Advertisement

ತಂದೆಯ ತ್ಯಾಗದ ಫ‌ಲ; ಟ್ರೀಸಾ ಈಗ ಜಾಲಿ: ಮಗಳ ಸಾಧನೆಗಾಗಿ ಶಿಕ್ಷಣ ವೃತ್ತಿ ತೊರೆದ ತಂದೆ

09:00 PM Aug 11, 2022 | Team Udayavani |

ಕಣ್ಣೂರು: ಬರ್ಮಿಂಗ್‌ಹ್ಯಾಮ್‌ ಕಾಮನ್ವೆಲ್ತ್‌ ಗೇಮ್ಸ್‌ ಬ್ಯಾಡ್ಮಿಂಟನ್‌ ಸ್ಪರ್ಧೆಯಲ್ಲಿ ಭಾರತೀಯರು ಅಮೋಘ ನಿರ್ವಹಣೆ ನೀಡಿರುವುದು ಈಗ ಇತಿಹಾಸ. ಪಿ.ವಿ. ಸಿಂಧು, ಲಕ್ಷ್ಯ ಸೇನ್‌ ಚಿನ್ನ ಗೆದ್ದು ಸಂಭ್ರಮಿಸಿದರೆ ಇನ್ನೂ ಖ್ಯಾತಿಗೆ ಬರದ ಕೇರಳದ ತಾರೆ ಟ್ರೀಸಾ ಜಾಲಿ ಡಬಲ್ಸ್‌ ಮತ್ತು ಮಿಕ್ಸೆಡ್‌ ತಂಡ ವಿಭಾಗದಲ್ಲಿ ಪದಕ ಗೆದ್ದ ಸಾಧನೆ ಮಾಡಿದ್ದಾರೆ. ಆದರೆ ಜಾಲಿ ಅವರ ಹಾದಿ “ಜಾಲಿ’ಯಿಂದೇನೂ ಕೂಡಿರಲಿಲ್ಲ.

Advertisement

ತಂದೆಯೇ ಮೊದಲ ಗುರು :

ಟ್ರೀಸಾ ಅವರ ಬ್ಯಾಡ್ಮಿಂಟನ್‌ ಪ್ರಯಾಣ ಕಣ್ಣೂರಿನ ಪುಲಿಂಗೋಮ್‌ ಎಂಬ ಹಳ್ಳಿಯೊಂದರ ಮನೆಯ ಅಂಗಳದಿಂದ ಪ್ರಾರಂಭಗೊಳ್ಳುತ್ತದೆ. ಅಲ್ಲಿ ಅವರಿಗೆ ತಂದೆ ಜಾಲಿ ಮ್ಯಾಥ್ಯೂ ಅವರೇ ಮೊದಲ ತರಬೇತುದಾರ ಹಾಗೂ ಗುರು ಆಗಿದ್ದರು. ಟ್ರೀಸಾ ಅವರಿಗೆ ತರಬೇತಿ ನೀಡಲು ಮತ್ತು ಮಗಳ ಜತೆ ವಿವಿಧ ಕೂಟಗಳಿಗೆ ಪ್ರಯಾಣಿಸುವ ಉದ್ದೇಶದಿಂದ ಅವರು ಶಾಲೆಯೊಂದರ ದೈಹಿಕ ಶಿಕ್ಷಣ ಶಿಕ್ಷಕ ವೃತ್ತಿಯನ್ನೂ ತೊರೆದರು.

11 ವರ್ಷದೊಳಗಿನ ಜಿಲ್ಲಾ ವಿಭಾಗದಲ್ಲಿ ಟ್ರೀಸಾ ಭಾಗವಹಿಸಲು ಆರಂಭಿಸಿದಾಗ ಅವರ ಗ್ರಾಮದಲ್ಲಿ ಬ್ಯಾಡ್ಮಿಂಟನ್‌ ಕೋರ್ಟ್‌ ಸೇರಿದಂತೆ ಯಾವುದೇ ಸೌಲಭ್ಯ ಇರಲಿಲ್ಲ. ಮುಂದಿನ ಕೆಲವು ವರ್ಷಗಳಲ್ಲಿ ಅವರು ರಾಜ್ಯ ಮತ್ತು ರಾಷ್ಟ್ರೀಯ ಕೂಟಗಳಲ್ಲಿ ಪದಕಗಳನ್ನು ಗೆದ್ದರು. ಆದರೆ ಪ್ರಮುಖ ಕೂಟಗಳಲ್ಲಿ ಗೆಲ್ಲಲು, ಅಭ್ಯಾಸ ಮಾಡಲು ಆಕೆಗೆ ಅಧುನಿಕ ಸೌಲಭ್ಯ ಬೇಕಾಗಿತ್ತು.

