Advertisement
ಇಲ್ಲಿಯವರೆಗೆ ನಿಗದಿತ ರೇಖೆಯವರೆಗೆ ಎರಡೂ ದೇಶಗಳು ಗಸ್ತು ತಿರುಗುತ್ತಿದ್ದವು. ಯಾವಾಗ ಡಿ.9ರಂದು ಚೀನಾ ಸೈನಿಕರು ಇಲ್ಲಿನ ಯಥಾಸ್ಥಿತಿಯನ್ನು ಬದಲಿಸಿ, ಅತಿಕ್ರಮಣಕ್ಕೆ ಯತ್ನಿಸಿದರೋ ಆಗ ಘರ್ಷಣೆ ಆರಂಭವಾಯಿತು. ಭಾರತದ ಯೋಧರ ಮೇಲೆ ಸವಾರಿ ಮಾಡಲು ಚೀನಾ ನಡೆಸಿದ ಯತ್ನವನ್ನು ನಮ್ಮ ಯೋಧರು ಸಮರ್ಥವಾಗಿ ವಿಫಲಗೊಳಿಸಿದರು. ಕೊನೆಗೆ “ಬಂದ ದಾರಿಗೆ ಸುಂಕವಿಲ್ಲ’ ಎಂಬಂತೆ ಚೀನೀ ಸೈನಿಕರು ಬರಿಗೈಲಿ ವಾಪಸಾಗಬೇಕಾಯಿತು.
ಇದು ಚಳಿಗಾಲವಾಗಿರುವ ಕಾರಣ, ಯಾಂಗ್‌ಝೆ ಪ್ರದೇಶ ಪೂರ್ತಿ ಮಂಜಿನಿಂದ ಆವೃತವಾಗಿರುತ್ತದೆ. ಹೀಗಾಗಿ, ಅಲ್ಲಿ ಭಾರತೀಯ ಯೋಧರ ಸಂಖ್ಯೆ ಕಡಿಮೆಯಾಗಿರಬಹುದು ಎಂದು ಭಾವಿಸಿದ ಚೀನ ಸೇನೆ, ಯಾಂಗ್‌ಝೆ ಠಾಣೆಯನ್ನು ತನ್ನ ವಶಕ್ಕೆ ಪಡೆಯಲು ಮುಂದಾಯಿತು. 2008ರಲ್ಲಿ ಈ ಪ್ರಾಂತ್ಯದಲ್ಲಿ ಚೀನೀಯರು ಬುದ್ಧನ ಪ್ರತಿಮೆಯೊಂದನ್ನು ಒಡೆದುಹಾಕಿದ್ದರು. ಅಂದಿನಿಂದಲೂ ಯಾಂಗ್‌ಝೆ ಎರಡೂ ದೇಶಗಳ ನಡುವಿನ ವಿವಾದಿತ ಜಾಗ ಎಂದೆನಿಸಿಕೊಂಡಿತು. 14 ಸಾವಿರ ಅಡಿ ಎತ್ತರದಲ್ಲಿರುವ ಯಾಂಗ್‌ಝೆ ಪ್ರದೇಶವನ್ನು ಸ್ಥಳೀಯರು ಅತ್ಯಂತ ಪವಿತ್ರ ತಾಣವೆಂದು ಆರಾಧಿಸುತ್ತಾರೆ. 108 ಜಲಪಾತಗಳನ್ನು ಹೊಂದಿರುವ ಛುಮಿ ಗ್ಯಾಟೆಯನ್ನು ಸ್ಥಳೀಯರು “ಪವಿತ್ರ ಜಲಪಾತಗಳು’ ಎಂದೇ ಕರೆಯುತ್ತಾರೆ. ಈ ತಾಣವು ಎರಡನೇ ಬುದ್ಧ ಎಂದು ಪರಿಗಣಿಸಲ್ಪಡುವ “ಗುರು ಪದ್ಮಸಂಭವ’ ಅವರಿಗೆ ಸಂಬಂಧಿಸಿದ್ದಾಗಿರುವ ಕಾರಣ, ಅರುಣಾಚಲ ಮತ್ತು ಟಿಬೆಟ್‌ನ ಮೋನಾ³ಗಳು ಇದನ್ನು “ಪವಿತ್ರ’ ಸ್ಥಳವೆಂದು ಕರೆಯುತ್ತಾರೆ. ಚೀನಾವು ಈ ಜಲಪಾತಗಳ ಸುತ್ತಲೂ ಸಿಸಿ ಕ್ಯಾಮೆರಾಗಳು, ಪ್ರಾಜೆಕ್ಟರ್‌ಗಳು, ದೊಡ್ಡ ಪರದೆಗಳನ್ನು ಅಳವಡಿಸಿದೆ. 