Advertisement

ಪ್ರವಾಹ ಪೀಡಿತರಿಗೆ ಇನ್ಫೋಸಿಸ್‌ ನೆರವು

05:15 PM Oct 31, 2020 | Suhan S |

ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದಲ್ಲಿ ಪ್ರವಾಹದಿಂದ ತತ್ತರಿಸಿರುವ ಜನರಿಗೆ ಇನ್ಫೋಸಿಸ್‌ ಸಂಸ್ಥೆ ಪರಿಹಾರ ಕಿಟ್‌ಗಳು ಒದಗಿದ್ದು, ರಾಮಕೃಷ್ಣ ಸೇವಾ ಶ್ರಮ-ಭಾರತೀಯ ರೆಡ್‌ ಕ್ರಾಸ್‌ ಸಂಸ್ಥೆ-ರೋಟರಿ ಕ್ಲಬ್‌ ಆಫ್‌ ಮಿಡ್‌ಟೌನ್‌-ವಿಕಾಸ ಅಕಾಡೆಮಿ ನೆರವಿನೊಂದಿಗೆ ಸಂತ್ರಸ್ತರಿಗೆ ಹಂಚಿಕೆ ಮಾಡಲಾಗುತ್ತಿದೆ ಎಂದು ತುಮಕೂರು ಜಿಲ್ಲೆಯ ಪಾವಗಡದ ರಾಮಕೃಷ್ಣ ಸೇವಾಶ್ರಮ ಸ್ವಾಮಿ ವಿವೇಕಾನಂದ ಸಂಘಟಿತ ಗ್ರಾಮಾಂತರ ಆರೋಗ್ಯ ಕೇಂದ್ರದ ಮುಖ್ಯಸ್ಥ ಸ್ವಾಮಿ ಜಪಾನಂದಜಿ ತಿಳಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ ಭೀಕರ ಪ್ರವಾಹ ಸಂಭವಿಸಿ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ಇನ್ಫೋಸಿಸ್‌ ಸಂಸ್ಥೆಯ ಸುಧಾಮೂರ್ತಿ ಅವರು ಕಿಟ್‌ಗಳು ನೀಡುವ ಮೂಲಕ ಸಹಾಯ ಹಸ್ತ ಚಾಚಿದ್ದು, ಅವುಗಳನ್ನು ಪ್ರವಾಹ ಪೀಡಿತರಿಗೆ ತಲುಪಿಸುವ ಕಾರ್ಯವಾಗುತ್ತಿದೆ ಎಂದರು.

ಈಗಾಗಲೇ ರಾಯಚೂರು, ಯಾದಗಿರಿ, ವಿಜಯಪುರ ಸೇರಿ ಮತ್ತಿತರರಕಡೆಗಳಲ್ಲಿ 8,500 ಸಂತ್ರಸ್ತ ಕುಟುಂಬಗಳಿಗೆ ಕಿಟ್‌ ವಿತರಿಸಲಾಗಿದೆ. ಕಲಬುರಗಿ ಜಿಲ್ಲೆಯಲ್ಲಿ ಎರಡು ದಿನಗಳ ಕಾಲ 2,500 ಕುಟುಂಬಗಳಿಗೆ ಹಂಚಿಕೆ ಮಾಡಲಾಗುವುದು. ಜತೆಗೆ ಪಕ್ಕದ ಸೊಲ್ಲಾಪುರ ಜಿಲ್ಲೆಯ 1,500 ಕುಟುಂಬಗಳಿಗೆ ಪರಿಹಾರ ಕಿಟ್‌ ವಿತರಿಸಲಾಗುತ್ತದೆ ಎಂದರು.

ಶನಿವಾರ ಮತ್ತು ರವಿವಾರ ಭೀಮಾ ನದಿ ತೀರದ ಪ್ರವಾಹ ಪೀಡಿತ ಜೇವರ್ಗಿ ಮತ್ತು ಅಫಜಲಪುರ ತಾಲೂಕಿನ ಹಲವಾರು ಗ್ರಾಮಗಳ ತೆರಳಿ ಕಿಟ್‌ ವಿತರಣೆ ಮಾಡುವ ಕಾರ್ಯ ನಡೆಯುತ್ತಿದೆ. ಅರ್ಹ ಸಂತ್ರಸ್ತರಿಗೆ ಕಿಟ್‌ ತಲುಪಬೇಕೆನ್ನುವ ಉದ್ದೇಶದಿಂದ ಜಿಲ್ಲಾಧಿಕಾರಿಗಳು, ತಹಶೀಲ್ದಾರ್‌ ಅವರಿಂದ ಹಿಡಿದು ಪಿಡಿಓ ಅವರನ್ನೂ ಸಂಪರ್ಕಿಸಿ ಗ್ರಾಮಗಳ ಪಟ್ಟಿ ಮತ್ತು ಆಯಾ ಗ್ರಾಮಗಳ ಸಂತ್ರಸ್ತರ ಮಾಹಿತಿ ಸಂಗ್ರಹಿಸಲಾಗಿದೆ. ಒಂದು ಕುಟುಂಬಕ್ಕೆ ಒಂದೂವರೆ ತಿಂಗಳಿಗಾಗುವಷ್ಟು ಕಿಟ್‌ ವಿತರಣೆ ಮಾಡಲಾಗುತ್ತಿದೆ ಎಂದು ವಿವರಿಸಿದರು.

