Advertisement

ಕೃಷಿ ಸಖಿಯರಿಂದ ರೈತರಿಗೆ ಮಾಹಿತಿ; ಯೋಜನೆ ಕುರಿತು ಅರಿವು

01:04 PM Sep 09, 2022 | Team Udayavani |

ದೊಡ್ಡಬಳ್ಳಾಪುರ: ಕೃಷಿ ಮತ್ತು ತೋಟಗಾರಿಕೆಗೆ ಸಂಬಂಧಪಟ್ಟ ಮಾಹಿತಿಗಳನ್ನು ಸಕಾಲದಲ್ಲಿ ರೈತರಿಗೆ ತಲುಪಿಸುವಂತ ಮಾರ್ಗಗಳ ಕುರಿತು ಕೃಷಿ ಸಖಿಯರ ಸಾಮರ್ಥ್ಯ ಹೆಚ್ಚಳಕ್ಕೆ ಸಂಜೀವಿನಿ ತರಬೇತಿ ಶಿಬಿರ ಪೂರಕವಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ರೇವಣಪ್ಪ ಹೇಳಿದರು.

Advertisement

ತಾಲೂಕಿನ ಹಾಡೋನಹಳ್ಳಿಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ನಡೆದ ಕೃಷಿ ಜೀವನೋಪಾಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳಾದ 30 ಕೃಷಿ ಸಖಿಯರಿಗೆ ಮೊದಲನೇ ಹಂತದ 6 ದಿನಗಳ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿ, ಒಂದು ಗ್ರಾಮ ಪಂಚಾಯಿತಿಗೆ ಒಬ್ಬ ಕೃಷಿ ಸಖೀಯರಂತೆ ನೇಮಿಸಲಾಗಿದೆ. ಹಳ್ಳಿಗಳಲ್ಲಿ ಮನೆ ಮನೆಗೂ ತೆರಳಿ ಕೃಷಿ ಮತ್ತು ಪಶು ವಲಯಕ್ಕೆ ಸಂಬಂಧಿಸಿದಂತೆ ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಪಶು ಸಂಗೋಪನಾ ಇಲಾಖೆಯಿಂದ ಜಾರಿಗೊಳಿಸಲಾಗುವ ಯೋಜನೆಗಳು, ಅವುಗಳನ್ನು ಸದುಪಯೋಗ ಮಾಡಿಕೊಳ್ಳುವ ಕುರಿತು ಸಲಹೆಗಳನ್ನು ಕೃಷಿ ಸಖಿಯರು ನೀಡಲಿದ್ದಾರೆ. ಪ್ರತಿ ಪಂಚಾಯಿತಿ ವ್ಯಾಪ್ತಿ  ಯಲ್ಲಿ ಐವರು ಸಖಿಯರನ್ನು ನೇಮಕ ಮಾಡಲಾಗುತ್ತದೆ.

ಇವರು ಸಮುದಾಯ ಸಂಪನ್ಮೂಲ ವ್ಯಕ್ತಿಗಳ ರೀತಿಯಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ. ಈಗಾಗಲೇ ಗ್ರಾಮೀಣ ಸ್ವಸಹಾಯ ಗುಂಪುಗಳ ಸಹಭಾಗಿತ್ವದಲ್ಲಿ ಉದ್ಯೋಗ ಸಖಿಯರು ಯೋಜನೆ ಅಸ್ಥಿತ್ವದಲ್ಲಿದ್ದು, ಇದೀಗ ಮತ್ತಷ್ಟು ಸಖಿಯರಿಗೆ ಹೊಸ ಶಕ್ತಿ ತುಂಬುವ ಕಾರ್ಯವನ್ನು ಸರ್ಕಾರ ಮಾಡುತ್ತಿದೆ ಎಂದು ಹೇಳಿದರು.

ವಿಷಯಾಧಾರಿತ ತರಬೇತಿ: ರಾಜ್ಯದ ಎಲ್ಲೆಡೆ ಏಕಕಾಲದಲ್ಲಿ ಮೊದಲನೇ ಹಂತದಲ್ಲಿ 6 ದಿನಗಳ ತರಬೇತಿ ನಡೆಯಲಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ, ಎನ್‌ಆರ್‌ಎಲ್‌ಎಂ-ಸಂಜೀವಿನಿ ಯೋಜನೆಯಡಿ ಪ್ರತಿ ಗ್ರಾಮ ಪಂಚಾಯಿತಿಗೆ ಒಬ್ಬರಂತೆ ಒಟ್ಟು 101 ಕೃಷಿ ಸಖಿಯರನ್ನು ಆಯ್ಕೆ ಮಾಡಲಾಗಿದೆ.

ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಾಲಯದ ಪ್ರಮುಖ ಕಾರ್ಯಕ್ರಮಗಳಲ್ಲೊಂದಾದ ದೀನ್‌ ದಯಾಳ್‌ ಅಂತ್ಯೋದಯ ಯೋಜನೆ- ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದ ಕಾರ್ಯ ಕ್ರಮಗಳನ್ನು ರಾಜ್ಯ ಸರ್ಕಾರದ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಗೆ ಒಳಪಡುವ ‘ಸಂಜೀವಿನಿ-ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನಾ ಸಂಸ್ಥೆ’ ಮೂಲಕ ಅನುಷ್ಠಾನಗೊಳಿಸುತ್ತಿದೆ. ಸಣ್ಣ ಮತ್ತು ಅತಿ ಸಣ್ಣ ಮಹಿಳಾ ರೈತ ಕುಟುಂಬಗಳಿಗೆ ಅಗತ್ಯವಿರುವ ವಿಸ್ತರಣಾ ಸೇವೆಗಳು, ತಾಂತ್ರಿಕ ಜ್ಞಾನ ಮತ್ತು ಮಾರುಕಟ್ಟೆ ವ್ಯವಸ್ಥೆಯನ್ನು ಕಲ್ಪಿಸುವ ನಿಟ್ಟಿನಲ್ಲಿ ಕೃಷಿ ಜೀವನೋಪಾಯ ಸಮೂಹ ಸಂಪನ್ಮೂಲ ವ್ಯಕ್ತಿಗಳನ್ನು ಆಯ್ಕೆ ಮಾಡಿ, ಅವರ ಸಾಮರ್ಥ್ಯಾವೃದ್ಧಿ ಮತ್ತು ತಾಂತ್ರಿಕ ಜ್ಞಾನ ಹೆಚ್ಚಿಸಲು ವಿವಿಧ ವಿಷಯಾಧಾರಿತ ತರಬೇತಿಗಳನ್ನು ನೀಡಿ, ರೈತರ ಮನೆ ಬಾಗಿಲಿಗೆ ವಿಸ್ತರಣಾ ಸೇವೆಗಳನ್ನು ವಿಸ್ತರಿಸಲು ಸಂಜೀವಿನಿ ಸಂಸ್ಥೆ ಅಗತ್ಯ ಕಾರ್ಯತಂತ್ರ ರೂಪಿಸಲು ಕ್ರಮ ಕೈಗೊಂಡಿದೆ ಎಂದು ತಿಳಿಸಿದರು.

Advertisement

ಜಮೀನಿನಲ್ಲಿ ಮಣ್ಣಿನ ಪರೀಕ್ಷೆ: ರೈತರು ತಮ್ಮ ಜಮೀನುಗಳ ಬೆಳೆ ಬಗ್ಗೆ ತಿಳಿಯಲು ರೈತರ ಹೊಲಗಳಲ್ಲಿ ಮಣ್ಣಿನ ಪರೀಕ್ಷೆ, ಕೀಟನಾಶಕ, ರಸಗೊಬ್ಬರ ಪ್ರಮಾಣ ಬಗ್ಗೆ ನೇರವಾಗಿ ರೈತರ ಜಮೀನುಗಳಿಗೆ ಬಂದು ಪರೀಕ್ಷೆ ಮಾಡುತ್ತದೆ. ಜಮೀನುಗಳಲ್ಲಿ ಉತ್ಪಾದನೆ ಮತ್ತು ಉತ್ಪಾದಕತೆ ಸವೆತ, ಅತಿಯಾದ ಬೆಳೆ ಬೆಳವಣಿಗೆ, ಕೀಟ ಮತ್ತು ರೋಗದಂತಹ ನೈಸರ್ಗಿಕ ವಿಪತ್ತುಗಳಿಗೆ ಪರಿಹಾರ ಒದಗಿಸುವುದರ ಬಗ್ಗೆ ತಿಳಿಸುವ ಸಂಪೂರ್ಣ ಜವಾಬ್ದಾರಿ ಕೃಷಿ ಸಖಿಯರದ್ದಾಗಿರುತ್ತದೆ ಎಂದು ಹೇಳಿದರು. ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಮಲ್ಲಿಕಾರ್ಜು ನಗೌಡ, ಜಿಪಂ ಮಾಜಿ ಸದಸ್ಯ ಅಪ್ಪಯ್ಯಣ್ಣ, ಜಿಪಂ ಯೋಜನಾ ನಿರ್ದೇಶಕ ವಿಠಲ್‌ ಕಾವಲೇ ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಗ್ರಾಮ ಪಂಚಾಯಿತಿಗೆ ಕೃಷಿ ಸಖಿಯರಂತೆ ನೇಮಕ
● ರೈತರ ಮನೆಗೆ ತೆರಳಿ ಕೃಷಿ, ಪಶು, ತೋಟಗಾರಿಕೆ ಇಲಾಖೆಯ ಯೋಜನೆ ಕುರಿತು ಅರಿವು.
● ರಾಜ್ಯದ ಎಲ್ಲೆಡೆ ಏಕಕಾಲದಲ್ಲಿ ಮೊದಲನೇ ಹಂತದಲ್ಲಿ 6 ದಿನಗಳ ತರಬೇತಿ
● ಎನ್‌ಆರ್‌ಎಲ್‌ಎಂ-ಸಂಜೀವಿನಿ ಯೋಜನೆಯಡಿ 101 ಕೃಷಿ ಸಖಿಯರ ಆಯ್ಕೆ
● ತಾಂತ್ರಿಕ ಜ್ಞಾನ ಹೆಚ್ಚಿಸಲು ವಿವಿಧ ವಿಷಯಾಧಾರಿತ ತರಬೇತಿ
● ರೈತರ ಮನೆ ಬಾಗಿಲಿಗೆ ಸೇವೆ ವಿಸ್ತರಿಸಲು ಕಾರ್ಯತಂತ್ರ ರೂಪಿಸಲು ಕ್ರಮ

Advertisement

Udayavani is now on Telegram. Click here to join our channel and stay updated with the latest news.

Next