2 ವರ್ಷಗಳಿಂದ ಅರುಣಾಚಲ ಸರ್ಕಾರ ಮತ್ತು ಭಾರತೀಯ ಸೇನೆಯು ಇಲ್ಲಿನ ರಸ್ತೆ ಸಂಪರ್ಕ ಹಾಗೂ ಪ್ರವಾಸಿ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಿವೆ. 2020ರ ಜುಲೈನಲ್ಲಿ ಸಿಎಂ ಪೆಮಾ ಖಂಡು ಅವರು ಇಲ್ಲಿ ಗೋಂಪಾ(ಪ್ರಾರ್ಥನಾ ಸ್ಥಳ)ವನ್ನು ಉದ್ಘಾಟಿಸಿದ್ದರು. ಜತೆಗೆ, ಟ್ವೀಟ್ ಮೂಲಕ ಪ್ರವಾಸಿಗರಿಗೆ ಆಹ್ವಾನವನ್ನೂ ನೀಡಿದ್ದರು. ಈ ಎಲ್ಲ ಬೆಳವಣಿಗೆಗಳು ಚೀನಾಗೆ ರುಚಿಸಿಲ್ಲ. ಇದೇ ಕಾರಣಕ್ಕಾಗಿ ಕಾಲು ಕೆರೆದುಕೊಂಡು ಬಂದಿದೆ ಎಂದು ಹೇಳಲಾಗಿದೆ. ಗಡಿ ದಾಟಿ ಬರುತ್ತಿದ್ದಂತೆ, ಚೀನಾ ಊಹಿಸದಷ್ಟು ಸಂಖ್ಯೆಯಲ್ಲಿ ಭಾರತೀಯ ಯೋಧರು ಈ ಕಡೆ ಇದ್ದ ಕಾರಣ, ಬಾಲ ಸುಟ್ಟ ಬೆಕ್ಕಿನಂತೆ ಚೀನೀ ಸೈನಿಕರು ವಾಪಸಾಗಿದ್ದಾರೆ.
Related Articles
Advertisement
ಇದೇ ವೇಳೆ, “ಈಗ ಎಲ್ಲವೂ ಸರಿಹೋಗಿದೆ. ಪರಿಸ್ಥಿತಿ ನಿಯಂತ್ರಣದಲ್ಲಿದೆ. ನಾವೆಲ್ಲರೂ ಸುರಕ್ಷಿತವಾಗಿದ್ದೇವೆ’ ಎಂದು ಸೇನೆಯ ಅಡುjಟೆಂಟ್ ಜನರಲ್ ಲೆ.ಜ.ಸಿ.ಬಿ. ಪೊನ್ನಪ್ಪ ಹೇಳಿದ್ದಾರೆ.
ಲೈಸೆನ್ಸ್ ರದ್ದು ಮಾಡಿದ್ದಕ್ಕೆ ಕಾಂಗ್ರೆಸ್ ಕೆಂಡ: ಶಾ ಆರೋಪ ತವಾಂಗ್‌ನಲ್ಲಿ ಭಾರತ-ಚೀನ ಘರ್ಷಣೆ ಕುರಿತು ರಾಜ್ಯಸಭೆಯಲ್ಲಿ ಸಚಿವ ರಾಜನಾಥ್ ಸಿಂಗ್ ಮಂಗಳವಾರ ಮಾಹಿತಿ ನೀಡಿದ್ದಾರೆ. ಆದರೆ, ಸಿಂಗ್ ಅವರ ಹೇಳಿಕೆ ಕುರಿತು ಕಾಂಗ್ರೆಸ್ ಸ್ಪಷ್ಟೀಕರಣ ಕೇಳಿದ್ದು, ಅದಕ್ಕೆ ಅನುಮತಿ ಸಿಗದ ಕಾರಣ, ಕಾಂಗ್ರೆಸ್ ಕಲಾಪ ಬಹಿಷ್ಕರಿಸಿ ಹೊರನಡೆಯಿತು.
