Advertisement

ಶಂಕಿತ ನಕ್ಸಲರ ಭೇಟಿ ಪ್ರಕರಣ: ಪೊಲೀಸ್‌, ಎಎನ್‌ಎಫ್ ಅಧಿಕಾರಿಗಳಿಂದ ಮಾಹಿತಿ ಸಂಗ್ರಹ

01:01 AM Mar 25, 2024 | Team Udayavani |

ಸುಬ್ರಹ್ಮಣ್ಯ: ಕಡಬ ತಾಲೂಕಿನ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಐನೆಕಿದು ಗ್ರಾಮದ ಅರಣ್ಯದಂಚಿನ ಮನೆಗೆ ಶನಿವಾರ ಸಂಜೆ ವೇಳೆ ನಾಲ್ವರು ಶಂಕಿತರು ಭೇಟಿ ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಮತ್ತು ನಕ್ಸಲ್‌ ನಿಗ್ರಹ ದಳದವರು ವಿವಿಧ ಆಯಾಮಗಳಲ್ಲಿ ಮಾಹಿತಿ ಕಲೆ ಹಾಕುತ್ತಿದ್ದಾರೆ.

Advertisement

ಶನಿವಾರ ಸಂಜೆ 6.30ರ ಸುಮಾರಿಗೆ ಐನೆಕಿದು ಗ್ರಾಮದ ಅರಣ್ಯದಂಚಿನ ಮನೆಯೊಂದಕ್ಕೆ ಇಬ್ಬರು ಮಹಿಳೆಯರು, ಇಬ್ಬರು ಪುರುಷರು ಆಗಮಿಸಿದ್ದರು. ಸುಮಾರು 30-45 ನಿಮಿಷ ಅಲ್ಲಿದ್ದು, ಮನೆಯಿಂದ ಊಟ, ಅಕ್ಕಿ, ಸಕ್ಕರೆ ಪಡೆದು ಬಂದ ದಾರಿಯಲ್ಲಿ ಮರಳಿದ್ದರು.

ತನಿಖಾಧಿಕಾರಿಗಳ ಭೇಟಿ
ಶಂಕಿತರು ಭೇಟಿ ನೀಡಿದ ಮಾಹಿತಿ ತಿಳಿಯುತ್ತಲೇ ಸುಬ್ರಹ್ಮಣ್ಯ ಪೊಲೀಸರು ಹಾಗೂ ನಕ್ಸಲ್‌ ನಿಗ್ರಹ ದಳದ ಸಿಬಂದಿ ಆಗಮಿಸಿ ಆ ಮನೆಯವರಿಂದ ಮತ್ತು ಪರಿಸರದವರಿಂದ ಮಾಹಿತಿ ಕಲೆ ಹಾಕಿದರು. ರವಿವಾರ ಬೆಳಗ್ಗೆ ನಕ್ಸಲ್‌ ನಿಗ್ರಹ ದಳದ ಡಿವೈಎಸ್‌ಪಿ ರಾಘವೇಂದ್ರ, ಪುತ್ತೂರು ಉಪವಿಭಾಗ ಡಿವೈಎಸ್‌ಪಿ ಅರುಣ್‌ ನಾಗೇಗೌಡ, ಸುಬ್ರಹ್ಮಣ್ಯ ಪೊಲೀಸ್‌ ಠಾಣಾ ಉಪನಿರೀಕ್ಷಕ ಕಾರ್ತಿಕ್‌ ಸೇರಿದಂತೆ ನಕ್ಸಲ್‌ ನಿಗ್ರಹ ದಳದ ಅಧಿಕಾರಿಗಳು, ಸಿಬಂದಿ, ಗುಪ್ತದಳದ ಅಧಿಕಾರಿಗಳು ಭೇಟಿ ನೀಡಿ ಮಾಹಿತಿ ಪಡೆದರು.

