಿಕೆಗಳ ವಿಚಾರ ಆಕರ್ಷಿಸುತ್ತದೆ. ಬ್ಯಾಂಕ್‌ಗಳಲ್ಲಿ ಠೇವಣಿಗಳ ಮೇಲಿನ ಬಡ್ಡಿ ಇಳಿಕೆಯಾ ಗಿದೆ. ಜತೆಗೆ ಇತರ ಸಾಂಪ್ರದಾಯಿಕ ಹೂಡಿಕೆಗಳಿಗೆ ಅವಕಾಶಗಳಿದ್ದರೂ ವಿವಿಧ ಕಾರಣಗಳಿಂದ ಅಲ್ಲಿ ಹೂಡಿಕೆದಾರರಿಗೆ ನೀಡಲಾಗುತ್ತಿದ್ದ ಬಡ್ಡಿಯ ಪ್ರಮಾಣ ಇಳಿಕೆಯಾಗಿದೆ. ಹೀಗಾಗಿ ಸಾರ್ವಜನಿಕರಲ್ಲಿ ಹೂಡಿಕೆಗೆ ಒಂದು ಹೊಸ ಅವಕಾಶ ಸೃಷ್ಟಿಯಾಗಿದೆ ಎಂದು ಹೇಳಬಹುದು.
ಬೇಕಾಗಿದೆ ಬಂಡವಾಳ: ದೇಶದಲ್ಲಿ ಸದ್ಯ ಇರುವ ಉತ್ತಮ ಅರ್ಥವ್ಯವಸ್ಥೆ ವಿದೇಶಿ ಹೂಡಿಕೆದಾರರಿಗೂ ಆಕರ್ಷಣೆಯಾಗಿದೆ. ಸಾಧ್ಯ ವಾದಷ್ಟು ಅದರ ಸದುಪಯೋಗಪಡೆಯಲು ಮುಂದಾಗಿದ್ದಾರೆ. ಜತೆಗೆ ಕೊರೊನಾ ತೀವ್ರತೆಯಿಂದ ಚೇತರಿಸಿಕೊಳ್ಳುತ್ತಿರುವ ಕಂಪೆನಿಗಳಿಗೆ ತಮ್ಮ ವಹಿವಾಟು ವಿಸ್ತರಿಸಿಕೊಳ್ಳಲು ಕೋಟ್ಯಂತರ ರೂ. ಬಂಡವಾಳ ಅಗತ್ಯ ಬೇಕು. ಹೀಗಾಗಿ, ದೇಶದಲ್ಲಿರುವ ಕಂಪೆನಿಗಳು ಷೇರುಗಳ ಮೂಲಕ, ಖಾಸಗಿ ಹೂಡಿಕೆಗಳ ಮೂಲಕ ಬಂಡವಾಳ ಸಂಗ್ರಹಿಸಲು ಮುಂದಾಗಿವೆ.
ಚೀನ ಕಾರಣ: ಮಾರುಕಟ್ಟೆ ಸಂಶೋಧನ ಸಂಸ್ಥೆ ಕೆಪಿಎಂಜಿ ಇಂಡಿಯಾದ ಕಾರ್ಪೋರೆಟ್ ಫೈನಾನ್ಸ್ ವಿಭಾಗದ ಮುಖ್ಯಸ್ಥ ಶ್ರೀನಿವಾಸ ಬಾಲಸುಬ್ರಹ್ಮಣ್ಯನ್ ಪ್ರಕಾರ ಚೀನದಲ್ಲಿ ಅಲಿಬಾಬಾ ಕಂಪೆನಿಯ ಮುಖ್ಯಸ್ಥ ಜಾಕ್‌ಮಾ ಸೇರಿದಂತೆ ಹಲವು ಸಿರಿವಂತರು ಹೊಂದಿದ ಕಂಪೆನಿಗಳ ಮೇಲೆ ಕಠಿನ ಕ್ರಮ ಕೈಗೊಳ್ಳಲಾಗಿದೆ. ಹೀಗಾಗಿ ಆ ದೇಶದಲ್ಲಿ ಹೂಡಿಕೆ ಮಾಡಲು ಉದ್ದೇಶಿಸಿದ್ದವರು ಮತ್ತು ಸದ್ಯ ಅಲ್ಲಿ ಕಾರ್ಯ ವೆಸಗುತ್ತಿರುವ ಕಂಪೆನಿಗಳು ಭಾರತದತ್ತ ದೃಷ್ಟಿ ಹರಿಸಿವೆ.
