Advertisement

ಶಾಸ್ತ್ರಿ ಜಲಾಶಯಕ್ಕೆ ಒಳಹರಿವು ಆರಂಭ

05:56 PM Jul 03, 2022 | Team Udayavani |

ಆಲಮಟ್ಟಿ: ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಮಳೆ ಆಗುತ್ತಿರುವುದರಿಂದ ಲಾಲ್‌ ಬಹಾದ್ದೂರ್‌ ಶಾಸ್ತ್ರಿ ಜಲಾಶಯಕ್ಕೆ ಶುಕ್ರವಾರದಿಂದ ಒಳಹರಿವು ಆರಂಭಗೊಂಡಿದೆ.

Advertisement

ವಾಡಿಕೆಯಂತೆ ಮಳೆಗಾಲ ಆರಂಭವಾಗಿ ತಿಂಗಳು ಗತಿಸಿದರೂ ಆಲಮಟ್ಟಿಯ ಶಾಸ್ತ್ರಿ ಜಲಾಶಯಕ್ಕೆ ಒಳ ಹರಿವು ಆರಂಭವಾಗಿರಲಿಲ್ಲ. ವರುಣನ್ನು ನಂಬಿ ರೈತರು ಬಿತ್ತನೆ ಮಾಡಬೇಕೆಂದರೂ ಸಮರ್ಪಕವಾಗಿ ರೋಹಿಣಿ ಹಾಗೂ ಮೃಗಶಿರಾ ಮಳೆ ಆಗದಿರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಬಿತ್ತನೆ ಮಾಡಲಿಲ್ಲ.

ಸಾಮಾನ್ಯವಾಗಿ ಮುಂಗಾರು ಹಂಗಾಮಿನ ಆರಂಭಿಕ ಮಳೆಗಳು ಸಕಾಲಕ್ಕೆ ಸುರಿದು ನಂತರದ ಅಲ್ಪಸ್ವಲ್ಪ ಸುರಿದರೂ ಮುಂಗಾರು ಬೆಳೆಗಳನ್ನು ರೈತರು ಬಿತ್ತನೆ ಮಾಡುತ್ತಿದ್ದರು. ಇನ್ನು ಕೃಷ್ಣಾ ನದಿಯನ್ನು ನಂಬಿದ ರೈತರು ಕೃಷ್ಣಾ ಮೇಲ್ದಂಡೆ ಯೋಜನೆ ವ್ಯಾಪ್ತಿಯ ಎಲ್ಲ ಕಾಲುವೆಗಳಿಗೆ ಸಕಾಲಕ್ಕೆ ಕಾಲುವೆಗಳ ಮೂಲಕ ಜಮೀನಿಗೆ ನೀರು ಹರಿಸುತ್ತಿದ್ದರಿಂದ ರೈತರಿಗೆ ಸ್ವಲ್ಪವಾದರೂ ಫಸಲು ಸಿಗುವಂತಾಗುತ್ತಿತ್ತು.

ಈ ಬಾರಿ ಶಾಸ್ತ್ರಿ ಜಲಾಶಯ ವ್ಯಾಪ್ತಿಯ ಜಿಲ್ಲೆಯಲ್ಲಿ ಹಾಗೂ ಕೃಷ್ಣೆಯ ಅಚ್ಚುಕಟ್ಟು ಪ್ರದೇಶದಲ್ಲಿ ಸಕಾಲಕ್ಕೆ ಮಳೆ ಆಗದೇ ಇರುವುದರಿಂದ ರೈತರನ್ನು ಚಿಂತೆಗೀಡು ಮಾಡಿತ್ತು.

