ಬೆಂಗಳೂರು: ನೀವು ಚಿಟ್ಟೆ ಪ್ರಿಯರೇ, ನಿಮ್ಮ ಸುತ್ತ ಹಾರಾಡುವ ಚಿಟ್ಟೆಗಳ ಬಗ್ಗೆ ಹೆಚ್ಚಿನ ಮಾಹಿತಿ ಬೇಕೆ? ಹಾಗಿದ್ದರೆ ಮೊಬೈಲ್‌ನಿಂದ ಒಂದು ಪೋಟೊ ಕ್ಲಿಕ್ಕಿಸಿ ಅಪ್‌ಲೋಡ್ ಮಾಡಿದರೆ ಸಾಕು, ಆ ಚಿಟ್ಟೆಯ ಸಂಪೂರ್ಣ ಮಾಹಿತಿ ಕ್ಷಣ ಮಾತ್ರದಲ್ಲಿ ಲಭ್ಯ.
ಇಂತಹದೊಂದು ವಿನೂತನ ಆ್ಯಪ್ ಹಾಗೂ ಅಂತರ್ಜಾಲ ತಾಣವನ್ನು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಪರಿಸರ ವಿಜ್ಞಾನ ಹಾಗೂ ಸಂರಕ್ಷಣೆ ಅಧ್ಯಯನ ವಿಭಾಗದ ಐಬಿಐಎನ್ ಎಂಬ ತಂಡ ಸಿದ್ಧಪಡಿಸಿದೆ. ಈ ಆ್ಯಪ್‌ಗೆ “ಪತಂಗ ಸೂಚಕ’ ಎಂಬ ಹೆಸರನ್ನಿಟ್ಟಿದ್ದು, ಯಾವುದೇ ದೊಡ್ಡ ತಂತ್ರಜ್ಞಾನ ಬಳಸದೇ, ಪರಿಣಿತರ ಹಾಗೂ ಜೈವಿಕ ವಿಜ್ಞಾನಿಗಳ ಸಹಕಾರವಿಲ್ಲದೇ ಕ್ಷಣ ಮಾತ್ರದಲ್ಲಿಯೇ ಚಿಟ್ಟೆ ಹಾಗೂ ಪತಂಗಗಳ ಮಾಹಿತಿ ತಿಳಿಯಬಹುದು.
800 ಚಿಟ್ಟೆಗಳು ಹಾಗೂ 500 ಪತಂಗಗಳ ಪತ್ತೆ ಹಚ್ಚುವ ಸಾಮರ್ಥ್ಯವನ್ನು ಈ ಆ್ಯಪ್ ಹೊಂದಿದೆ. ಕೃತಕಬುದ್ಧಿಮತ್ತೆ (ಆರ್ಟಿಫೀಶಿಯಲ್ ಇಂಟಲಿಜನ್ಸ್) ತಂತ್ರಜ್ಞಾನದೊಂದಿಗೆ ಈ ಆ್ಯಪ್ ಸಿದ್ಧಪಡಿಸಲಾಗಿದೆ. ಚಿಟ್ಟೆಗಳ ಮಾಹಿತಿಗಾಗಿ ಭಾರತೀಯ ಜೈವಿಕ ಸಂಪನ್ಮೂಲ ಮಾಹಿತಿ ಜಾಲದ (ಐಬಿಐಎನ್) ಸಹಕಾರ ಪಡೆಯಲಾಗಿದೆ. ಐಬಿಐಎನ್‌ನಲ್ಲಿ ದೇಶದಾದ್ಯಂತ ಕಳೆದ ಎರಡು ದಶಕಗಳಿಂದಲೂ ಚಿಟ್ಟೆಗಳ ಬಗ್ಗೆ ಅಧ್ಯಯನ ನಡೆಸುತ್ತಿರುವ ವಿಜ್ಞಾನಿಗಳು, ಸಂಶೋಧನಾ ವಿದ್ಯಾರ್ಥಿಗಳು ನೀಡಿರುವ ಮಾಹಿತಿ ಲಭ್ಯವಿದ್ದು, ಅದರ ದತ್ತಾಂಶ ಸಹಾಯದಿಂದ ಚಿಟ್ಟೆಗಳನ್ನು ಪತ್ತೆ ಮಾಡಲಿದೆ ಈ ಆ್ಯಪ್. ತಂತ್ರಾಂಶವು. ಜತೆಗೆ ಅಂತರ್ಜಾಲದಿಂದಲೂ ಸಾಕಷ್ಟು ಮಾಹಿತಿ ಕ್ರೋಡೀಕರಿಸಲಾಗಿದೆ ಎಂದು ಸಂಶೋಧಕರು ತಿಳಿಸಿದರು.
