Advertisement

ಇನ್ಫೋಸಿಸ್‌ ಶುಭಾರಂಭ; ಉತ್ತರದ ಐಟಿ ಕನಸಿಗೆ ಬಲ

06:08 PM Aug 02, 2022 | Team Udayavani |

ಹುಬ್ಬಳ್ಳಿ: ಇನ್ಫೋಸಿಸ್‌ನ ಹುಬ್ಬಳ್ಳಿ ಘಟಕ ಸೋಮವಾರದಿಂದ ಕಾರ್ಯಾರಂಭ ಮಾಡುವ ಮೂಲಕ ಉತ್ತರ ಕರ್ನಾಟಕದ ಐಟಿ ಉದ್ಯೋಗಿಗಳು, ಉದ್ಯೋಗಾಕಾಂಕ್ಷಿಗಳ ಹಲವು ವರ್ಷಗಳ ನಿರೀಕ್ಷೆಗೆ ಫಲ ದೊರೆತಂತಾಗಿದೆ. ಘಟಕ ಆರಂಭದ ಮೊದಲ ದಿನವೇ ಅನೇಕ ಉದ್ಯೋಗಿಗಳು ಕೆಲಸಕ್ಕೆ ಹಾಜರಾದರು.ಇನ್ನೊಂದೆಡೆ ಸಹಾಯಕ ಸಿಬ್ಬಂದಿ ನೇಮಕ ಸಂದರ್ಶನ ಪ್ರಕ್ರಿಯೆಯೂ ನಡೆಯಿತು.

Advertisement

ಇನ್ಫೋಸಿಸ್‌ ಹುಬ್ಬಳ್ಳಿಯಲ್ಲಿ ಕಾರ್ಯಾರಂಭ ನಿಟ್ಟಿನಲ್ಲಿ ಗೋಕುಲ ರಸ್ತೆಯ ವಿಮಾನ ನಿಲ್ದಾಣಕ್ಕೆ ಹೊಂದಿಕೊಂಡಂತೆ ಸುಮಾರು 17.42 ಹೆಕ್ಟೇರ್‌ ಪ್ರದೇಶದಲ್ಲಿ ಕಟ್ಟಡ ನಿರ್ಮಾಣ ಕೈಗೊಂಡಿತ್ತು. 2018ರಲ್ಲಿ ಕಟ್ಟಡ ಕಾಮಗಾರಿ ಪೂರ್ಣಗೊಂಡಿದ್ದರೂ ಘಟಕ ಆರಂಭ ಆಗಿರಲಿಲ್ಲ. ಕೋವಿಡ್‌ ಇನ್ನಿತರ ಕಾರಣಗಳಿಂದ ಮುಂದೂಡಿಕೆ ಆಗುತ್ತಲೇ ಬಂದಿತ್ತು. ಇದೀಗ ಇನ್ಫೋಸಿಸ್‌ ಘಟಕ ಕಾರ್ಯಾರಂಭದ ಮೂಲಕ ಹಲವರ ನಿರೀಕ್ಷೆ ಈಡೇರಿದೆ. ಆದರೆ, ಕಂಪೆನಿ ಇದುವರೆಗೂ ಸ್ಪಷ್ಟ ಹಾಗೂ ಅಧಿಕೃತ ರೀತಿಯಲ್ಲಿ ಹುಬ್ಬಳ್ಳಿ ಘಟಕದ ಆರಂಭ ಬಗ್ಗೆ ಘೋಷಣೆ ಮಾಡಿಲ್ಲ.