“ಬ್ಯಾಡ್ಮಿಂಟನ್‌ ದುಬಾರಿ ಕ್ರೀಡೆಯಾಗಿರುವುದರಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಬೇಕಾಯಿತು. ಟ್ರೀಸಾ ಕ್ರೀಡಾಕ್ಷೇತ್ರದಲ್ಲಿ ಉನ್ನತ ಸಾಧನೆ ಮಾಡಲು ಅವರ ಶಿಕ್ಷಕರು ಬಹಳಷ್ಟು ನೆರವು ನೀಡಿದರು. ಅದಕ್ಕಾಗಿ ಅವರಿಗೆ ಕೃತಜ್ಞತೆ ಸಲ್ಲಿಸುತ್ತಾರೆ ಜಾಲಿ ಮ್ಯಾಥ್ಯೂ.

Advertisement

ಅಂಗಳದಲ್ಲಿಯೇ ಕೋರ್ಟ್‌ :

“ಮಗಳ ಅಭ್ಯಾಸಕ್ಕಾಗಿ ನಮ್ಮ ಮನೆಯ ಅಂಗಳದಲ್ಲಿ ಒಳಾಂಗಣ ಕೋರ್ಟ್‌ ನಿರ್ಮಿಸಲು ನಿರ್ಧರಿಸಿದೆವು. ಆರ್ಥಿಕ ಸಮಸ್ಯೆ ಎದುರಾದಾಗ ಮನೆಯಲ್ಲಿದ್ದ ಚಿನ್ನ ಮಾರಿದೆ. ಸ್ನೇಹಿತರ ಬಳಿ ಸಾಲ ಮಾಡಿ ಕೋರ್ಟ್‌ ನಿರ್ಮಿಸಿದೆ. ಇದು ಅವರ ಅಭ್ಯಾಸಕ್ಕೆ ಹೆಚ್ಚಿನ ಬಲ ನೀಡಿತು. ಈ ವೇಳೆ ಆಕೆಗೆ ಯಾವುದೇ ಪ್ರಾಯೋಜಕರು ಕೂಡ ಇರಲಿಲ್ಲ’ ಎಂದು ಮ್ಯಾಥ್ಯೂ ಹೇಳಿದರು.

“ಅವಳ ಆಟದ ಪ್ರಗತಿಗಾಗಿ ಸರ್ವಸ್ವವನ್ನೂ ತ್ಯಾಗ ಮಾಡಿದ್ದೇನೆ. ಇದರ ಜತೆ ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಜ್ಞಾನ ವಿಭಾಗದ ಮುಖ್ಯಸ್ಥ ಅನಿಲ್‌ ರಾಮಚಂದ್ರನ್‌ ಅವರ ಪ್ರೋತ್ಸಾಹದಿಂದ ಆಕೆಯ ಆಟದಲ್ಲಿ ಬಹಳಷ್ಟು ಪ್ರಗತಿ ಕಾಣುವಂತಾಯಿತು. ಅವರು ಉಚಿತವಾಗಿಯೇ ತರಬೇತಿ ಮತ್ತು ಸೌಲಭ್ಯಗಳನ್ನು ನೀಡಿದರು’ ಎಂದರು.

ಟ್ರೀಸಾ ಅವರ ತಾಯಿ ಡೈಸಿ ಜೋಸೆಫ್ ಅಧ್ಯಾಪಕಿಯಾಗಿದ್ದಾರೆ. ಓರ್ವ ಸಹೋದರಿಯೂ ಇದ್ದಾರೆ.

ಎರಡು ವರ್ಷಗಳ ಹಿಂದೆ ಟ್ರೀಸಾ ಜಾಲಿ ಹೈದರಾಬಾದ್‌ನ “ಪುಲ್ಲೇಲ ಗೋಪಿಚಂದ್‌ ಬ್ಯಾಡ್ಮಿಂಟನ್‌ ಅಕಾಡೆಮಿ’ ಸೇರಿಕೊಂಡರು.ಅಲ್ಲಿ ತಮ್ಮ ಆಟವನ್ನು ಸಿಂಗಲ್ಸ್‌ ಮತ್ತು ಡಬಲ್ಸ್‌ಗೆ ಬದಲಾಯಿಸಿಕೊಂಡರು. ಇದೀಗ ಗೇಮ್ಸ್‌ ಸಾಧನೆಯಿಂದಾಗಿ ಟ್ರೀಸಾ ಮೇಲೆ ಹೆಚ್ಚಿನ ಭರವಸೆ ಮೂಡಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next