ಶನಿವಾರಸಂತೆ: ವಿದ್ಯಾರ್ಥಿಗಳು ಭಾವನಾತ್ಮಕ, ಸ್ವಾಭಿಮಾನ ಮೊದಲಾದ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳುವ ಮೂಲಕ ಸಮಾಜದಲ್ಲಿ ಉತ್ತಮ ನಾಗರಿಕರಾಗಿ ಎಂದು ಸೋಮವಾರಪೇಟೆ ವೃತ್ತ ನಿರೀಕ್ಷಕ ನಂಜುಂಡೇ ಗೌಡ ಕರೆ ನೀಡಿದರು.
ಅವರು ಸ್ಥಳೀಯ ಭಾರತಿ ಪ.ಪೂ.ಕಾಲೇಜು ಸಭಾಂಗಣದಲ್ಲಿ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗಾಗಿ ಲೈಂಗಿಕ ಕಿರುಕುಳ, ಮದ್ಯಪಾನ, ಮಾದಕ ದೃವ್ಯ ಸೇವನೆ, ದುಶ್ಚಟಗಳು ರ್ಯಾಗಿಂಗ್ ಮುಂತಾದ ಸಮಾಜ ಪಿಡುಗು ಸಮಸ್ಯೆಗಳ ಕುರಿತು ಹಮ್ಮಿಕೊಂಡಿದ್ದ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಇಂದು ಹೆಣ್ಣು ಮಕ್ಕಳ ಮೇಲೆ ನಿರಂತವಾಗಿ ಆಗುತ್ತಿರುವ ಲೈಂಗಿಕ ದೌರ್ಜನ್ಯ, ಅತ್ಯಾಚಾರ ಮುಂತಾದ ಪ್ರಕರಣಗಳಿಗೆ ಒಂದು ರೀತಿಯಲ್ಲಿ ಪೋಷಕರು ಹಾಗೂ ಸಾರ್ವಜನಿಕರೆ ಕಾರಣರಾಗುತ್ತಿದ್ದು ಇಂತಹ ಪ್ರಕರಣಗÙನ್ನು ನಿಯಂತ್ರಣಗೊಳಿಸುವ ನಿಟ್ಟಿನಲ್ಲಿ ಹೆತ್ತವರು ಮತ್ತು ಸಾರ್ವಜನಿಕರು ಕಾನೂನು ಮತ್ತು ಪೊಲೀಸರೊಂದಿಗೆ ಸಹಕರಿಸಬೇಕಾಗಿದೆ ಎಂದರು. ಲೈಂಗಿಕ ದೌರ್ಜನ್ಯ ಪ್ರಕರಣಗಳ ಬಗ್ಗೆ ಮಹಿಳೆಯರು, ವಿದ್ಯಾರ್ಥಿನಿಯರು ಸದಾ ಜಾಗೃತಗೊಳ್ಳಬೇಕು ಇಂತಹ ವ್ಯಕ್ತಿಗಳ ವಿರುದ್ದ ಪೊಲೀಸರಿಗೆ ಮಾಹಿತಿ ನೀಡಬೇಕೆಂದರು. ಪ್ರಾಂಶುಪಾಲ ಇ.ಎಂ. ದಯಾನಂದ್ ಮಾತನಾಡಿ ವಿದ್ಯಾರ್ಥಿಗಳಿಗೆ ದುಶ್ಚಟಗಳು ಸೇರಿದಂತೆ ಸಮಾಜ ಪಿಡುಗಳ ಬಗ್ಗೆ ಜಾಗೃತಿಹೊಂದುವ ಆವಶ್ಯಕತೆ ಇದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿ ಸಮೂಹ ಜಾಗೃತಿ ಮಾಹಿತಿಯನ್ನು ಅರಿತುಕೊಂಡು ಸಮಾಜದಲ್ಲಿ ಘಾತುಕ ವ್ಯಕ್ತಿಗಳಾಗದೆ ಉತ್ತಮ ವ್ಯಕ್ತಿಯಾಗುವಂತೆ ಸಲಹೆ ನೀಡಿದರು. ಶನಿವಾರಸಂತೆ ಎಸ್‌ಐ ಕೃಷ್ಣನಾಯಕ್ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಕಾಲೇಜು ಮಹಿಳಾ ದೌರ್ಜನ್ಯ ತಡೆ ಘಟಕದ ಅಧ್ಯಕ್ಷೆ ಶೋಭ, ಪ.ಪೂ. ಕಾಲೇಜು ಪ್ರಾಂಶುಪಾಲ ಅಶೋಕ್, ಹಿರಿಯ ಉಪನ್ಯಾಸಕ ಮೋಹನ್ ಉಪಸ್ಥಿತರಿದ್ದರು. . ಪಟ್ಟಣದ ನಾನಾ ವಿದ್ಯಾಸಂಸ್ಥೆ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.