ಹುಬ್ಬಳ್ಳಿಯಲ್ಲಿ ಇನ್ಫೋಸಿಸ್‌ ಘಟಕ ಆರಂಭಿಸಬೇಕೆಂದು ಒತ್ತಾಯಿಸಿ ಸ್ಟಾರ್ಟ್‌ ಇನ್ಫೋಸಿಸ್‌ ಹುಬ್ಬಳ್ಳಿ ವೃತ್ತಿಪರರ ತಂಡದಿಂದ ಆನ್‌ ಲೈನ್‌ ಅಭಿಯಾನ ನಡೆಸಲಾಗಿತ್ತು. ಹೆಚ್ಚಿನ ಸಂಖ್ಯೆಯ ನೆಟ್ಟಿಗರು ಬೆಂಬಲ ಸೂಚಿಸಿದ್ದರು. ನಂತರ ಈ ತಂಡದವರು ಮುಖ್ಯಮಂತ್ರಿಯವರಿಗೆ ಸುಮಾರು 10 ಸಾವಿರ ಪತ್ರ ಚಳವಳಿ ಆರಂಭಿಸಿದ್ದರು.

ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಅಲ್ಲದೆ, ಮಹಾಪೌರ-ಉಪ ಮಹಾಪೌರರು ಸಹ ಬೆಂಬಲ ಸೂಚಿಸಿದ್ದರು. ಆ.1ರಿಂದ ಇನ್ಫೋಸಿಸ್‌ ಹುಬ್ಬಳ್ಳಿಯಲ್ಲಿ ಕಾರ್ಯಾರಂಭ ಮಾಡಲಿದೆ, ಈ ಕುರಿತಾಗಿ ಕೆಲ ಉದ್ಯೋಗಿಗಳಿಗೆ ಇ-ಮೇಲ್‌ ಸಂದೇಶ ಹೋಗಿದೆ ಎಂದು ಹೇಳಲಾಗಿತ್ತು. ನಿರೀಕ್ಷೆಯಂತೆ ಸೋಮವಾರ ಬೆಳಗ್ಗೆ ಇನ್ಫೋಸಿಸ್‌ ಘಟಕ ಆರಂಭಗೊಂಡಿತು. ಬೆಳಗ್ಗೆ 9 ಗಂಟೆಗೆ ಮೊದಲೇ ಸೂಚಿಸಿದ ಉದ್ಯೋಗಿಗಳು ಕೇಂದ್ರಕ್ಕೆ ಆಗಮಿಸಲು ಆರಂಭಿಸಿದರು. ಸೋಮವಾರ
ಬೆಳಗ್ಗೆ ಸುಮಾರು 45ಕ್ಕೂ ಹೆಚ್ಚು ಉದ್ಯೋಗಿಗಳು ಕೆಲಸಕ್ಕೆ ಹಾಜರಾದರು ಎಂದು ಹೇಳಲಾಗುತ್ತಿದೆ.

ನೇಮಕ ಸಂದರ್ಶನ: ಇನ್ಫೋಸಿಸ್‌ನ ಒಂದು ದ್ವಾರದ ಮೂಲಕ ಉದ್ಯೋಗಿಗಳು ಒಳ ಪ್ರವೇಶಿಸಿದರು. ಭದ್ರತಾ ಸಿಬ್ಬಂದಿ ಗುರುತಿನ ಚೀಟಿ, ಕಚೇರಿಗೆ ಆಗಮಿಸುವಂತೆ ಕಂಪೆನಿಯಿಂದ ಬಂದ ಸಂದೇಶ ಪರಿಶೀಲಿಸಿ ಒಳಬಿಡುತ್ತಿದ್ದು ಕಂಡು ಬಂದಿತು. ಕಚೇರಿಯ ಮತ್ತೂಂದು ದ್ವಾರದಲ್ಲಿ ಸಹಾಯಕ ಸಿಬ್ಬಂದಿ ನೇಮಕಕ್ಕೆ ಸಂದರ್ಶನ ಕರೆಯಲಾಗಿತ್ತು. ಅನೇಕ ಉದ್ಯೋಗಾಕಾಂಕ್ಷಿಗಳು ಸರದಿಯಲ್ಲಿ ನಿಂತು ಸಂದರ್ಶನ ಪ್ರಕ್ರಿಯೆಗೆ ತೆರಳಿದರು.