ಹೂಡಿಕೆ ಹೇಗೆ? :
ಐಪಿಒದಲ್ಲಿ ಹೂಡಿಕೆ ಮಾಡಲು ಬಯಸುವವರು ಮೊದಲು ಡಿ-ಮ್ಯಾಟ್ ಅಕೌಂಟ್ ಹೊಂದಿರಬೇಕು. ಅದನ್ನು ಹೊಂದಲು ಝೆರೋದಾ, ಎಸ್‌ಬಿಐ ಸೇರಿದಂತೆ ಹಲವು ಬ್ಯಾಂಕ್‌ಗಳ ಮೂಲಕ ಆನ್‌ಲೈನ್ ಮೂಲಕ ಖಾತೆ ತೆರೆಯಬೇಕು. ಅದಕ್ಕಾಗಿ ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್, ವಿಳಾಸ ದೃಢೀಕರಣ ದಾಖಲೆಗಳು ಮತ್ತು ಖಾತೆ ತೆರೆಯಲು ಬೇಕಾಗುವ ದಾಖಲೆಗಳನ್ನು ನೀಡಬೇಕಾಗುತ್ತದೆ.
ಖಾತೆ ತೆರೆದಾದ ಬಳಿಕ ಹೂಡಿಕೆದಾರನು ನಮೂದಿಸಿರುವ ಬ್ಯಾಂಕ್ ಖಾತೆಯ ಮೂಲಕ ಐಪಿಒ ಖರೀದಿಗೆ ಅರ್ಜಿ ಸಲ್ಲಿಸಬೇಕು. ಜತೆಗೆ ಆತ ಖಾತೆ ಹೊಂದಿರುವ ಬ್ಯಾಂಕ್‌ಗೆ ಐಪಿಒಗೆ ನಿಗದಿಪಡಿಸಲಾಗಿರುವ ಮೊತ್ತವನ್ನು ಪಡೆಯಲು (ಆ್ಯಪ್ಲಿಕೇಶನ್ ಸಪೋರ್ಟೆಡ್ ಬೈ ಬ್ಲಾಕ್ಡ್ ಅಕೌಂಟ್-ಎಎಸ್‌ಬಿಎ) ಅನುಮತಿ ನೀಡಬೇಕಾಗುತ್ತದೆ.
ನಿಗದಿತ ಮಿತಿಯ ಮೊತ್ತ ಖರೀದಿ ಮಾಡಬೇಕು ಎಂದು ಆನ್‌ಲೈನ್‌ನಲ್ಲಿಯೇ ಸೂಚಿಸಿರುವುದಿಂದ ಕನಿಷ್ಠ ಮಿತಿ ಎಷ್ಟು ಎಂದು ಆಯ್ಕೆ ಮಾಡಲು ಕಷ್ಟವಾಗುವುದಿಲ್ಲ.
ಮಾರುಕಟ್ಟೆಯಲ್ಲಿ ಐಪಿಒ ಬಿಡುಗಡೆ ಮಾಡುವ ಕಂಪೆನಿಯ ದಾಖಲೆಗಳನ್ನು ಎಚ್ಚರಿಕೆಯಿಂದ ಓದಬೇಕು.
ಕಂಪೆನಿಯು ಸಾರ್ವಜನಿಕರಿಂದ ಸಂಗ್ರಹಿ ಸಿದ ಮೊತ್ತವನ್ನು ಯಾವ ರೀತಿ ಬಳಕೆ ಮಾಡುತ್ತದೆ ಎಂಬುದು ಗಮನದಲ್ಲಿರಲಿ.
ಹೂಡಿಕೆ ಮಾಡಿದ ಸಂಸ್ಥೆಯ ಹಿಂದಿನ ವಿತ್ತೀಯ ಸಾಧನೆಗಳನ್ನು ಗಮನಿಸಿ.
ಕಂಪೆನಿಗಳು ಹೇಗೆ ಸಿದ್ಧಗೊಳ್ಳುತ್ತವೆ? :
ಇದೊಂದು ದೀರ್ಘ ಪ್ರಕ್ರಿಯೆ. ಕಂಪೆನಿಗಳು ತಾವು ಹೊಂದಿದ ಆಸ್ತಿ, ಮಾರುಕಟ್ಟೆಯಲ್ಲಿ ಹೊಂದಿರುವ ಬ್ರಾಂಡ್ ವ್ಯಾಲ್ಯೂ, ಯಾವ ಕಾರಣಕ್ಕಾಗಿ ಐಪಿಒ ಹೊರಡಿಸಲು ನಿರ್ಧರಿಸಿದ್ದು ಎಂಬಿತ್ಯಾದಿ ವಿವರಗಳನ್ನು ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್‌ಚೇಂಜ್ ಬೋರ್ಡ್ (ಸೆಬಿ)ಗೆ ನೀಡಬೇಕಾಗುತ್ತದೆ. ಅವುಗಳನ್ನು ಪರಿಶೀಲಿಸಿದ ಸೆಬಿ, ಪ್ರಕ್ರಿಯೆಗೆ ಅನುಮೋದನೆ ನೀಡುತ್ತದೆ.
