Advertisement

ವಿಶ್ವದರ್ಜೆಗೇರಲಿಲ್ಲ…ಇದ್ದ ಕಟ್ಟಡಗಳು ಉಳಿಯುತ್ತಿಲ್ಲ !

11:44 PM Jul 29, 2017 | Team Udayavani |

ಹಂಪನಕಟ್ಟೆ: ಮಂಗಳೂರು ಸೆಂಟ್ರಲ್‌ ರೈಲು ನಿಲ್ದಾಣ ಒಂದೆಡೆ ವಿಶ್ವದರ್ಜೆಯ ಕನಸು ಕಾಣುತ್ತಿದೆ. ಇನ್ನೊಂದೆಡೆ ಇರುವ ಕಟ್ಟಡಗಳ ಭಾಗಗಳು ಬೀಳುತ್ತಾ ಪ್ರಯಾಣಿಕರಲ್ಲಿ ಅಸುರಕ್ಷತೆ ಮೂಡಿಸುತ್ತಿದೆ. ಅಭಿವೃದ್ಧಿಯ ಮೆಟ್ಟಿಲೇರಬೇಕಿದ್ದ ರೈಲು ನಿಲ್ದಾಣ ಸಮಸ್ಯೆಗಳ ಆಗರವಾಗಿ ಗಮನ ಸೆಳೆಯುತ್ತಿದೆ. ರೈಲು ನಿಲ್ದಾಣದ ಮುಖ್ಯ ಪ್ರವೇಶ ದ್ವಾರದಲ್ಲಿ ಗುರುವಾರ ಟಿಕೆಟ್‌ ಕೌಂಟರ್‌ ಬಳಿಯ ಛಾವಣಿ ಹಾಗೂ ಶುಕ್ರವಾರ ಆರ್‌ಪಿಎಫ್‌ ಕಟ್ಟಡ ಸಹಿತ ಕೆಲವು ಕಡೆ ಸಿಮೆಂಟ್‌ ಪ್ಲಾಸ್ಟರಿಂಗ್‌ ಕಳಚಿ ಬಿದ್ದು ಆತಂಕ ಸೃಷ್ಟಿಸಿತು.

Advertisement

ಗುರುವಾರ ನಡೆದ ಘಟನೆಯಲ್ಲಿ ಕೆಲವು ಮಂದಿ ಗಾಯಗೊಂಡಿದ್ದರು. ಟಿಕೆಟ್‌ ಕೌಂಟರ್‌ನಲ್ಲಿ ಹಲವು ಮಂದಿ ಕ್ಯೂ ನಿಂತಿದ್ದಾಗ ಮೇಲ್ಗಡೆಯ ಛಾವಣಿಯ ಸುಮಾರು 4 ಅಡಿ ಉದ್ದದ ಸಿಮೆಂಟ್‌ ಪ್ಲಾಸ್ಟರಿಂಗ್‌ ಏಕಾಏಕಿ ಮೂಲ ಕಾಂಕ್ರೀಟಿನ ಸ್ಲ್ಯಾಬ್‌ನಿಂದ ಕಳಚಿ ಕೆಳಗೆ ಬಿದ್ದಿತು. ಆಗ ಕೆಳಗೆ ಇದ್ದ ಕೆಲವರಿಗೆ ಸಣ್ಣಪುಟ್ಟ ಗಾಯಗಳಾದವು. ತಲೆಗೆ ತೀವ್ರ ಸ್ವರೂಪದ ಗಾಯಗೊಂಡಿರುವ ಓರ್ವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಶುಕ್ರವಾರ ಕಟ್ಟಡದ ಇನ್ನಷ್ಟು ಭಾಗದಲ್ಲಿ ಸಿಮೆಂಟ್‌ ಪ್ಲಾಸ್ಟರಿಂಗ್‌ ಕಳಚಿ ಬಿದ್ದಿದೆ.