ಆ್ಯಪ್ ಸಿದ್ಧಪಡಿಸುವಾಗ ಒಂದು ಚಿಟ್ಟೆಯ 50ಕ್ಕೂ ಹೆಚ್ಚು ಫೋಟೊಗಳನ್ನು ಅಳವಡಿಸಿದ್ದು, 1.70 ಲಕ್ಷಕ್ಕಿಂತಲೂ ಹೆಚ್ಚು ಫೋಟೊಗಳ ದತ್ತಾಂಶ ಸಂಗ್ರಹವಿದೆ. ಹೀಗಾಗಿ, ಚಿಟ್ಟೆಯ ಬಣ್ಣ ಬದಲಾಗಿದ್ದರೂ, ರೆಕ್ಕೆ ತುಂಡಾಗಿದ್ದರೂ, ಯಾವುದೇ ಕೋನದಿಂದ ಪೋಟೊ ಹಿಡಿದು ಅಪ್‌ಲೋಡ್ ಮಾಡಿದರೂ ಸುಲಭವಾಗಿ ಪತ್ತೆ ಹಚ್ಚಿ ಮಾಹಿತಿ ನೀಡಲಿದೆ. ವೆಬ್ ಸೈಟ್ ಇಲ್ಲವೇ ಆ್ಯಪ್‌ನಲ್ಲಿ ಚಿಟ್ಟೆ ಅಥವಾ ಪತಂಗದ ಪೋಟೊ ಅಪ್‌ಲೋಡ್ ಮಾಡಿದರೆ ಎರಡು ಸೆಕೆಂಡ್ ನಲ್ಲಿ ಮಾಹಿತಿ ತಿಳಿಸಲಿದೆ ಎಂದು ತಂಡದ ಸಂಯೋಜಕ ವಿಜ್ಞಾನಿ ಕೆ.ಎನ್.ಗಣೇಶಯ್ಯ ತಿಳಿಸಿದರು. ಚಿಟ್ಟೆಗಳ ಕುರಿತು ಸಂಶೋಧನೆ ನಡೆಸುವರಿಗೂ ಈ ಆ್ಯಪ್ ಸಹಕಾರಿಯಾಗಲಿದೆ. ಭಾರತದಲ್ಲಿ ಒಟ್ಟು 1600 ಜಾತಿಯ ಚಿಟ್ಟೆಗಳು ಹಾಗೂ 800 ಜಾತಿಯ ಪತಂಗಗಳಿವೆ. ಸದ್ಯ 800 ಚಿಟ್ಟೆಗಳು ಹಾಗೂ 500 ಕೀಟಗಳ ಮಾಹಿತಿ ಆ್ಯಪ್‌ನಲ್ಲಿ ಲಭ್ಯವಿದೆ. ಮುಂದಿನ ದಿನಗಳಲ್ಲಿ ಉಳಿದವುಗಳ ಮಾಹಿತಿ ಸೇರಿಸಲು ತಂಡವು ಮುಂದಾಗಿದೆ.
-ಜಯಪ್ರಕಾಶ್ ಬಿರಾದಾರ್