ಅಧಿಕಾರಿಗಳ ಜಾಣ್ಮೆ: 2016-17ನೇ ಸಾಲಿನಲ್ಲಿ ಜಲಾಶಯದ ಹಿನ್ನೀರನ್ನು ವ್ಯಾಪಕವಾಗಿ ಬಳಸಿಕೊಂಡಿದ್ದರಿಂದ ಜಲಚರಗಳು ಸಾವಿಗಿಡಾಗಿದ್ದವು. ಇದರಿಂದ ಪಾಠ ಕಲಿತಂತಿರುವ ಕೆಬಿಜೆನ್ನೆಲ್‌ ಅಧಿಕಾರಿಗಳು ಶಾಸ್ತ್ರಿ ಜಲಾಶಯಕ್ಕೆ ಒಳ ಹರಿವು ಇಲ್ಲದಿದ್ದರೂ ರೈತರ ಜಮೀನಿಗೆ ಮುಂಗಾರು ಮತ್ತು ಹಿಂಗಾರು ಹಂಗಾಮಿನ ಬೆಳೆಗಳಿಗೆ ಕಾಲುವೆಗಳ ಮೂಲಕ ನೀರುಣಿಸಿಯೂ ಕುಡಿಯುವ ನೀರು ಹಾಗೂ ಜಲಚರಗಳಿಗಾಗಿ ಜು. 1ರವರೆಗೂ ಒಟ್ಟು 48.209 ಟಿಎಂಸಿ ಅಡಿ ನೀರನ್ನು ಜಲಾಶಯದಲ್ಲಿ ಸಂಗ್ರಹ ಮಾಡಿಕೊಂಡಿರುವದು ನಾಗರಿಕರ ಪ್ರಶಂಸೆಗೆ ಪಾತ್ರವಾಗಿದೆ.

Advertisement

ಕೃಷ್ಣಾ ಮೇಲ್ದಂಡೆ ಯೋಜನೆಯ ಅವಳಿ ಜಲಾಶಯಗಳಾಗಿರುವ ಆಲಮಟ್ಟಿಯ ಲಾಲ್‌ ಬಹಾದ್ದೂರ್‌ ಶಾಸ್ತ್ರಿ ಸಾಗರ ಮತ್ತು ನಾರಾಯಣಪುರದ ಬಸವಸಾಗರಗಳ ವ್ಯಾಪ್ತಿ ಸೇರಿದಂತೆ ವಿಜಯಪುರ, ಬಾಗಲಕೋಟೆ, ಕಲಬುರಗಿ, ಯಾದಗಿರಿ, ರಾಯಚೂರು ಸೇರಿದಂತೆ ಕೃಷ್ಣಾ ಮೇಲ್ದಂಡೆ ಯೋಜನ ವ್ಯಾಪ್ತಿಯ ಎಲ್ಲ ಫಲಾನುಭವಿ ಜಿಲ್ಲೆಗಳ ಸುಮಾರು 6.22 ಲಕ್ಷ ಹೆಕ್ಟೇರ್‌ ಪ್ರದೇಶ ನೀರಾವರಿಗೊಳಪಡಲಿದೆ.

ಈಗ ಆರಂಭವಾಗಿರುವ ಒಳ ಹರಿವಿನಲ್ಲಿ ವ್ಯಾಪಕವಾಗಿ ಏರಿಕೆಯಾದರೆ 8-10ದಿನಗಳಲ್ಲಿಯೇ ಜಲಾಶಯಗಳು ಭರ್ತಿಯಾಗಲಿವೆ ಎನ್ನುವುದು ರೈತರ ಲೆಕ್ಕಾಚಾರ. 519.60 ಮೀ. ಗರಿಷ್ಠ ಎತ್ತರದಲ್ಲಿ 123.081 ಟಿಎಂಸಿ ಅಡಿ ಗರಿಷ್ಠ ನೀರು ಸಂಗ್ರಹ ಸಾಮರ್ಥ್ಯದ ಆಲಮಟ್ಟಿ ಲಾಲ್‌ ಬಹಾದ್ದೂರ್‌ ಶಾಸ್ತ್ರಿ ಜಲಾಶಯದಲ್ಲಿ ಶನಿವಾರ 513.15 ಮೀ. ಎತ್ತರವಾಗಿ 48.489 ಟಿಎಂಸಿ ಅಡಿ ನೀರು ಸಂಗ್ರಹವಾಗಿದ್ದು, ಜಲಾಶಯಕ್ಕೆ 3,691ಕ್ಯೂಸೆಕ್‌ ನೀರು ಒಳ ಹರಿವು ಮತ್ತು ವಿವಿಧ ಕುಡಿಯುವ ನೀರಿನ ಯೋಜನೆಗಳಿಗೆ ಹಾಗೂ ಭಾಷ್ಪಿಭವನ ಸೇರಿ 451ಕ್ಯೂಸೆಕ್‌ ನೀರು ಹೊರ ಹೋಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next