ಪ್ರಸ್ತಾವನೆಯಲ್ಲೇ ಉಳಿದಿದೆ
ಸೆಂಟ್ರಲ್‌ ರೈಲು ನಿಲ್ದಾಣವನ್ನು ವಿಶ್ವದರ್ಜೆಗೇರಿಸುವ ಪ್ರಸ್ತಾವನೆ ರೂಪುಗೊಂಡು ಹಲವು ವರ್ಷಗಳಾಗಿದ್ದು  ಇನ್ನೂ ಸಾಕಾರಗೊಂಡಿಲ್ಲ. ಬೆಂಗಳೂರು ಸಿಟಿ (ಬೈಯಪ್ಪನಹಳ್ಳಿ), ಮಂಗಳೂರು, ದಕ್ಷಿಣ ರೈಲ್ವೇಯ ಚೆನ್ನೈ ಸೆಂಟ್ರಲ್‌, ತಿರುವನಂತಪುರಂ ಸೆಂಟ್ರಲ್‌ ಹಾಗೂ ದೇಶದ ಪ್ರಮುಖ ನಿಲ್ದಾಣಗಳಾದ ಸಿಎಸ್‌ಟಿ ಮುಂಬಯಿ, ಪುಣೆ, ನಾಗಪುರ, ಹೊಸದೆಹಲಿ, ಕೋಲ್ಕತ್ತಾ  ಸಹಿತ 50 ನಿಲ್ದಾಣಗಳನ್ನು 2009- 10ರ ಕೇಂದ್ರ ರೈಲ್ವೇ ಬಜೆಟ್‌ನಲ್ಲಿ ವಿಶ್ವದರ್ಜೆ ಮಟ್ಟಕ್ಕೇರಿಸಲು ಗುರುತಿಸಲಾಗಿತ್ತು.

ಮಂಗಳೂರಿನ ನಿಲ್ದಾಣದ ಬಗ್ಗೆ ಸಾಧ್ಯತಾ ವರದಿ ನೀಡಲು  ಖಾಸಗಿ ಸಂಸ್ಥೆಗೆ ಸೂಚಿಸಲಾಗಿತ್ತು. ನಿಲ್ದಾಣ ನಗರದ ಕೇಂದ್ರಭಾಗದಲ್ಲಿದ್ದು ಆವಶ್ಯಕ ಜಾಗ ದೊರೆಯುವುದು ಕಷ್ಟ ಎಂಬ ಹಿನ್ನೆಲೆಯಲ್ಲಿ ಸಾಕಷ್ಟು ಚರ್ಚೆ ನಡೆದಿತ್ತು. ಕೇಂದ್ರ ರೈಲ್ವೆ  ನಿಲ್ದಾಣ ಬಳಿ ರೈಲ್ವೆ ಇಲಾಖೆಗೆ  ಸೇರಿದ ಜಾಗದಲ್ಲಿ ಹಲವು ಕಟ್ಟಡಗಳು, ವಸತಿ ನಿಲಯಗಳಿವೆ. ವ್ಯವಸ್ಥಿತವಾಗಿ ಒಂದೆಡೆ ಬಹುಮಹಡಿ ಕಟ್ಟಡಗಳನ್ನು ನಿರ್ಮಿಸಿ ಅಲ್ಲಿಗೆ ಸ್ಥಳಾಂತರಿಸಿದರೆ ಬಹಳಷ್ಟು ಜಾಗ ದೊರೆಯಬಹುದು ಎಂದು ಇಲಾಖೆಗೆ ಮನದಟ್ಟು ಮಾಡಲಾಗಿತ್ತು.ಆದರೆ ಅಲ್ಲಿ ಲಭ್ಯವಿರುವ ಜಾಗದಲ್ಲಿ ವಿಶ್ವದರ್ಜೆಯ ಮಾನದಂಡಕ್ಕನುಗುಣವಾಗಿ ರೈಲ್ವೆನಿಲ್ದಾಣ ಅಭಿವೃದ್ದಿ ಕಷ್ಟ ಎಂಬ ವಾದವೂ ಇತ್ತು. ಒಟ್ಟಾರೆಯಾಗಿ ಅತ್ತ ವಿಶ್ವದರ್ಜೆ ನಿಲ್ದಾಣವಾಗಿ ಇದು ಮೇಲ್ದ ರ್ಜೆಗೇರುತ್ತಿಲ್ಲ. ಇದ್ದ ವ್ಯವಸ್ಥೆಯ ಸುಧಾರಣೆಯೂ ಆಗುತ್ತಿಲ್ಲ.

ಸಮಸ್ಯೆಗಳ ಆಗರ
ಈ ರೈಲ್ವೇ ನಿಲ್ದಾಣದಲ್ಲಿ 4ನೇ ಫ್ಲಾಟ್‌ಫಾರ್ಮ್ ನಿರ್ಮಾಣ ಇನ್ನೂ ಆಗದ ಪರಿಣಾಮ ಕೆಲವು ರೈಲುಗಳನ್ನು ಅನಿವಾರ್ಯವಾಗಿ ಮಂಗಳೂರು ಜಂಕ್ಷನ್‌ನಿಂದ ಆರಂಭಿಸಬೇಕಾಗಿದೆ. ರೈಲ್ವೆ ನಿಲ್ದಾಣದ ಎರಡನೇ ಪ್ರವೇಶ ದ್ವಾರದಲ್ಲಿ ಇನ್ನೂ ಹಲವು ಕಾಮಗಾರಿಗಳು ಬಾಕಿ ಇವೆ. 2 ಮತ್ತು 3 ನೇ ಫ್ಲಾಟ್‌ಫಾರಂನಲ್ಲಿ  ಕೇವಲ ಅರ್ಧದಷ್ಟು ಮಾತ್ರ ಮೇಲ್ಛಾವಣಿ ಇದ್ದು ಪ್ರಯಾಣಿಕರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇದರ ಜತೆಗೆ ಶೌಚಾಲಯ ಸಮಸ್ಯೆ, ನಿಲ್ದಾಣದ ಹೊರಗಡೆ ಮಳೆ ನೀರು ಹರಿದು ಹೋಗಲು ಚರಂಡಿಯ ಕೊರತೆ ಸೇರಿದಂತೆ ಹಲವು ಸಮಸ್ಯೆಗಳಿವೆ.

