Advertisement

ಇಲ್ಲಿ ಪಂಚಾಯತ್‌ಗೆ ಸಭಾಭವನ ಇಲ್ಲ ! ಮೂಲ ಸೌಕರ್ಯ ಅಭಿವೃದ್ಧಿಯ ನಿರೀಕ್ಷೆಯಲ್ಲಿ ಪಡುಪೆರಾರ

10:47 AM Jul 28, 2022 | Team Udayavani |

ಬಜಪೆ: ಪಡು ಪೆರಾರ ಪಂಚಾಯತ್‌ಗೆ ಸಭಾಭವನದ ಕೊರತೆ ಇಲ್ಲಿರುವ ದೊಡ್ಡ ಸಮಸ್ಯೆ. ಗ್ರಾಮ ಪಂಚಾಯತ್‌ಗೊಂದು ಸಭೆ ನಡೆಸಲು ಸಭಾಭವನ ಬೇಕು. ಆದರೆ ಇಲ್ಲಿ ತನಕ ಅದು ಈಡೇರಿಲ್ಲ. ಖಾಸಗಿ ಸಭಾಭವನದಲ್ಲಿ ಗ್ರಾಮ ಸಭೆ ನಡೆಯುತ್ತಿದೆ.

Advertisement

18 ಲಕ್ಷ ಅನುದಾನ ಮೀಸಲು ಇದ್ದರೂ ಇಲ್ಲಿ ಸಭಾಭವನ ನಿರ್ಮಾಣವಾಗಿಲ್ಲ. ಹಳೆಯ ಕಟ್ಟಡ ಕೆಡವಿ ನೂತನ ಸಭಾಭವನ ನಿರ್ಮಾಣ ಮಾಡುವ ಉದ್ದೇಶ ಇಂದಿನ ಆಡಳಿತಕ್ಕೆ ಇದೆ. ಸಭಾಭವನದೊಟ್ಟಿಗೆ ಇದರಲ್ಲಿ ಗ್ರಂಥಾಲಯ, ಗ್ರಾಮಕರಣಿಕ ಕಚೇರಿ, ಜಿಮ್‌ ಕೇಂದ್ರವನ್ನು ಮಾಡುವ ಇರಾದೆ ಗ್ರಾಮ ಪಂಚಾಯತ್‌ಗೆ ಇದೆ.

ಪಡುಪೆರಾರ ಗ್ರಾಮದಲ್ಲಿ ರುದ್ರಭೂಮಿ ಇಲ್ಲ. ರುದ್ರಭೂಮಿಗೆ ಜಾಗ ಕೂಡ ಮೀಸಲಿಟ್ಟಿಲ್ಲ. ಕತ್ತಲಸಾರ್‌ ಪ್ರದೇಶದಲ್ಲಿದ್ದರೆ ಒಳ್ಳೆಯದು ಎನ್ನುವುದು ಇಲ್ಲಿನ ಗ್ರಾಮಸ್ಥರ ಅಭಿಪ್ರಾಯ.

ಸ್ಥಳ ಐತಿಹ್ಯ

ಹಾಲಿನಂತಹ ಊರು ಪೆರಾರ. ತುಳು ಭಾಷೆಯ (ಪೆರ್‌ದ ಲೆಕ್ಕಂಚಿನ ಊರು) ಯಾವುದೇ ಅನ್ಯಾಯಗಳನ್ನು ಮಾಡದಂತಹ ಊರು. ದೈವಗಳ ಮೇಲಿರುವ ಭಕ್ತಿ , ಶ್ರದ್ಧೆ , ಭಯ ಇದಕ್ಕೆ ಕಾಣವಾಗಿದೆ ಎಂದು ಹೇಳಲಾಗುತ್ತದೆ. ಪೆರಾರ ಕಿನ್ನಿಮಜಲು ಶ್ರೀ ಬ್ರಹ್ಮದೇವರು, ಇಷ್ಟದೇವತಾ ಬಲವಾಂಡಿ ಪಿಲಿಚಾಂಡಿ ದೈವಸ್ಥಾನ ಇಲ್ಲಿನ ಪ್ರಸಿದ್ಧ ದೈವಸ್ಥಾನವಾಗಿದೆ.