ಲೋಕಸಭೆಯಲ್ಲೂ ಪ್ರತಿಪಕ್ಷಗಳು ಕಲಾಪಕ್ಕೆ ಅಡ್ಡಿಪಡಿಸಿದವು. ಇದರಿಂದ ಕೆಂಡಾಮಂಡಲರಾದ ಕೇಂದ್ರ ಗೃಹ ಸಚಿವ ಅಮಿತ್ ಶಾ, “ಕಾಂಗ್ರೆಸ್‌ನ ಈ ವರ್ತನೆಗೆ ತವಾಂಗ್ ಘರ್ಷಣೆ ಕಾರಣವಲ್ಲ. ಬದಲಿಗೆ, ರಾಜೀವ್ ಗಾಂಧಿ ಪ್ರತಿಷ್ಠಾನಕ್ಕೆ ನೀಡಲಾದ ಎಫ್ಸಿಆರ್‌ಎ(ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ) ಲೈಸೆನ್ಸ್ ರದ್ದು ಮಾಡಿದ್ದೇ ಕಾರಣ. ಈ ಪ್ರತಿಷ್ಠಾನವನ್ನು ಸಾಮಾಜಿಕ ಸೇವೆಗೆ ಎಂದು ಹೇಳಿ ನೋಂದಣಿ ಮಾಡಲಾಗಿತ್ತು. ಆದರೆ, ಭಾರತ-ಚೀನ ಸಂಬಂಧ ವೃದ್ಧಿ ಕುರಿತಾದ ಸಂಶೋಧನೆಗೆಂದು ಈ ಪ್ರತಿಷ್ಠಾನವು ಚೀನಾ ರಾಯಭಾರ ಕಚೇರಿಯಿಂದ 1.35 ಕೋಟಿ ರೂ. ಪಡೆದಿತ್ತು. ಇದೇ ಕಾರಣಕ್ಕೆ, ನಮ್ಮ ಸರ್ಕಾರವು ಪ್ರತಿಷ್ಠಾನದ ಲೈಸೆನ್ಸ್ ರದ್ದು ಮಾಡಿತು.
ಇದರಿಂದ ಹತಾಶೆಗೊಂಡು ಕಾಂಗ್ರೆಸ್ ಕಲಾಪದಲ್ಲಿ ಗದ್ದಲ ಎಬ್ಬಿಸುತ್ತಿದೆ’ ಎಂದು ಆರೋಪಿಸಿದ್ದಾರೆ. ಜತೆಗೆ, ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರ ಅಸ್ತಿತ್ವದಲ್ಲಿ ಇರುವವರೆಗೆ ಯಾರಿಗೂ ಭಾರತದ ಒಂದಿಂಚು ಭೂಮಿಯನ್ನೂ ಕಬಳಿಸಲು ಸಾಧ್ಯವಿಲ್ಲ ಎಂದೂ ಶಾ ನುಡಿದಿದ್ದಾರೆ.
ಸತ್ಯ ಮುಚ್ಚಿಹಾಕಬೇಡಿ:“ಘಟನೆ ಬಗ್ಗೆ ಸಂಸತ್‌ನಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೀಡಿರುವ ಹೇಳಿಕೆಯು ಅಪೂರ್ಣವಾಗಿದ್ದು, ಸರ್ಕಾರ ಸತ್ಯವನ್ನು ಮುಚ್ಚಿಡುತ್ತಿದೆ’ ಎಂದು ಕಾಂಗ್ರೆಸ್ ಆರೋಪಿಸಿದೆ. ಅಮಿತ್ ಶಾ ಹೇಳಿಕೆಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ವಕ್ತಾರ ಗೌರವ್ ಗೊಗೋಯಿ, “ರಾಜೀವ್ ಗಾಂಧಿ ಪ್ರತಿಷ್ಠಾನದ ಲೈಸೆನ್ಸ್ ರದ್ದು ಮಾಡಿದ ವಿಚಾರವನ್ನು ಪ್ರಸ್ತಾಪಿಸುತ್ತಾ ಜನರ ಗಮನವನ್ನು ಬೇರೆಡೆಗೆ ಸೆಳೆಯುವುದನ್ನು ಬಿಟ್ಟು, ಸರ್ಕಾರವು ಸತ್ಯವನ್ನು ಹೇಳಬೇಕು’ ಎಂದಿದ್ದಾರೆ.