Advertisement

ಶಾಲೆಗೆ ಬೀಗ ಜಡಿದ ಇಂಗಳಗೇರಿ ಗ್ರಾಮಸ್ಥರು

02:34 PM Jan 14, 2022 | Shwetha M |

ಮುದ್ದೇಬಿಹಾಳ: ತಾಲೂಕಿನ ಇಂಗಳಗೇರಿ ಗ್ರಾಮದಲ್ಲಿರುವ ಸರ್ಕಾರಿ ಪ್ರೌಢಶಾಲೆಯ ಪ್ರಥಮ ದರ್ಜೆ ಸಹಾಯಕಿ ರಾಜೇಶ್ವರಿ ಗೌರ ಅನಧಿಕೃತವಾಗಿ ಗೈರು ಉಳಿದು ಶಾಲೆಯ ಕಚೇರಿ ಕೆಲಸ ಕಾರ್ಯಗಳಿಗೆ ತೊಂದರೆ ಆಗುತ್ತಿರುವುದನ್ನು ಆಕ್ಷೇಪಿಸಿ ಗ್ರಾಮಸ್ಥರು ಗುರುವಾರ ವಿದ್ಯಾರ್ಥಿಗಳು, ಶಿಕ್ಷಕರನ್ನು ಹೊರಗೆ ಹಾಕಿ ಕಲಿಕಾ ಚಟುವಟಿಕೆ ಸ್ಥಗಿತಗೊಳಿಸಿದ್ದೂ ಅಲ್ಲದೆ ಮುಖ್ಯಾಧ್ಯಾಪಕರ ಕೊಠಡಿಗೆ ಬೀಗ ಜಡಿದು ಪ್ರತಿಭಟಿಸಿದರು.

Advertisement

ಇದರಿಂದಾಗಿ ಶಿಕ್ಷಕರು ಮಕ್ಕಳ ಸಮೇತ ಶಾಲೆಯ ಆವರಣದಲ್ಲಿದ್ದ ಮರವೊಂದರ ಕೆಳಗೆ ಕಲಿಕಾ ಚಟುವಟಿಕೆ ನಡೆಸುವ ಅನಿವಾರ್ಯತೆಗೆ ಈಡಾಗಬೇಕಾಯಿತು. 4 ವರ್ಷಗಳ ಹಿಂದೆ ರಾಜೇಶ್ವರಿ ಇದೇ ಶಾಲೆಯಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದರು. ನಂತರ ಕೆಲವೇ ದಿನಗಳಲ್ಲಿ ವಿಜಯಪುರದ ಗ್ರಾಮೀಣ ಬಿಇಒ ಕಚೇರಿಗೆ ಡೆಪ್ಯೂಟೇಶನ್‌ ಮೇಲೆ ತೆರಳಿದರು. ಅಲ್ಲಿಂದ ಇಲ್ಲೀವರೆಗೂ ಅವರು ಇಲ್ಲಿ ಸೇವೆಗೆ ಬಂದಿಲ್ಲ. ಇದರಿಂದ ಶಾಲೆಯ ಕಚೇರಿ ಕೆಲಸ ಕಾರ್ಯಗಳಿಗೆ ಸಾಕಷ್ಟು ತೊಂದರೆ ಆಗಿದ್ದು ಶಿಕ್ಷಕರೇ ಕಚೇರಿ ಕೆಲಸ ಮಾಡುವ ಅನಿವಾರ್ಯತೆ ಬಂದಿದೆ. ಮೇಲಾಗಿ ರಾಜೇಶ್ವರಿ ಅವರು ಇಲ್ಲೇ ಸಂಬಳ ಪಡೆಯುತ್ತಿರುವುದರಿಂದ ಇಲ್ಲಿಗೆ ಬೇರೊಬ್ಬರನ್ನು ತೆಗೆದುಕೊಳ್ಳಲೂ ಸಹಿತ ಅವಕಾಶ ಇಲ್ಲದಂತಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ತೋಡಿಕೊಂಡರು.

ಈಗಾಗಲೇ 5-12-2020 ಮತ್ತು 26-6-2021ರಂದು ಎರಡು ಬಾರಿ ವಿಜಯಪುರ ಡಿಡಿಪಿಐ ಅವರು ರಾಜೇಶ್ವರಿ ಅವರ ಡೆಪ್ಯೂಟೇಶನ್‌ ರದ್ದುಪಡಿಸಿ ಮೂಲ ಶಾಲೆಗೆ ಹೋಗುವಂತೆ ಆದೇಶ ಮಾಡಿದ್ದರೂ ಅಲ್ಲಿನ ಗ್ರಾಮೀಣ ಬಿಇಒ ಹತ್ತಳ್ಳಿ ಅವರು ರಾಜೇಶ್ವರಿ ಅವರನ್ನು ಬಿಡುಗಡೆ ಮಾಡುತ್ತಿಲ್ಲ. ಇದು ಸಂಶಯಕ್ಕೆ ಇಂಬು ನೀಡಿದೆ. ಡಿಡಿಪಿಐ ಆದೇಶಕ್ಕೂ ಕ್ಯಾರೇ ಎನ್ನದ ವಿಜಯಪುರ ಗ್ರಾಮೀಣ ಬಿಇಒ ಹತ್ತಳ್ಳಿ ಅವರ ನಡವಳಿಕೆ ಶಿಕ್ಷಣ ಇಲಾಖೆಯಲ್ಲಿ ಡಿಡಿಪಿಐ ಮತ್ತು ಬಿಇಒ ಅವರ ಕರ್ತವ್ಯಾಧಿಕಾರವನ್ನು ಪ್ರಶ್ನಿಸುವಂತೆ ಮಾಡಿದೆ.