Advertisement

ತುಳುನಾಡಿನ ನಾಲ್ಕು ಜಾಗೃತ ನ್ಯಾಯಪೀಠಗಳಲ್ಲಿ ಒಂದಾಗಿರುವ ಪೆರಾರದ ಛತ್ರದರಸು ಚಾವಡಿಯ ಎದುರಿರುವ ಬಂಟಕಂಬ ರಾಜಾಂಗಣ. ಈಗ ಇದರ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿದೆ.

ಮಂಗಳೂರು ನಗರದಿಂದ 22ಕಿ. ಮೀ.ದೂರದಲ್ಲಿ ಈ ಗ್ರಾಮವಿದೆ. 829.30 ಹೆಕ್ಟೇರ್‌ ವಿಸ್ತೀರ್ಣ ಇದೆ. 2001ರ ಜನಗಣತಿ ಪ್ರಕಾರ 3,708 ಜನಸಂಖ್ಯೆ, 1,130 ಕುಟುಂಬಗಳು ಇಲ್ಲಿ ಇವೆ. ಗುಡ್ಡ, ಬಯಲು ಪ್ರದೇಶದ, ತೋಟಗಳಿಂದ ಹಸುರು ಪ್ರಕೃತಿ ಸೌಂದರ್ಯದಿಂದ ಕೂಡಿದ ಪಡುಪೆರಾರ ಗ್ರಾಮಕ್ಕೆ ಕೃಷಿಯೇ ಆದಾಯದ ಮೂಲ. ಭತ್ತ ಬೇಸಾಯ, ಅಡಿಕೆ, ತೆಂಗು, ತರಕಾರಿ ಬೆಳೆಯಲಾಗುತ್ತಿದ್ದು, ಇವುಗಳನ್ನು ಮಾರಲು ಬಜಪೆಗೆ ಹೋಗಬೇಕಾದ ಅನಿವಾರ್ಯತೆ ಇದೆ. ಇಲ್ಲಿಯೇ ಮಾರುಕಟ್ಟೆ ಇದ್ದರೆ ತರಕಾರಿ ಸಹಿತ ಕೃಷಿ ಬೆಳೆಗಳನ್ನು ಮಾರಲು ಅನುಕೂಲವಾಗುತ್ತಿತ್ತು ಎಂಬುದು ಸ್ಥಳೀಯರ ಅಭಿಪ್ರಾಯ.

ಈಗಾಗಲೇ ಗ್ರಾಮ ಪಂಚಾಯತ್‌ಗೆ ಮನೆ ನಿವೇಶನಗಳ ಅರ್ಜಿಗಳು ಬಂದಿದ್ದು, ಮನೆ ನಿವೇಶನಕ್ಕೆ ಪಡುಪೆರಾರ ಗ್ರಾಮದ ವರಕಲ ಎಂಬಲ್ಲಿ ಜಾಗ ಮೀಸಲಿಡಲಾಗಿದೆ. ಮನೆ ನಿವೇಶನ ಶೀಘ್ರ ನೀಡಿದ್ದಲ್ಲಿ ಆ ಪ್ರದೇಶದ ಅಭಿವೃದ್ಧಿಗೆ ಪೂರಕವಾಗಲಿದೆ.

ಉದ್ಘಾಟನೆಯಾಗದ ವಿದ್ಯಾರ್ಥಿ ನಿಲಯ

ಸುಮಾರು 4 ಕೋ. ರೂಪಾಯಿ ಅನುದಾನದಲ್ಲಿ ಸುಂಕದಕಟ್ಟೆ ಪಾಲಿಟೆಕ್ನಿಕ್‌ ಸಮೀಪದಲ್ಲಿ ನಿರ್ಮಾಣವಾದ ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯ ಉದ್ಘಾಟನೆ ಇನ್ನೂ ಆಗಿಲ್ಲ. 2013ರಲ್ಲಿ ಈ ವಿದ್ಯಾರ್ಥಿ ನಿಲಯ ಅನುಮೋದನೆಗೊಂಡಿತ್ತು. ನಿರ್ಮಿತಿ ಕೇಂದ್ರದಿಂದ ಈ ಕಾಮಗಾರಿ ನಿರ್ಮಾಣವಾಗಿದೆ. ಎರಡನೇ ಹಂತದ ಕಾಮಗಾರಿ ನಡೆದು ಒಂದು ವರ್ಷಗಳಾಗಿವೆ. ಪೂರ್ಣ ಕಾಮಗಾರಿ ಆದರೂ ಇದರ ಉದ್ಘಾಟನೆ, ಉಪಯೋಗಕ್ಕೆ ಇನ್ನೂ ದಿನ ಕೂಡಿ ಬಂದಿಲ್ಲ.