Advertisement

ಹಳೆಯ ಕಟ್ಟಡ
ರೈಲ್ವೇ  ನಿಲ್ದಾಣ ಕಟ್ಟಡ ಬಹಳ ಹಳೆಯದಾಗಿದ್ದು, ಮಳೆ ಬಂದಾಗ ಅಲ್ಲಲ್ಲಿ ಸೋರುತ್ತದೆ. ಕೇವಲ ಟಿಕೆಟ್‌ ಕೌಂಟರ್‌ ಎದುರಿನ ವಿಶಾಲವಾದ ಕೊಠಡಿ ಮಾತ್ರವಲ್ಲದೆ, ಕಚೇರಿಗಳ ಛಾವಣಿಗಳೂ ಇದೇ ಸಮಸ್ಯೆಯನ್ನು ಎದುರಿಸುತ್ತಿವೆ. ಹಾಗಾಗಿ ಸಾರ್ವಜನಿಕರಲ್ಲದೇ, ನಿಲ್ದಾಣದ ಸಿಬಂದಿ ಭಯ ದಿಂದ ಕೆಲಸ ಮಾಡುವಂತಾಗಿದೆ. ಹೊಸತಾಗಿ ಪ್ಲಾಸ್ಟರಿಂಗ್‌ ಮಾಡಿಸಿಲ್ಲ. ನಿರ್ವಹಣೆಯ ಕೊರತೆ ಇದಕ್ಕೆ ಕಾರಣ ಎಂಬ ಆರೋಪವೂ ವ್ಯಕ್ತವಾಗಿದೆ.

ಶತಮಾನದ ಇತಿಹಾಸ
1907ರಲ್ಲಿ ಮದ್ರಾಸ್‌- ಮಂಗಳೂರು ರೈಲುಮಾರ್ಗ ಆರಂಭಗೊಂಡಿದ್ದು, ಆ ಸಂದರ್ಭದಲ್ಲಿ ಮದ್ರಾಸ್‌ನ ಗವರ್ನರ್‌ ಮಂಗಳೂರಿಗೆ ಬಂದು ವೆಸ್ಟ್‌ಕೋಸ್ಟ್‌ ರೈಲನ್ನು ಉದ್ಘಾಟಿಸಿದ್ದರು. ಆಗ ದೇಶದಲ್ಲಿದ್ದ ಮೂರು ರೈಲುಗಳಲ್ಲಿ ಇದೂ ಒಂದಾಗಿತ್ತು. 1929ರಲ್ಲಿ ಇಲ್ಲಿಂದ ಪೇಶಾವರಕ್ಕೆ ಗ್ರ್ಯಾಂಡ್‌ ಟ್ರಾಂಕ್‌ ರೈಲು ಆರಂಭಗೊಂಡಿತು. ಭಾರತ ಉಪಖಂಡದ ಅತ್ಯಂತ ಉದ್ದದ ರೈಲುಸಂಚಾರ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. 1930ರಲ್ಲಿ ಈಗಿನ ರೈಲು ನಿಲ್ದಾಣ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಲಾಯಿತು. 2007ರಲ್ಲಿ ರೈಲು ಮಾರ್ಗದ ಶತಮಾನೋತ್ಸವ ಆಚರಿಸಲಾಗಿದೆ. 1979ರಲ್ಲಿ ಹಾಸನ- ಮಂಗಳೂರು, 1983ರಲ್ಲಿ ಮಂಗಳೂರು – ಎನ್‌ಎಂಪಿಟಿ, 1996ರಲ್ಲಿ ಮಂಗಳೂರು-ರೋಹಾ ( ಕೊಂಕಣ್‌ ಎಕ್ಸ್‌ಪ್ರೆಸ್‌) ರೈಲು ಪ್ರಾರಂಭವಾಯಿತು.

– ಕೇಶವ ಕುಂದರ್‌

Advertisement

Udayavani is now on Telegram. Click here to join our channel and stay updated with the latest news.

Next