Advertisement

ಉದ್ಯೋಗಕ್ಕೆ ರೈತರ ಮನವಿ
ಇನ್ಫೋಸಿಸ್‌ಗೆ ಭೂಮಿ ನೀಡಿದ ಸುಮಾರು 14 ರೈತರು ಈ ಹಿಂದೆ ಮಾಡಿಕೊಂಡ ಒಪ್ಪಂದದಂತೆ ತಮ್ಮ ಮನೆಯಲ್ಲಿ ಒಬ್ಬರಿಗೆ ಇನ್ಫೋಸಿಸ್‌ನಲ್ಲಿ ನೌಕರಿ ನೀಡಬೇಕೆಂದು ಮನವಿ ಮಾಡಿದರು. ರೈತರು ಆಗಮಿಸಿ ಇನ್ಫೋಸಿಸ್‌ ಕಚೇರಿ ಹೊರಗೆ ನಿಂತಿದ್ದರು. ನಂತರ ಭದ್ರತಾ ಸಿಬ್ಬಂದಿ ಮೂಲಕ ಮಾಹಿತಿ ತಿಳಿಸಿದಾಗ ಇಬ್ಬರು ರೈತರನ್ನು ಚರ್ಚೆಗೆ ಕಚೇರಿ ಒಳಗೆ ಆಹ್ವಾನಿಸಲಾಯಿತು.

ಇನ್ಫೋಸಿಸ್‌ ಅಧಿಕಾರಿಗಳೊಂದಿಗೆ ಚರ್ಚಿಸಿ ಹೊರಬಂದ ರೈತರಾದ ನಾಗೇಂದ್ರ ಪೂಜಾರ ಮತ್ತು ಕೃಷ್ಣ ಅವರು ಅಲ್ಲಿನ ಮಾನವ ಸಂಪನ್ಮೂಲ ವಿಭಾಗದ ಸಂದೀಪ ಅವರೊಂದಿಗೆ ಚರ್ಚಿಸಿದೆವು. ಆರಂಭದಲ್ಲಿ ಆ ರೀತಿ ನೌಕರಿ ನೀಡಿಕೆ ಅಸಾಧ್ಯ ಎಂದರಾದರೂ, ದಾಖಲೆಯಲ್ಲಿ ಲಿಖೀತವಾಗಿ ಇರುವ ಮಾಹಿತಿ ತೋರಿಸಿದಾಗ ನಮ್ಮ ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಕೇಳಿದರಲ್ಲದೆ, ವಿದ್ಯಾರ್ಹತೆಗೆ ತಕ್ಕಂತೆ ನೌಕರಿ ನೀಡಲು ಪರಿಶೀಲಿಸುವುದಾಗಿ ಭರವಸೆ ನೀಡಿದರು. ಕಂಪೆನಿಯ ಇ-ಮೇಲ್‌ ವಿಳಾಸ ನೀಡಿ ಇದಕ್ಕೆ ಉದ್ಯೋಗ ಪಡೆಯಲು ಇಚ್ಛಿಸುವವರ ವೈಯಕ್ತಿಕ ಪರಿಚಯ, ವಿದ್ಯಾರ್ಹತೆ ಕಳುಹಿಸಿ ಎಂದು ಹೇಳಿದ್ದಾರೆ ಎಂದರು.