ರಸ್ತೆ ಅಭಿವೃದ್ಧಿಯ ನಿರೀಕ್ಷೆ

ಅಂಬಿಕಾ ನಗರದಿಂದ ಮುಚ್ಚಾರಿಗೆ ಹೋಗುವ ರಸ್ತೆ ಮೇಲ್ದರ್ಜೆಗೇರಿಸಲು ಮನವಿ ಮಾಡಲಾಗಿದೆ. ಇದು ಮುಚ್ಚಾರಿಗೆ ಭಾರೀ ಸಮೀಪದ ರಸ್ತೆ. ಅಳಿಕೆ -ತನ್ಯ -ಕಾಯರಾಣೆ ಹೊಸ ರಸ್ತೆ ನಿರ್ಮಾಣವಾಗಬೇಕು. ಇದಕ್ಕೆ ಎರಡು ಸೇತುವೆಯ ನಿರ್ಮಾಣ ಅಗತ್ಯ. ಈ ರಸ್ತೆ ರಾಜ್ಯ ಹೆದ್ದಾರಿಯನ್ನು ಸಂಪರ್ಕಿಸಲು ಸಾಧ್ಯವಾಗುತ್ತದೆ.

ಕೊಲಪಿಲ -ನೆಲ್ಲಿ ಕಾಡು ರಸ್ತೆ. ಕಾಂತನಗರ -ಕಟ್ಟಿಂಜ ರಸ್ತೆ, ಕಾರಡ್ಕ ರಸ್ತೆ, ಪಂಬದಕೋಡಿ ರಸ್ತೆ, ಬಾಕ್ಯಾರು ಕೋಡಿ ರಸ್ತೆ, ದೊಡ್ಡಪಲ್ಕೆ ಒಂದನೇ ಅಡ್ಡ ರಸ್ತೆ, ಕತ್ತಲಸಾರ್‌ ಕಟ್ಟಸ್ಥಾನ ರಸ್ತೆ, ಕತ್ತಲಸಾರ್‌ ಗುಳಿಗ ದೈವಸ್ಥಾನ ರಸ್ತೆ ಕೂಡ ಅಭಿವೃದ್ಧಿಗಾಗಿ ಎದುರು ನೋಡುತ್ತಿವೆ. ಘನತ್ಯಾಜ್ಯ ಘಟಕವನ್ನು ಪಂಚಾ ಯತ್‌ನ ಹತ್ತಿರವೇ ನಿರ್ಮಿಸಿದರೆ ಉತ್ತಮ ಎಂಬ ಅಭಿಪ್ರಾಯವಿದೆ.

ಬಹುಗ್ರಾಮ ಕುಡಿಯುವ ನೀರಿನ ಯೋಜನೆ

ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಇಲ್ಲಿಗೆ ತುರ್ತಾಗಿ ಆಗಬೇಕಾಗಿದೆ. ಕಿಂಡಿ ಅಣೆಕಟ್ಟುಗಳೇ ನೀರಿನ ಮೂಲ, ಹೊಸದಾಗಿ 6 ಕಿಂಡಿ ಅಣೆಕಟ್ಟುಗಳು ನಿರ್ಮಾ ಣವಾಗಲಿವೆ. ಪಂಚಾಯತ್‌ ಬಳಿಯೇ ನೀರಿನ ಸಮಸ್ಯೆ ಕಾಡುತ್ತಿದೆ. ಕೊಳವೆ ಬಾವಿಗಳಿಂದಲೇ ಕುಡಿಯುವ ನೀರು ಸರಬರಾಜು ಆಗುತ್ತಿದೆ. ಕೆಲವು ಕೊಳವೆ ಬಾವಿ ಬತ್ತಿ ಹೋಗಿದೆ. ಇದಕ್ಕಾಗಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಇಲ್ಲಿ ಅತೀ ಅವಶ್ಯವಾಗಿದೆ.