ಕೂಜಿಮಲೆಗೆ ಭೇಟಿ ಕೊಟ್ಟಿದ್ದೆವು…
ಶನಿವಾರ ಸಂಜೆ ಮಳೆ ಹನಿಯುತ್ತಿದ್ದಾಗ ಅರಣ್ಯ ಪ್ರದೇಶದಿಂದ ಕಾಡಂಚಿನ ಮನೆಯ ಬಳಿಗೆ ಶಂಕಿತರು ಆಗಮಿಸಿದ್ದು, ಶಂಕಿತರು ನಡೆದುಕೊಂಡು ಬರುವ ವೇಳೆ ತಂಡಕ್ಕೆ ವ್ಯಕ್ತಿಯೊಬ್ಬರು ಸಿಕ್ಕಿದ್ದು, ಆತನ ಬಳಿ ಮಾತನಾಡಿ ಬಳಿಕ ಅಲ್ಲಿಂದ ರಸ್ತೆಯ ಬದಿಯ ಮನೆಯೊಂದಕ್ಕೆ ತೆರಳುವವರಿದ್ದರು. ಆದರೆ ಆ ಮನೆಯ ವಠಾರಕ್ಕೆ ಸೋಲಾರ್‌ ಬೇಲಿ ಅಳವಡಿಸಿದ್ದರಿಂದ ಮತ್ತೊಂದು ಮನೆಗೆ ಭೇಟಿ ನೀಡಿದರು ಎನ್ನಲಾಗಿದೆ.

ಸಾಮಾನ್ಯ ಬಣ್ಣದ ವಸ್ತ್ರ ಧರಿಸಿದ್ದ ಶಂಕಿತರು ತಲೆಗೆ ಬಟ್ಟೆ ಕಟ್ಟಿಕೊಂಡಿದ್ದು, ಮನೆಯ ಹೊರಗಡೆ ತಮ್ಮಲ್ಲಿದ್ದ ಗನ್‌ ಅನ್ನು ಗೋಡೆಯ ಬದಿಗಿಟ್ಟು “ನಾವು ಯಾರೆಂದು ನಿಮಗೆ ತಿಳಿದಿದೆಯಾ?’ ಎಂದು ಮನೆಯವರಲ್ಲಿ ಪ್ರಶ್ನಿಸಿದರು. ಕಳೆದ ವಾರ ನಮ್ಮ ತಂಡದ ಸದಸ್ಯರೇ ಕೂಜಿಮಲೆ ಎಸ್ಟೇಟ್‌ ಅಂಗಡಿಗೆ ಹೋಗಿದ್ದು ಎಂದೂ ತಿಳಿಸಿದರು. ಬಳಿಕ ಕೆಲವು ವಿಚಾರಗಳ ಬಗ್ಗೆ ಮನೆಯವರಲ್ಲಿ ಮಾತುಕತೆ ನಡೆಸಿದರು. ಮನೆಯ ಹೊರಗಿದ್ದ ಕೆಲಸದವರಲ್ಲೂ ಮಾತನಾಡಿದ್ದಾರೆ ಎಂದು ತಿಳಿದುಬಂದಿದೆ. ನಾವು ಬರುವ ವೇಳೆ ನಮ್ಮನ್ನು ವ್ಯಕ್ತಿಯೊಬ್ಬರು ನೋಡಿದ್ದು, ಅವರು ಹೊರಗೆ ಮಾಹಿತಿ ನೀಡಬಹುದು, ನಾವು ಇಲ್ಲಿ ತುಂಬ ಹೊತ್ತು ಇರುವುದು ಸರಿಯಲ್ಲ ಎಂದು ಹೇಳಿ ಅಲ್ಲಿಂದ ಅರಣ್ಯದತ್ತ ತೆರಳಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.

Advertisement

ಮುಂದುವರಿದ ಶೋಧ
ಕಳೆದ ಶನಿವಾರ ಸಂಜೆ ಕೂಜಿಮಲೆಗೆ ನಕ್ಸಲರು ಭೇಟಿ ನೀಡಿದ ಹಿನ್ನೆಲೆಯಲ್ಲಿ ನಕ್ಸಲ್‌ ನಿಗ್ರಹ ದಳ ಸೋಮವಾರ ಆರಂಭಿಸಿದ್ದ ಶೋಧ ಕಾರ್ಯ ರವಿವಾರವೂ ಮುಂದುವರಿದಿದೆ. ರವಿವಾರ ಶಂಕಿತರು ಭೇಟಿ ನೀಡಿದ ಅರಣ್ಯ ಪ್ರದೇಶದ ಆಸು ಪಾಸಿನಲ್ಲಿ ಶೋಧ ಕೈಗೊಳ್ಳಲಾಗಿದ್ದು, ಡ್ರೋಣ ಕೆಮರಾ ಬಳಸಿಯೂ ಶೋಧ ಕಾರ್ಯ ನಡೆಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next