75 ಸಾವಿರ ಕೋಟಿ ರೂ.: ಮುಂದಿನ 6 ತಿಂಗಳಲ್ಲಿ ದೇಶದ ಕಂಪೆನಿಗಳು ಐಪಿಒ ಮೂಲಕ ಸಂಗ್ರಹಿಸಲಿರುವ ಅಂದಾಜು ಮೊತ್ತ.
80,200 ಕೋಟಿ ರೂ. : ಇದುವರೆಗೆ ದೇಶದ ಕಂಪೆನಿಗಳು ಸಂಗ್ರಹಿಸಿರುವ ಮೊತ್ತ
78 : ಇದುವರೆಗೆ ಬಿಡುಗಡೆ ಯಾಗಿರುವ ಐಪಿಒಗಳು (ಜನವರಿಯಿಂದ ಅಕ್ಟೋಬರ್)
40: ಮಾರುಕಟ್ಟೆಗೆ ಬಿಡುಗಡೆಯಾಗಲಿರುವ ಐಪಿಒಗಳು
ಸದ್ಯ ಬಿಡುಗಡೆಯಾಗಿರುವ ಪ್ರಮಖ ಐಪಿಒಗಳು :
ಕಂಪೆನಿ ಬಂಡವಾಳ (ಕೋಟಿ ರೂ.ಗಳಲ್ಲಿ)
ಒನ್ 97 ಕಮ್ಯೂನಿಕೇಷನ್ಸ್ (ಪೇಟಿಎಂ) 18,300.00
ಝೊಮ್ಯಾಟೋ 9,375.00
ಡೆಕ್ಜಿವರಿ 7,460.00
ಎಪಿಐ ಹೋಲ್ಡಿಂಗ್ಸ್
(ಫಾರ್ಮ್ ಈಸಿ) 6,250.00
ಪಿ.ಬಿ.ಫಿನ್‌ಟೆಕ್
(ಪಾಲಿಸಿ ಬಜಾರ್) 5,700.00
ಎಫ್ಎಸ್‌ಎನ್ ಇ-ಕಾಮರ್ಸ್ ವೆಂಚರ್ಸ್ (ನೈಕಾ) 5,352.00
ಡ್ರೂಮ್ ಟೆಕ್ನಾಲಜಿ 3,000.00
ಕಾರ್ ಟ್ರೇಡ್ ಟೆಕ್ 2,998.50
ಒನ್ ಮೊಬಿಕ್ವಿಕ್ (ಮೊಬಿ ಕ್ವಿಕ್) 1,900.00
ಲಿ ಟ್ರವೆನ್ಯೂಸ್ (ಲೆಕ್ಸಿಗೋ) 1,600.00
ಈಸಿ ಟ್ರಿಪ್ ಪ್ಲಾನರ್ಸ್
(ಈಸ್ ಮೈ ಟ್ರಿಪ್) 510.00
ಎಲ್‌ಐಸಿಗೆ ಕಾಯುತ್ತಿದ್ದಾರೆ :
ಸರಕಾರಿ ಸ್ವಾಮ್ಯದ ಜೀವ ವಿಮಾ ನಿಗಮ (ಎಲ್‌ಐಸಿ) ಐಪಿಒ ಮುಂದಿನ ವಿತ್ತೀಯ ವರ್ಷದಲ್ಲಿ ಬಿಡುಗಡೆಯಾಗಲಿದೆ. ದೇಶದ ಐಪಿಒಗಳ ಐಪಿಒ ಎಂದು ಈಗಾಗಲೇ ವಿತ್ತೀಯ ಕ್ಷೇತ್ರದಲ್ಲಿ ಬಣ್ಣನೆಗೊಂಡಿರುವ ಎಲ್‌ಐಸಿಯ ಮೌಲ್ಯ 7 ಸಾವಿರ ಕೋಟಿ ರೂ.ಗಳಿಂದ 8 ಸಾವಿರ ಕೋಟಿ ರೂ. ವರೆಗೆ ಇರಬಹುದೆಂದು ಅಂದಾಜಿಸ ಲಾಗುತ್ತಿದೆ. ಸರಕಾರಿ ವಿಮಾ ಕಂಪೆನಿಯ ಶೇ.5-ಶೇ.10ರಷ್ಟು ಷೇರುಗಳ ಮಾರಾಟ ಮಾಡುವ ಬಗ್ಗೆ ಪ್ರಕ್ರಿಯೆಗಳು ವಿವಿಧ ಹಂತಗಳಲ್ಲಿವೆ. ಸದ್ಯ ದೇಶದ ಜೀವ ವಿಮೆ ಮಾರುಕಟ್ಟೆಯ ಶೇ.60ರಷ್ಟರಲ್ಲಿ ಎಲ್‌ಐಸಿ ಹಿಡಿತವೇ ಇದೆ.