ವಿಜಯಪುರ ಡಿಡಿಪಿಐ ಕಚೇರಿಯಲ್ಲಿ ಡಿಡಿಪಿಐ ಅಧಿಕಾರ ನಡೆಸುತ್ತಾರೆಯೋ ಅಥವಾ ಗ್ರಾಮೀಣ ಬಿಇಒ ಹತ್ತಳ್ಳಿ ಅಧಿಕಾರ ನಡೆಸುತ್ತಾರೆಯೋ ಅನ್ನೋದು ತಿಳಿಯದಂತಾಗಿದೆ ಎಂದು ಹರಿಹಾಯ್ದರು. ಎಸ್‌ಡಿಎಂಸಿ ಅಧ್ಯಕ್ಷ ಸಿದ್ದಣ್ಣ ಕಡ್ಡಿ, ಉಪಾಧ್ಯಕ್ಷ ಶಿವಾನಂದ ದೋರನಳ್ಳಿ, ಗ್ರಾಮಸ್ಥರಾದ ಮಲ್ಲಿಕಾರ್ಜುನ ಗುರಡ್ಡಿ, ಶಿವಣ್ಣ ಶಿವಪುರ, ರಮೇಶ ಸಾಸನೂರ, ಸಿದ್ದಣ್ಣ ದಿಡ್ಡಿ, ಶ್ರೀಶೈಲ ಸಾರಂಗಮಠ, ಬಸವರಾಜ ಕುಂಟೋಜಿ, ಅಶೋಕ ಯಾಳವಾರ, ಸಿದ್ದು ಮುದ್ದೇಬಿಹಾಳ, ಸಿದ್ದಣ್ಣ ಚಳ್ಳಗಿ ಇದ್ದರು.

ಬಿಇಒ ಭೇಟಿ-ಮನವೊಲಿಕೆ

Advertisement

ಪ್ರತಿಭಟನೆ ವಿಷಯ ತಿಳಿದ ಮುದ್ದೇಬಿಹಾಳ ಬಿಇಒ ಹಣಮಂತಗೌಡ ಮಿರ್ಜಿ ಅವರು ಶಾಲೆಗೆ ಧಾವಿಸಿ ಬಂದು ವಿಚಾರಣೆ ನಡೆಸಿದರು. ರಾಜೇಶ್ವರಿ ಅವರ ಬಿಡುಗಡೆ ವಿಷಯದಲ್ಲಿ ನಡೆದಿರುವ ಲೋಪವನ್ನು ಡಿಡಿಪಿಐ ಅವರ ಗಮನಕ್ಕೆ ತರಲಾಗಿದೆ. ಶುಕ್ರವಾರವೇ ರಾಜೇಶ್ವರಿ ಅವರನ್ನು ಅಲ್ಲಿಂದ ಬಿಡುಗಡೆಗೊಳಿಸಿ ಇಲ್ಲಿಯೇ ಸೇವೆ ಸಲ್ಲಿಸಲು ಕಳಿಸುತ್ತಾರೆ. ಆದ್ದರಿಂದ ಬೀಗ ತೆರವುಗೊಳಿಸಿ ಕಲಿಕಾ ಚಟುವಟಿಕೆ ಎಂದಿನಂತೆ ನಡೆಯಲು ಆಸ್ಪದ ಮಾಡಿಕೊಡಬೇಕು ಎಂದು ಕೋರಿದರು.

ಮೊದಲು ವಿರೋಧ ವ್ಯಕ್ತಪಡಿಸಿದ ಗ್ರಾಮಸ್ಥರು ಈಗಾಗಲೇ ಹಲವು ಬಾರಿ ಇಂಥದ್ದೇ ಭರವಸೆ ನೀಡಲಾಗಿದೆ. ಆದರೆ ರಾಜೇಶ್ವರಿ ಅವರು ಪ್ರಭಾವ ಬಳಸಿ ಅಲ್ಲೇ ಉಳಿಯುತ್ತಿದ್ದಾರೆ. ಅವರು ಇಲ್ಲಿಗೆ ಬಂದು ಕರ್ತವ್ಯಕ್ಕೆ ಹಾಜರಾಗಬೇಕು ಇಲ್ಲವೇ ಅವರನ್ನು ಇಲ್ಲಿಂದ ವರ್ಗಾವಣೆಗೊಳಿಸಿ ಅವರ ಸ್ಥಾನದಲ್ಲಿ ಬೇರೊಬ್ಬರನ್ನು ನೇಮಿಸಿ ಪರ್ಯಾಯ ವ್ಯವಸ್ಥೆ ಮಾಡಬೇಕು.

ಆಗಲೇ ಬೀಗ ತೆರವುಗೊಳಿಸುವುದಾಗಿ ಪಟ್ಟು ಹಿಡಿದರು. ಕೊನೆಗೂ ಕೆಲ ಹೊತ್ತಿನ ಹಗ್ಗಜಟ್ಟಾಟ, ಮನವೊಲಿಕೆ ಪರಿಣಾಮ ಗ್ರಾಮಸ್ಥರು ಬೀಗ ತೆರವುಗೊಳಿಸಿ ಕಲಿಕಾ ಚಟುವಟಿಕೆಗೆ ಅವಕಾಶ ಮಾಡಿಕೊಟ್ಟರು. ಬಿಇಓ ಕೊಟ್ಟ ಭರವಸೆ ಈಡೇರದಿದ್ದರೆ ಈ ಬಾರಿ ಮುದ್ದೇಬಿಹಾಳಕ್ಕೆ ಬಂದು ಬಿಇಓ ಕಚೇರಿಗೆ ಬೀಗ ಜಡಿದು ಪ್ರತಿಭಟಿಸುವ ಎಚ್ಚರಿಕೆ ನೀಡಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next