ಅರ್ಬಿ ಫಾಲ್ಸ್‌

ಪಡುಪೆರಾರ ಸುಂಕದಕಟ್ಟೆಯಿಂದ ಸುಮಾರು 3 ಕಿ.ಮೀ.ದೂರ, ಪಾಲಿಟೆಕ್ನಿಕ್‌-ಕಬೆತಿಗುತ್ತು ರಸ್ತೆಯಾಗಿ 2 ಕಿ.ಮೀ. ಡಾಮರು ರಸ್ತೆ, ಬಳಿಕ ಬಲಕ್ಕೆ ಮಣ್ಣು ರಸ್ತೆಯಲ್ಲಿ ಸಾಗಿದರೆ ಈ ಅರ್ಬಿ ಫಾಲ್ಸ್‌ ಸಿಗುತ್ತದೆ. ಮಳೆಗಾಲದಲ್ಲಿ ಸಾಕಷುc ಮಂದಿ ಇಲ್ಲಿಗೆ ಭೇಟಿ ನೀಡುತ್ತಾರೆ.

ಗ್ರಾಮದ ಅಭಿವೃದ್ಧಿ ಮುಖ್ಯ ಉದ್ದೇಶ: ಗ್ರಾಮದ ಅಭಿವೃದ್ಧಿ ನಮ್ಮ ಮುಖ್ಯ ಉದ್ದೇಶ. ಘನತ್ಯಾಜ್ಯ ಘಟಕ ನಿರ್ಮಾಣಕ್ಕೆ ಹೆಚ್ಚು ಆದ್ಯತೆ ನೀಡಲಾಗುವುದು. ಸ್ವತ್ಛ ಗ್ರಾಮ, ಆರೋಗ್ಯ ಗ್ರಾಮವಾಗಬೇಕು. ಈಗಾಗಲೇ ಮುಖ್ಯ ಹಾಗೂ ಅಡ್ಡ ರಸ್ತೆಗಳಿಗೆ ಶಾಸಕರಾದ ಡಾ| ವೈ.ಭರತ್‌ ಶೆಟ್ಟಿಯವರು ಅನುದಾನ ನೀಡಿದ್ದಾರೆ. ನೀರಿನ ಸಮಸ್ಯೆಗೆ ಜಲಜೀವನ್‌ ಮಿಶನ್‌, ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಾರ್ಯಗತವಾದಲ್ಲಿ ಪರಿಹಾರ ಸಿಗಲಿದೆ. ಪಂಚಾಯತ್‌ಗೆ ಸಭಾಭವನದ ಕೊರತೆ ಇದೆ. ಅನುದಾನ ಇದೆ. ಹಳೆ ಕಟ್ಟಡ ಕೆಡವಿ ಸಭಾಭವನ ನಿರ್ಮಿಸಲು ಪಂಚಾಯತ್‌ ಯೋಜನೆ ಹಾಕಿಕೊಂಡಿದೆ. – ಅಮಿತಾ ಮೋಹನ್‌ ಶೆಟ್ಟಿ, ಅಧ್ಯಕ್ಷೆ, ಪಡುಪೆರಾರ ಗ್ರಾ.ಪಂ.

ಪರಿಹಾರ ಎಂದು: ಹೊಸ ಕೊಳವೆ ಬಾವಿಯಿಂದ ಕಾಂತನಗರ ಪ್ರದೇಶದಲ್ಲಿ ಈಗ ಕುಡಿಯುವ ನೀರಿನ ಸಮಸ್ಯೆ ಕಡಿಮೆಯಾಗಿದೆ. ಪಂಚಾಯತ್‌ ಸಮೀಪದಿಂದ ಶ್ರೀ ಬ್ರಹ್ಮದೇವರು ಇಷ್ಟದೇವತಾ ಬಲವಾಂಡಿ ಪಿಲಿಚಾಂಡಿ ದೈವಸ್ಥಾನಕ್ಕೆ ಕಾಂಕ್ರೀಟ್‌ ರಸ್ತೆ ನಿರ್ಮಾಣವಾಗಿದೆ. ಅದಕ್ಕೆ ಚರಂಡಿ ನಿರ್ಮಾಣವಾಗಿಲ್ಲ. ಇದರಿಂದ ಮಳೆಯ ನೀರು ರಸ್ತೆಯಲ್ಲಿಯೇ ಹೋಗುತ್ತದೆ. ಈ ಸಮಸ್ಯೆಗಳಿಗೆ ಪರಿಹಾರವಾಗಬೇಕು. – ಸುನಿಲ್‌ ಪೆರಾರ, ಕೃಷಿಕ

– ಸುಬ್ರಾಯ್‌ ನಾಯಕ್‌ ಎಕ್ಕಾರು

Advertisement

Udayavani is now on Telegram. Click here to join our channel and stay updated with the latest news.

Next