ಯಾದಗಿರಿ: ಬಳ್ಳಾರಿಯಲ್ಲಿ ಕೋವಿಡ್ ಸೋಂಕಿನಿಂದ ಮೃತಪಟ್ಟವರ ಅಂತ್ಯಕ್ರಿಯೆಯನ್ನು ಅಮಾನವೀಯವಾಗಿ ನಡೆಸಿದ ಘಟನೆ ಮಾಸುವಷ್ಟರಲ್ಲೇ ಯಾದಗಿರಿಯಲ್ಲೊಂದು ಅಂತದ್ದೇ ಘಟನೆ ನಡೆದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಯಾದಗಿರಿ ಜಿಲ್ಲೆಯ ಹೋನಗೆರಾ ತಾಲೂಕಿನ 45 ವರ್ಷದ ವ್ಯಕ್ತಿ ರಿಮ್ಸ್ ಆಸ್ಪತ್ರೆಗೆ ಸಾಗಿಸುವ ಮಧ್ಯದಲ್ಲೇ ಮೃತಪಟ್ಟಿದ್ದರು. ಈ ವ್ಯಕ್ತಿಯ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಿದ್ದ ಸಂದರ್ಭದಲ್ಲಿ ಅವರಿಗೆ ಕೋವಿಡ್ 19 ಸೋಂಕು ಇರುವುದು ದೃಢಪಟ್ಟಿತ್ತು.
ರಾಯಚೂರು ಜಿಲ್ಲೆಯ ಸಿರವಾರದಲ್ಲಿ ಭಾನುವಾರ ಮಗಳ ಮದುವೆಗೆ ತೆರಳಿದ್ದ ಸಂದರ್ಭದಲ್ಲಿ ಈ ವ್ಯಕ್ತಿಯಲ್ಲಿ ತೀವ್ರ ಉಸಿರಾಟದ ತೊಂದರೆ ಕಂಡುಬಂದಿತ್ತು. ಹಾಗಾಗಿ ಇವರನ್ನು ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲಿಸಲೆಂದು ಕರೆದೊಯ್ಯುವ ಮಾರ್ಗ ಮಧ್ಯದಲ್ಲೇ ವ್ಯಕ್ತಿ ಮೃತಪಟ್ಟಿದ್ದರು.
ವ್ಯಕ್ತಿಯ ಮೃತದೇಹವನ್ನು ಸ್ವಗ್ರಾಮ ಹೊನಗೆರದ ಮೃತನ ಸಹೋದರನ ಜಮೀನಿನಲ್ಲಿ ಅಂತ್ಯಸಂಸ್ಕಾರ ಮಾಡಲಾಗಿದೆ. ಅಂತ್ಯಕ್ರಿಯೆ ವೇಳೆ ಪಿಪಿಇ ಕಿಟ್ ಧರಿಸಿರುವ ಇಬ್ಬರು ಮೃತ ದೇಹವನ್ನು ಎಳೆದುಕೊಂಡು ಹೋಗುತ್ತಾ ಜಮೀನಿನಲ್ಲಿ ಅಂತ್ಯಸಂಸ್ಕಾರ ನಡೆಸುತ್ತಿರುವ ವಿಡಿಯೋ ಇದೀಗ ವೈರಲ್ ಆಗಿದೆ.
ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ದೇಹವನ್ನು ಪ್ರಾಣಿಗಿಂತಲೂ ಕಡೆಯಾಗಿ, ಉದ್ದ ಕೋಲಿಗೆ ಮೃತದೇಹ ಇದ್ದ ಚೀಲವನ್ನು ಸಿಕ್ಕಿಸಿ ಎಳೆದ್ಯೊಯ್ದು ತೆಗ್ಗಿನಲ್ಲಿ ಬಿಸಾಡಿರುವ ಘಟನೆ ನಡೆದಿದ್ದು ಇದು ಜಿಲ್ಲೆಯ ಜನರಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.