1,500 ಉದ್ಯೋಗಿಗಳು ಬರುವವರೆಗೂ ಅಭಿಯಾನ
ಇನ್ಫೋಸಿಸ್‌ ಘಟಕ ಆರಂಭದ ಹಿನ್ನೆಲೆಯಲ್ಲಿ ಸ್ಟಾರ್ಟ್‌ ಇನ್ಫೋಸಿಸ್‌ ಹುಬ್ಬಳ್ಳಿ ವೃತ್ತಿಪರ ತಂಡದವರು ಕಚೇರಿ ಬಳಿ ಆಗಮಿಸಿ ಉದ್ಯೋಗಿಗಳಿಗೆ ಶುಭ ಕೋರಿದರಲ್ಲದೆ, ಕೇಕ್‌ ಕತ್ತರಿಸಿ ಸಿಹಿ ಹಂಚಿ ಸಂಭ್ರಮಿಸಿದರು.ಎನ್‌.ಎಸ್‌. ಇನ್ಫೋಟೆಕ್‌ ಸಂಸ್ಥಾಪಕ ಸಂತೋಷ ಹುರಳಿಕೊಪ್ಪಿ ಮಾತನಾಡಿ, ಉತ್ತರ ಕರ್ನಾಟಕ ಮಟ್ಟಿಗೆ ಇದು ಐತಿಹಾಸಿಕ ದಿನ. ಉತ್ತರದಲ್ಲಿ ಅವಕಾಶ ಇಲ್ಲವೆಂದು ಇಲ್ಲಿನ ಅನೇಕ ಐಟಿ ಪ್ರತಿಭೆಗಳು ವಲಸೆ ಹೋಗುವಂತಾಗಿತ್ತು.

ಇದೀಗ ಇನ್ಫೋಸಿಸ್‌ ಆರಂಭದ ಮೂಲಕ ಯುವಕರು ಮೆಟ್ರೋ ನಗರಗಳಿಗೆ ಹೋಗುವುದನ್ನು ತಡೆದಂತಾಗಲಿದೆ ಎಂದರು.ಸ್ಟಾರ್ಟ್‌ ಇನ್ಫೋಸಿಸ್‌ ಹುಬ್ಬಳ್ಳಿಯ ರೂವಾರಿ ಸಂತೋಷ ನರಗುಂದ ಮಾತನಾಡಿ, ಇನ್ಫೋಸಿಸ್‌ ಹುಬ್ಬಳ್ಳಿಯಲ್ಲಿ ಕಾರ್ಯಾರಂಭಕ್ಕೆ ಕೈಗೊಂಡ ಹೋರಾಟಕ್ಕೆ ಫಲ ಸಿಕ್ಕಂತಾಗಿದೆ. ಉತ್ತರ ಕರ್ನಾಟಕದ ಜನತೆಗೆ ಇದೊಂದು ಮಹತ್ವದ ಕೊಡುಗೆಯಾಗಿದೆ. ಘಟಕದಲ್ಲಿ ಸುಮಾರು 1,500 ಉದ್ಯೋಗಿಗಳು ಬರುವವರೆಗೂ ಅಭಿಯಾನ ಮುಂದುವರಿಸಲಾಗುವುದು ಎಂದು ಹೇಳಿದರು.ಐಬಿಎಂಆರ್‌ ಕಾಲೇಜು ನಿರ್ದೇಶಕ ರಿಯಾಜ್‌ ಬಸರಿ, ಪ್ರೊ| ಪ್ರಸಾದ ರೂಢಗಿ, ಶಾಮ ನರಗುಂದ, ವಿಜಯ ಸಾಯಿ, ಆರ್‌.ಜೆ. ರಾಶಿದ, ಒಟ್ಟಿಲಿ ಅನುºಕುಮಾರ, ಪ್ರೊ| ಶಿವಯೋಗಿ ಹುಬ್ಳಿಕರ, ನಚಿಕೇತ ಜಮಾದರ, ಶಿವಾನಂದ ಬೆಳವಟಗಿ, ರಾಮಪ್ರಸಾದ ದೇಶಪಾಂಡೆ, ಪ್ರಕಾಶಸಿಂಗ್‌, ಆನಂದ ಬಸವಾ, ಯಶ ರಜಪೂತ, ಶ್ರೀರಾಮ ರಾಯ್ಕರ್‌, ರೋಮಾ ಹಿರೇಮಠ, ಉದಯ ಪೆಂಡ್ಸೆ, ಭೀಮಸಿಂಗ ಇನ್ನಿತರರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next