ಪ್ರತಿ ಕಿಟ್‌ನಲ್ಲಿ ಅಕ್ಕಿ, ಬೇಳೆ, ಎಣ್ಣೆ, ಮಸಾಲೆ ವಸ್ತುಗಳ ರೇಷನ್‌, ಬಕೆಟ್‌, ಮಗ್‌, ಚಾಪೆ, ಬೆಡ್‌ಶೀಟ್‌, ಬ್ಲಾಂಕೆಟ್‌, ಟವಲ್‌, ಸಾಬೂನು, ಪೆಸ್ಟ್‌ ಹೀಗೆ ಎಲ್ಲ ಅಗತ್ಯ ವಸ್ತುಗಳು ಕಿಟ್‌ನಲ್ಲಿ ಇರಲಿವೆ. ಮನೆ ಹಾನಿಯಾದವರಿಗೆ ತಕ್ಷಣಕ್ಕೆ ಅನುವು ಮಾಡಿಕೊಡಲು ಟಾರ್ಪಲಿನ್‌ ಸಹ ನೀಡಲಾಗುತ್ತಿದೆ. ಕಿಟ್‌ಗಳ ಹೊತ್ತು ಆರು ಲಾರಿಗಳು ಜಿಲ್ಲೆಗೆ ಆಗಮಿಸಿವೆ ಎಂದು ಅವರು ಮಾಹಿತಿ ನೀಡಿದರು. ಇನ್ಫೊಧೀಸಿಸ್‌ ಸಮರ್ಪಣ ವಿಭಾಗದ ಮಹೇಶ ಮಾತನಾಡಿ, ಪ್ರವಾಹ ಸಂತ್ರಸ್ತರಿಗೆ ನೆರವಿಗೆ ಸುಧಾಮೂರ್ತಿ ಅವರು ದಾವಿಸಿದ್ದಾರೆ. ಜಿಲ್ಲೆಯ ಪ್ರವಾಹ ಪೀಡಿತ ಕಟ್ಟಿಸಂಗಾವಿ, ರದ್ದೇವಾಡಗಿ, ಮಂದರವಾಡ, ಕೂಡಿ, ಕೋನಾ ಹಿಪ್ಪರಗಾ ಮತ್ತು ಹಲವು ಹಳ್ಳಿಗಳಲ್ಲಿ ಕಿಟ್‌ ವಿತರಿಸಲಾಗುವುದು ಎಂದರು.

Advertisement

ಜಿಲ್ಲಾ ರೆಡ್‌ಕ್ರಾಸ್‌ ಅಧ್ಯಕ್ಷ ಅಪ್ಪರಾವ ಅಕ್ಕೋಣಿ, ಕಾರ್ಯದರ್ಶಿ ರವೀಂದ್ರ ಶಾಬಾದಿ, ರೋಟರಿ ಕ್ಲಬ್‌ ಆಫ್‌ ಮಿಡ್‌ಟೌನ್‌ ಅಧ್ಯಕ್ಷೆ ಡಾ|ಸುಧಾ ಹಾಲಕಾಯಿ, ವಿಕಾಸ ಅಕಾಡೆಮಿಯ ಶೇಷಾದ್ರಿ ಕುಲಕರ್ಣಿ, ಅರುಣಕುಮಾರ ಲೋಯಾ, ಭಾಗ್ಯ ಲಕ್ಷ್ಮೀ ಮಲ್ಲಿಕಾರ್ಜುನ ಬಿರಾದಾರ, ಧನರಾಜ ಭಾಸಗಿ, ಸಂದ್ಯಾರಾಜ ಸ್ಯಾಮುವೆಲ್‌ ಸುದ್ದಿಗೋಷ್ಠಿಯಲ್ಲಿದ್ದರು.

ಉಪಚುನಾವಣೆ ನಂತರವಾದರೂ ಸ್ಥಳಕ್ಕೆ ಬರಲಿ :  ಪ್ರವಾಹದಿಂದ ಜನರು ತತ್ತರಿಸಿ ಹೋಗಿದ್ದರೆ ಇತ್ತ, ಹಲವು ರಾಜಕೀಯ ನಾಯಕರು, ಸಿನಿಮಾದವರು ಉಪ ಚುನಾವಣೆಯ ಗುಂಗಿನಲ್ಲಿ ಇದ್ದಾರೆ. ರೋಡ್‌ ಶೋ, ಪ್ರಚಾರದಲ್ಲಿ ತೊಡಗಿಸಿಕೊಂಡು ಹಣ ವ್ಯರ್ಥ ಮಾಡುತ್ತಿದ್ದಾರೆ. ಅದರ ಬದಲಿಗೆ ಪ್ರವಾಹ ಸಂತ್ರಸ್ತರಿಗೆ ನೆರವಾಗಬೇಕಿತ್ತು ಎಂದು ರಾಮಕೃಷ್ಣ ಸೇವಾಶ್ರಮದ ಮುಖ್ಯಸ್ಥ ಸ್ವಾಮಿ ಜಪಾನಂದಜಿ ಬೇಸರ ವ್ಯಕ್ತಪಡಿಸಿದರು. ಒಬ್ಬ ಸುಧಾಮೂರ್ತಿ ಅವರು ಇಷ್ಟೊಂದು ಜನರಿಗೆ ಸಹಾಯ ಮಾಡಲು ಮುಂದೆದಿದ್ದಾರೆ. ಉಳಿದವರು ಸಹ ಸಂತ್ರಸ್ತರ ನೆರವಿಗೆ ಬಂದು ಧೈರ್ಯ, ಆತ್ಮಸ್ಥೈರ್ಯ ತುಂಬಬಹುದಿತ್ತು. ರಾಜಕೀಯ-ಸಿನಿಮಾದವರು ಉಪ ಚುನಾವಣೆ ನಂತರವಾದರೂ ಬರಲಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು

Advertisement

Udayavani is now on Telegram. Click here to join our channel and stay updated with the latest news.

Next